ಅದು ಆ ಪಟ್ಟಣದ ಹೃದಯ ಭಾಗದಲ್ಲಿರುವ ಲಾಡ್ಜ್. ಸುತ್ತಮುತ್ತ ಮಠ, ವಾಣಿಜ್ಯ ಮಳಿಗೆ, ವಸತಿ ಮನೆಗಳಿವೆ. ಆದ್ರೆ ಆ ಲಾಡ್ಜ್ ಗೆ ಯಾರಾದ್ರು ಪ್ರವಾಸಿಗರು ರೂಮ್ ಕೇಳಿಕೊಂಡು ಬಂದ್ರೆ ಲಾಡ್ಜ್ ಸಿಬ್ಬಂದಿ ರೂಮ್ ನೀಡ್ತಿರಲಿಲ್ಲಾ. ಬದಲಾಗಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗುವವರಿಗೆ ಮಾತ್ರ ಅಲ್ಲಿ ಕೋಣೆಗಳು ಸಿಗ್ತಿದ್ದವು. ಇನ್ನು ಲಾಡ್ಜ್ ನಲ್ಲಿ ದಂಧೆಕೋರರು ದಂಧೆಗೆ ಮಾಡಿಕೊಂಡಿದ್ದ ಏರ್ಪಾಡುಗಳನ್ನು ನೋಡಿ ಸ್ವತಃ ಪೊಲೀಸರು ಮತ್ತು ಒಡನಾಡಿ ಸಂಸ್ಥೆಯವರು ಬೆಚ್ಚಿಬಿದ್ದಿದ್ದಾರೆ.
ಹೊರಗಡೆ ನೋಡಿದ್ರೆ ವೆಂಕಟೇಶ್ವರ ಲಾಡ್ಜ್. ಪಕ್ಕದಲ್ಲಿಯೇ ರಾಘವೇಂದ್ರ ಸ್ವಾಮಿಗಳ ಮಠ. ಸುತ್ತಮುತ್ತಲು ಅನೇಕ ವಸತಿ ಮನೆಗಳು. ಜೊತೆಗೆ ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಓಡಾಡುತ್ತಿದ್ದರು. ಹಾಗಂತ ಈ ವೆಂಕಟೇಶ್ವರ ಲಾಡ್ದ್ ನಲ್ಲಿ ಪ್ರವಾಸಿಗರು, ಸಾಮಾನ್ಯ ಜನರು ಯಾರಾದರೂ ಹೋಗಿ ರೂಮ್ ಬಾಡಿಗೆ ಕೇಳಿದ್ರೆ ಲಾಡ್ಜ್ ಸಿಬ್ಬಂದಿ ಮಾತ್ರ ರೂಮ್ ಬಾಡಿಗೆಗೆ ನೀಡ್ತಿರಲಿಲ್ಲ. ಯಾಕಂದ್ರೆ ಇಲ್ಲಿ ಸಾಮಾನ್ಯ ಜನರಿಗೆ ರೂಮ್ ಸಿಗ್ತಿರಲಿಲ್ಲಾ. ರೂಮ್ ಸಿಗ್ತಿದ್ದದ್ದು ವೇಶ್ಯಾವಾಟಿಕೆ ದಂಧೆ ಮಾಡೋರಿಗೆ ಮಾತ್ರ.
ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ ಮೇಲೆ ಮೊನ್ನೆ ಗುರುವಾರ ಹೊಸಪೇಟೆ ಟೌನ್ ಪೊಲೀಸರು ಮತ್ತು ಮೈಸೂರಿನ ಒಡನಾಡಿ ಸಂಸ್ಥೆಯ ಸಿಬ್ಬಂದಿ ನಿನ್ನೆ ಜಂಟಿ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಅನೇಕರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು ಕಂಡುಬಂದಿದೆ.
ಲಾಡ್ಜ್ ನಲ್ಲಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ದಂಧೆಯಲ್ಲಿ ಭಾಗಿಯಾದವರು ಮತ್ತು ಲಾಡ್ಜ್ ನಲ್ಲಿದ್ದ ಒಟ್ಟು ಹತ್ತು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಲಾಡ್ಜ್ ನಲ್ಲಿ ಅಪ್ರಾಪ್ತ ವಯಸಿನ ಬಾಲಕಿಯರನ್ನು, ವಿಕಲಾಂಗ ಚೇತನರನ್ನು ಕೂಡಾ ಅಕ್ರಮ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು ಅನ್ನೋದು ಬೆಳಕಿಗೆ ಬಂದಿದೆ.
ಲಾಡ್ಜ್ ನಲ್ಲಿ ದಂಧೆಕೋರರು, ಪೊಲೀಸರು ದಾಳಿ ಮಾಡಿದ್ರೆ ತಪ್ಪಿಸಿಕೊಂಡು ಹೋಗಲು ಮಾಡಿಕೊಂಡಿದ್ದ ವ್ಯವಸ್ಥೆಯನ್ನು ನೋಡಿ ಸ್ವತ ಪೊಲೀಸರು ಮತ್ತು ಒಡನಾಡಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಹೌದು ಲಾಡ್ಜ್ ನ ಎಂಟ್ರಿಗೆ ಕ್ಯಾಷಿಯರ್ ಚೇಂಬರ್ ಇದ್ದು, ಕ್ಯಾಷಿಯರ್ ಕಾಲಿನ ಕೆಳಗೆ ಬಟನ್ ವ್ಯವಸ್ಥೆ ಮಾಡಲಾಗಿದೆ.
ಯಾರಾದರೂ ಬಂದ್ರೆ ಕ್ಯಾಷಿಯರ್ ಬಟನ್ ಒತ್ತುತ್ತಿದ್ದ. ಆಗ ಲಾಡ್ಜ್ ನ ನಾಲ್ಕನೆ ಮಹಡಿಯಲ್ಲಿನ ಅಲಾರಾಂ ಬೆಲ್ ನಲ್ಲಿ ದೇವರ ಸ್ತ್ರೂತ್ರಗಳು ಬರ್ತಿದ್ದವು. ಬೆಲ್ ಆದ್ರೆ, ಯಾರೋ ಬಂದಿದ್ದಾರೆ ಅನ್ನೋದು ಸಿಗ್ನಲ್. ಹೀಗಾಗಿ ದಂಧೆಯಲ್ಲಿ ತೊಡಗುತ್ತಿದ್ದ ಪುರುಷರು, ಟಿನ್ ಶೆಡ್ ಓಪನ್ ಮಾಡಿ, ಬೇರೆಡೆಯಿಂದ ತಪ್ಪಿಸೊಂಡು ಹೋಗಲು ವ್ಯವಸ್ಥೆ ಮಾಡಿದ್ದರೆ, ಮಹಿಳೆಯರು, ಕೆಲ ಅನುಪಯುಕ್ತ ವಸ್ತುಗಳನ್ನು ಇಡಬಹುದಾದ ಪುಟ್ಟ ಕೋಣೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು.
ನಿನ್ನೆ ಸಂಜೆ ಪೊಲೀಸರು ಮತ್ತು ಒಡನಾಡಿ ಸಂಸ್ಥೆಯವರು ದಾಳಿ ಮಾಡಿದಾಗ ಕೂಡಾ ಕೆಲ ಮಹಿಳೆಯರು ಪುಟ್ಟ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದು ಬೆಳಕಿಗೆ ಬಂದಿದೆ. ಸರಿಯಾಗಿ ಉಸಿರಾಡಲು ಆಗದಂತಹ ಸ್ಥಳದಲ್ಲಿ ದಂಧೆಕೋರರು ಮಹಿಳೆಯರನ್ನು ಬಚ್ಚಿಡುತ್ತಿದ್ದರು. ಇನ್ನು ಈ ದಂಧೆಕೋರರು ವಾಟ್ಸಪ್ ಮೂಲಕವೇ ಗಿರಾಕಿಗಳ ಜೊತೆ ವ್ಯವಹಾರ ಮಾಡುತ್ತಿದ್ದರಂತೆ.
ಯಾರಾದ್ರು ಲಾಡ್ಜ್ ಗೆ ಬರಬೇಕಾದ್ರೆ ಮೊದಲು ವಾಟ್ಸಪ್ ಕರೆ ಮಾಡಬೇಕು. ಅವರ ಪೂರ್ವಾಪರ ತಿಳಿದ ನಂತರವೇ ಲಾಡ್ಜ್ ನಲ್ಲಿ ಅವರಿಗೆ ಬರಲು ಅವಕಾಶವಿತ್ತಂತೆ. ಇನ್ನು ವಿಜಯನಗರ ಸೇರಿದಂತೆ ಹೊರರಾಜ್ಯ ಮತ್ತು ಹೊರ ದೇಶಗಳಿಂದ ಕೂಡಾ ಕೆಲ ಮಹಿಳೆಯರನ್ನು ದಂಧೆಕೋರರು ಅಕ್ರಮದಲ್ಲಿ ಕರೆದುಕೊಂಡು ಬಂದು ದಂಧೆಗೆ ದೂಡಿದ್ದರಂತೆ.
Also Read: ಭೋಪಾಲ್ -ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು
ಸದ್ಯ ವೆಂಕಟೇಶ್ವರ ಲಾಡ್ಜ್ ನಲ್ಲಿನ ಮಾಂಸ ದಂದೆಯ ಬಗ್ಗೆ ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾಡ್ಜ್ ಮಾಲೀಕ ಮತ್ತು ಲಾಡ್ಜ್ ನಡೆಸುತ್ತಿದ್ದವರ ವಿಚಾರಣೆಗೆ ಮುಂದಾಗಿದ್ದಾರೆ. ವಿಚಾರಣೆ ನಂತರ ದಂದೆಯ ಇನ್ನಷ್ಟು ಕರಾಳ ಮುಖಗಳು ಬಯಲಾಗುವ ಸಾಧ್ಯತೆಯಿದೆ. ಇನ್ನು ಈ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕದೇ ಇನ್ನಷ್ಟು ತನಿಖೆ ನಡೆಸಿದ್ರೆ, ದಂಧೆಯ ಇನ್ನಷ್ಟು ಕರಾಳತೆ ಬಯಲಿಗೆ ಬರುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:56 pm, Sat, 13 January 24