ತಿರುವನಂತಪುರಂ: ಇಡಿ ಅಧಿಕಾರಿ ಎಂದು ಸುಳ್ಳು ಹೇಳಿ ಅನೇಕರನ್ನು ವಂಚಿಸಿರುವ ಘಟನೆಯ ಬಗ್ಗೆ ನಾವು ಆಗ್ಗಾಗ್ಗೆ ಕೇಳುತ್ತೇವೆ, ಆದರೆ ಇಬ್ಬರು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳು ಹಣದ ಆಸೆಗೆ ವ್ಯಾಪಾರಿಯೊಬ್ಬರನ್ನು ಕಿಡ್ನಾಪ್ ಮಾಡಲು ಪ್ರಯತ್ನಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ವ್ಯಾಪಾರಿಯೊಬ್ಬರನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಈಗಾಗಲೇ ಹಣ ವಂಚನೆ ಪ್ರಕರಣದಲ್ಲಿ ಅಮಾನತುಗೊಂಡ ಇಬ್ಬರು ಪೊಲೀಸರು ಮತ್ತು ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಮೂವರನ್ನು ಕಟ್ಟಕ್ಕಡ ಪೊಲೀಸರು ಬಂಧಿಸಿದ್ದಾರೆ. ಅಮಾನತುಗೊಂಡ ಪೊಲೀಸರಾದ ವಿನೀತ್ ಮತ್ತು ಕಿರಣ್, ಆಂಬ್ಯುಲೆನ್ಸ್ ಚಾಲಕ ಅರುಣ್ ಅವರನ್ನು ಬುಧವಾರ ಬಂಧಿಸಲಾಗಿದೆ.
ನೆಡುಮಂಗಡ ಪೊಲೀಸ್ ಠಾಣೆಯ 36 ವರ್ಷದ ವಿನೀತ್ ಮತ್ತು ಪೊನ್ಮುಡಿ ಪೊಲೀಸ್ ಠಾಣೆಯ ಕಿರಣ್ (36) ಹಣ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಮಾನತುಗೊಂಡಿದ್ದರು. ಪೊಲೀಸರ ಪ್ರಕಾರ, ಈ ಇಬ್ಬರಿಗೂ ಆರ್ಥಿಕವಾಗಿ ಸಂಕಷ್ಟವಿದ್ದು, ಈ ಕಾರಣಕ್ಕೆ ಇವರು ಇಂತಹ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕೆಲಸಕ್ಕೆ ಆಂಬ್ಯುಲೆನ್ಸ್ ಡ್ರೈವರ್ ಅರುಣ್ ಕೂಡ ಬೆಂಬಲ ನೀಡಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ: Kerala: ಬೀದಿನಾಯಿ ದಾಳಿಯಿಂದ ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಕೇರಳ ಸರ್ಕಾರ
ಇಡಿ ದಾಳಿಯ ನೆಪದಲ್ಲಿ ನೆಡುಮಂಗಡದಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ನಡೆಸುತ್ತಿರುವ ಉದ್ಯಮಿ ಮುಜೀಬ್ ಅವರನ್ನು ಅಪಹರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 24ರಂದು ಪೂವಾಚಲ್‌ನಲ್ಲಿ ಮುಜೀಬ್ ಅವರ ವಾಹನವನ್ನು ಪೊಲೀಸ್ ಎಂದು ಹೇಳಿಕೊಂಡು ಈ ಮೂವರು ತಡೆದಿದ್ದಾರೆ, ಅವರಲ್ಲಿ ಒಬ್ಬ ಮುಜೀಬ್‌ನ ಅವರ ಕೈಗೆ ಕೋಳ ಹಾಕಿದ್ದಾನೆ . ಇದರಿಂದ ಅನುಮಾನಗೊಂಡ ಮುಜೀಬ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಗಿದರೆ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದರೂ ಮುಜೀಬ್ ಸಹಾಯಕ್ಕಾಗಿ ಕೂಗುತ್ತಿದ್ದರು, ನಂತರ ಈ ಮೂವರು ಅವರ ಕಾರಿನಲ್ಲೇ ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ, ಆದರೆ ಅವರ ವಾಹನ ಕೆಟ್ಟು ನಿಂತಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮುಜೀಬ್ ಕೈಗೆ ಹಾಕಿದ್ದ ಕೋಳವನ್ನು ತೆಗೆದಿದ್ದಾರೆ. ಮುಜೀಬ್ ನೀಡಿದ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ