ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕಗಳನ್ನು ಪೊಲೀಸರು ನಗರದ ಲಂಡನ್ ಬ್ರಿಡ್ಜ್ ಬಳಿ ಜಪ್ತಿ ಮಾಡಿದ್ದಾರೆ. 84 ಜಿಲೆಟಿನ್ ಕಡ್ಡಿಗಳು, 4 ಎಲೆಕ್ಟ್ರಿಕ್ ಡಿಟೋನೇಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಮುರುಗನ್, ಆನಂದ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದರು. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ರೌಡಿಶೀಟರ್ ಕೊಲೆ ಯತ್ನ ಪ್ರಕರಣದ ಆರೋಪಿ ಬಂಧನ
ಆನೇಕಲ್: ರೌಡಿಶೀಟರ್ ಜೆಸಿಬಿ ನಾರಾಯಣಸ್ವಾಮಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹುಸ್ಕೂರಿನ ಕಾಂಗ್ರೆಸ್ ಮುಖಂಡನನ್ನು ಬೇಗೂರು ಠಾಣೆ ಪೊಲೀಸರು ಶುಕ್ರವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಕೊಲೆಗೆ ಯತ್ನಿಸಿದ್ದ ಗ್ಯಾಂಗ್ ಸದಸ್ಯ ದೇವ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ದೇವ್ ಹೇಳಿಕೆ ಆಧಾರದಲ್ಲಿ ಕಾಂಗ್ರೆಸ್ ಮುಖಂಡನನ್ನು ವಿಚಾರಿಸಿದರು. ಕೆಲವು ದಿನಗಳ ಹಿಂದೆ ಬೇಗೂರು ರಸ್ತೆಯಲ್ಲಿ ರೌಡಿಶೀಟರ್ ಜೆಸಿಬಿ ನಾರಾಯಣಸ್ವಾಮಿ ಹತ್ಯೆಗೆ ಯತ್ನ ನಡೆದಿತ್ತು. ನಾರಾಯಣಸ್ವಾಮಿ ಕೊಲೆ ಯತ್ನದ ವಿಡಿಯೊ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭೂ ಪರಿಹಾರ ಗೊಂದಲ: ರೈತ ಆತ್ಮಹತ್ಯೆ
ಶಿವಮೊಗ್ಗ: ರೈಲ್ವೆ ಯೋಜನೆಗೆ ಸ್ವಾಧೀನವಾಗಿದ್ದ ಭೂಮಿಗೆ ಕಡಿಮೆ ಪರಿಹಾರ ನೀಡಲು ಮುಂದಾದ ಹಿನ್ನೆಲೆಯಲ್ಲಿ ರೈತ ಮನನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾರೋಗೊಪ್ಪದಲ್ಲಿ ನಡೆದಿದೆ. ಮೃತನನ್ನು ಅರುಣ್ ನಾಯ್ಕ್ (28) ಎಂದು ಗುರುತಿಸಲಾಗಿದೆ. ಮೂರು ಎಕರೆ ಅಡಿಕೆ ತೋಟವನ್ನು ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ತೋಟಕ್ಕೆ ಇಲಾಖೆಯು ಪ್ರತಿ ಎಕರೆಗೆ ಕೇವಲ ₹ 5 ಲಕ್ಷ ಪರಿಹಾರ ಘೋಷಿಸಿತ್ತು. ಈ ಸಂಬಂಧ ದಾವಣಗೆರೆಯ ರೈಲ್ವೆ ಭೂಸ್ವಾಧೀನ ಪ್ರಾಧಿಕಾರ ಅಧಿಕಾರಿಗಳು ನೊಟೀಸ್ ನೀಡಿತ್ತು. ಆದರೆ ಈ ಪ್ರದೇಶದಲ್ಲಿ ಒಂದು ಎಕರೆ ಅಡಿಕೆ ತೋಟವು 30ರಿಂದ 40 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎಂದು ಮೃತ ರೈತ ಹೇಳಿದ್ದ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಗಿ ಖರೀದಿಗೆ ಲಂಚ: ಎಸಿಬಿ ವಶಕ್ಕೆ ನೌಕರ
ಬೆಂಗಳೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಗಿ ಖರೀದಿ ಕೇಂದ್ರದ ಹೊರಗುತ್ತಿಗೆ ನೌಕರ ಲಿಂಗಯ್ಯ ಎನ್ನುವವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿ ರೈತರಿಂದ ತಲಾ ₹ 1,500 ಲಂಚಕ್ಕೆ ಬೇಡಿಕೆಯಿಡುತ್ತಿದ್ದರು. ರಾಗಿ ಮಾರಾಟಕ್ಕೆ ಖರೀದಿ ಕೇಂದ್ರಕ್ಕೆ ತೆರಳಿದ್ದ ತಾವರೆಕೆರೆ ನಿವಾಸಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು.
ಮಂಗಳೂರಿನಲ್ಲಿ ಗ್ಯಾಸ್ ಲೀಕೇಜ್ ಆತಂಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಗ್ಯಾಸ್ ಲೀಕೇಜ್ ಆತಂಕ ಕಂಡುಬಂದಿದೆ. ಅರ್ಧ ಮಂಗಳೂರು ನಗರಕ್ಕೆ ಎಲ್ಪಿಜಿ ವಾಸನೆ ವ್ಯಾಪಿಸಿದೆ. ಆದರೆ ಎಲ್ಲಿ ಸೋರಿಕೆಯಾಗುತ್ತಿದೆ ಎನ್ನುವುದು ಈವರೆಗೆ ಪತ್ತೆಯಾಗಿಲ್ಲ. ನಗರದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bengaluru Crime: ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡುತ್ತಿದ್ದ ಆರೋಪಿ ಅರೆಸ್ಟ್