ಬೆಂಗಳೂರು: ಎಫ್ಐಆರ್ ಆದರೂ ಬಂಧಿಸದಿದ್ದವರ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಲು ಬೆಂಗಳೂರು ನಗರದ ಎಲ್ಲಾ ಡಿಸಿಪಿಗಳಿಗೆ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೀಗೆ ಸೂಚಿಸಿದ್ದಾರೆ. ರೌಡಿಶೀಟರ್ ಬಬ್ಲಿ ಕೊಲೆ ಕೇಸ್ ನಂತರ ಆಯುಕ್ತರು ಹೀಗೆ ಸೂಚನೆ ನೀಡಿದ್ದಾರೆ.
ಕೋರಮಂಗಲದ ಯೂನಿಯನ್ ಬ್ಯಾಂಕ್ನಲ್ಲಿ ರೌಡಿ ಶೀಟರ್ ಬಬ್ಲಿ ಹತ್ಯೆಯಾಗಿತ್ತು. ಹತ್ಯೆಯಾದ ಬಬ್ಲಿ, ಕೊಲೆ ಯತ್ನ ಕೇಸ್ನಲ್ಲಿ ಆರೋಪಿಯಾಗಿದ್ದ. ಅಶೋಕನಗರ ಠಾಣೆಯಲ್ಲಿ ಬಬ್ಲಿ ವಿರುದ್ಧ ಕೇಸ್ ದಾಖಲಾಗಿತ್ತು. ಆದರೂ ಬಬ್ಲಿಯನ್ನು ಅಶೋಕನಗರ ಪೊಲೀಸರು ಬಂಧಿಸಿರಲಿಲ್ಲ. ಬಬ್ಲಿ ಹತ್ಯೆ ಕೇಸ್ ಹಿನ್ನೆಲೆಯಲ್ಲಿ ಎಲ್ಲಾ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಬೇಕು. ಎಫ್ಐಆರ್ ಆಗಿದ್ದರೂ ಬಂಧನವಾಗದ ಆರೋಪಿಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯದಲ್ಲಿ 48 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ಹೊರಬಿದ್ದಿದೆ. ವರ್ಗಾವಣೆಗೊಳಿಸಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಜೊತೆಗೆ, 15 ಡಿವೈಎಸ್‌ಪಿ, ಎಸಿಪಿಗಳ ವರ್ಗಾವಣೆಗೊಳಿಸಿ ಆದೇಶ ನೀಡಲಾಗಿದೆ.
ಶಿಕ್ಷಕಿ ಮೇಲೆ ಆಸಿಡ್ ದಾಳಿ; ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಶಿಕ್ಷಕಿ ಮೇಲೆ ಆಸಿಡ್ ದಾಳಿ ನಡೆಸಿದ 2014ರ ಪ್ರಕರಣ ಒಂದಕ್ಕೆ ಸಂಬಂಧಿಸಿ ಇಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷಕಿ ಮೇಲೆ ಆಸಿಡ್ ದಾಳಿ ಮಾಡಿದ್ದವನಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಿವಾಸಿ ಮಹೇಶ್ ಎಂಬಾತ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಿದ್ದ. ಇದೀಗ ಹೈಕೋರ್ಟ್ ಆಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ಶಿಕ್ಷೆ ತೀರ್ಪು ಎತ್ತಿ ಹಿಡಿದಿದೆ.
ಅಪರಾಧಿ ಮಹೇಶ್ 2014ರಲ್ಲಿ ಬೈಕ್‌ನಲ್ಲಿ ಬಂದು ಯುವತಿಗೆ ಆಸಿಡ್ ಎರಚಿದ್ದ. ಈ ಸಂಬಂಧ, ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿತ್ತು. ಈ ಬಗ್ಗೆ, ಆಸಿಡ್ ದಾಳಿ ಸಮಾಜಘಾತುಕ ಕೃತ್ಯ ಎಂದು ಹೈಕೋರ್ಟ್ ಹೇಳಿದೆ.
ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ ಕೋರ್ಟ್, ಯುವತಿಗೆ ಆರ್ಥಿಕ ನೆರವು ಒದಗಿಸುವಂತೆಯೂ ಸೂಚನೆ ನೀಡಿದೆ. ಈ ಬಗ್ಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾ.ಬಿ. ವೀರಪ್ಪ, ನ್ಯಾ.ವಿ. ಶ್ರೀಶಾನಂದ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಇದನ್ನೂ ಓದಿ: ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ
ಬೆಂಗಳೂರಿನಲ್ಲಿ ಶೂಟೌಟ್; ರೌಡಿಶೀಟರ್ ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಗುಂಡು, ಹತ್ತು ರೌಡಿಗಳು ಅಂದರ್
(Police Commissioner Kamal Pant on Bengaluru FIR Cases)
Published On - 9:51 pm, Sat, 24 July 21