ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಹಿನ್ನೆಲೆ, ಸಂಜಯನಗರ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಕಳ್ಳತನ ಬೆಳಕಿಗೆ ಬಂದಿದ್ದು, ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು 6.22 ಲಕ್ಷ ಬೆಲೆ ಬಾಳುವ105 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನ ಮತ್ತು ಹಣ ವಶಕ್ಕೆ ಪಡೆದಿದ್ದಾರೆ. ಹಗಲು ಮತ್ತು ರಾತ್ರಿ ಕಳ್ಳತನ ಮಾಡುತ್ತಿದ್ದ ಇಬ್ಬರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಒಬ್ಬ ಆರೋಪಿ ಡ್ರೈಫ್ರೂಟ್ಸ್ ಅಂಗಡಿಯಲ್ಲಿ ಹಣ ಮತ್ತು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದ.ಮತ್ತೊಬ್ಬ ಆರೋಪಿ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದಿದ್ದ. ಇಬ್ಬರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಗಸ್ತಿನಲ್ಲಿರಬೇಕಾದರೆ ಅನುಮಾನಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದರಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಹಸು ಮೇಯಿಸುತ್ತಿದ್ದ ಮಹಿಳೆ ಕಿವಿ ಕತ್ತರಿಸಿ ಓಲೆ ಕಳ್ಳತನ
ಹಸು ಮೇಯಿಸುತ್ತಿದ್ದ ಒಂಟಿ ಮಹಿಳೆ ಕಿವಿ ಕತ್ತರಿಸಿ ಓಲೆ ಕಳ್ಳತನ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೊನ್ನಸಂದ್ರದಲ್ಲಿ ನಡೆದಿದೆ. ಕಿವಿ ಕತ್ತರಿಸಿ 6 ಗ್ರಾಂನ ಓಲೆಯೊಂದಿಗೆ ದುಷ್ಕರ್ಮಿ ಪರಾರಿಯಾಗಿದ್ದಾನೆ. 4 ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಸಿದ್ದಗಂಗಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಾದಕ ವಸ್ತು ಸರಬರಾಜುಗಾರರ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮಾದಕ ವಸ್ತು ಪೂರೈಕೆದಾರರ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ರಾಮಮೂರ್ತಿನಗರ ಹಾಗೂ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಸಹಿತ 6 ಜನರನ್ನು ಸೆರೆ ಹಿಡಿದಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ 6 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 1.5 ಕೋಟಿ ರೂಪಾಯಿ ಮೌಲ್ಯದ ಕೊಕೇನ್, ಎಕ್ಸ್ಟಸಿ ಪಿಲ್ಸ್, ಯಾಬಾ, ಎಲ್ಸಿಡಿ ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ಕಾರು, ಬೈಕ್ ವಶಪಡಿಸಿಕೊಂಡಿದ್ದಾರೆ.
ಮನೆಯ ಬಾಗಿಲು ಮುರಿದು 1.21 ಲಕ್ಷ ರೂಪಾಯಿ ಕಳ್ಳತನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಅರಿಶಿನಕುಂಟೆ ಬಳಿಯ ಆದರ್ಶ ನಗರದಲ್ಲಿ ಮನೆಯ ಬಾಗಿಲು ಮುರಿದು 1.21 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾರೆ. ಯಂಟಗಾನಹಳ್ಳಿಯಲ್ಲಿರುವ ಅತ್ತೆ ನಂಜಮ್ಮ ಮನೆಗೆ ತೆರಳಿದ್ದಾಗ ಅನಂತರಾಮು ಮನೆಯಲ್ಲಿದ್ದ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಸದ್ಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಕಡಿಮೆ ಬೆಲೆಗೆ ತರಕಾರಿ ಕೊಟ್ಟಿಲ್ಲ ಎಂದು ಮಂಡಿ ಮಾಲೀಕನ ಮೇಲೆ ಹಲ್ಲೆ; 1.25 ಲಕ್ಷ ರೂಪಾಯಿ ದೋಚಿ ಪರಾರಿ
ತ್ರಿಪುರಾದಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಂಡಕ್ಕೆ ಗೃಹಬಂಧನ; ಆರೋಪ ನಿರಾಕರಿಸಿದ ಪೊಲೀಸ್
Published On - 1:18 pm, Tue, 27 July 21