ಬೆಂಗಳೂರು: ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ವಿಕೃತ ಕಾಮಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಲಿಯಂ ಪ್ರಕಾಶ್ ಎಂದು ಗುರುತಿಸಲಾಗಿದೆ. ನಗರದ ಸೇಂಟ್ ಮೇರಿ ಚರ್ಚ್ನಲ್ಲಿ ಲೈಟ್ ಆರಿಸಲೆಂದು ಮಹಿಳೆ ಹೊರಗೆ ಬಂದಿದ್ದಾಗ ಆರೋಪಿಯು ಆಕೆಯ ಕುತ್ತಿಗೆಗೆ ಚಾಕು ಇಟ್ಟು, ಕುರ್ಚಿಯ ಮೇಲೆ ಕೂರಿಸಿದ್ದ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಮಹಿಳೆ ಕೂಗಾಡಿದಾಗ ಆಕೆಗೆ ಇರಿಯಲು ಯತ್ನಿಸಿದ್ದ. ಆದರೆ ಅದು ಮಹಿಳೆಯ ಬಟ್ಟೆಗೆ ಸಿಕ್ಕಿ ಹರಿದಿತ್ತು. ತಕ್ಷಣ ಆಕೆಯ ಪತಿ ಸ್ಥಳಕ್ಕೆ ಬಂದಿದ್ದರಿಂದ ಆರೋಪಿ ಓಡಿಹೋಗಿದ್ದ.
ಈ ವೇಳೆ ರಸ್ತೆಯಲ್ಲಿ ಗಣೇಶೋತ್ಸವ ಮೆರವಣಿಗೆ ಇದ್ದ ಕಾರಣ ಆರೋಪಿಯು ಮೆರವಣಿಗೆಯೊಂದಿಗೆ ಬೆರೆತು ಕರಗಿ ಹೋಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸತತ ಒಂದು ತಿಂಗಳು ಹುಡುಕಾಡಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಈತ ಇನ್ನೂ ಹಲವು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಅರೋಪಿ ವಿಚಾರಣೆ ನಡೆಯುತ್ತಿದೆ.
ಕೆಪಿಟಿಸಿಎಲ್ ನೇಮಕಾತಿ ಅಕ್ರಮ: ಇಬ್ಬರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ನಗರ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋಕಾಕ ತಾಲ್ಲೂಕು ಲೋಳಸೂರ ಗ್ರಾಮದ ಯಲ್ಲಪ್ಪ ರಕ್ಷಿ, ಚಿಕ್ಕೋಡಿ ತಾಲ್ಲೂಕು ಜಾಗನೂರ ಗ್ರಾಮದ ದೊಡಮನಿ ಬಂಧಿತರು. ಈ ಇಬ್ಬರ ಬಂಧನದೊಂದಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದವರ ಸಂಖ್ಯೆಯು 22ಕ್ಕೆ ಏರಿದಂತೆ ಆಗಿದೆ. ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್ ಉಪಕರಣ ತೆಗೆದುಕೊಂಡು ಹೋಗಿದ್ದ ಆರೋಪ ನಾಗಪ್ಪ ಅವರ ಮೇಲಿದೆ. ಯಲ್ಲಪ್ಪ ಎಂಬಾತ ನಾಗಪ್ಪನಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ದ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪೋಷಕರು ಬೈದರೆಂದು ಮನೆ ಬಿಟ್ಟು ಹೋದ ಬಾಲಕಿ
ಬೆಂಗಳೂರು: ಕಡಿಮೆ ತೆಗೆದಿದ್ದಕ್ಕೆ ಪೋಷಕರು ಬೈದರೆಂದು 9ನೇ ತರಗತಿ ಓದುತ್ತಿದ್ದ ಬಾಲಕಿ ಮನೆಬಿಟ್ಟು ಹೋಗಿರುವ ಘಟನೆ ನಂದಿನಿ ಲೇಔಟ್ನಲ್ಲಿ ನಡೆದಿದೆ. ನಿನ್ನೆ ಸಂಜೆ ಮನೆಯಿಂದ ಟ್ಯೂಷನ್ಗೆ ತೆರಳಿದ್ದ ಬಾಲಕಿ ನಂತರ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಮೆಜೆಸ್ಟಿಕ್ನಿಂದ ಮಂಗಳೂರು ಬಸ್ ಹತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನಲ್ಲಿ ಬಾಲಕಿಯನ್ನು ಹುಡುಕಲು ಪೊಲೀಸರ ನಾಲ್ಕು ತಂಡಗಳು ಶ್ರಮಿಸುತ್ತಿವೆ.
ಗುಬ್ಬಿ: ಪತಿಯಿಂದಲೇ ಪತ್ನಿ, ಮಗನ ಹತ್ಯೆ
ಗುಬ್ಬಿ: ಪತಿಯೇ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಘಟನ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯಾ (26), ಜೀವನ್ (4) ಕೊಲೆಯಾದವರು. ಆರೋಪಿಯನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಇರಬಹುದು ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದಾಗಿ ನಾಲ್ಕು ವರ್ಷದ ಹಿಂದೆ ಕಾವ್ಯಾ ಪತಿಯನ್ನು ತೊರೆದು, ಮನೆ ಬಿಟ್ಟು ಹೋಗಿದ್ದರು. ರಾಜಿ-ಪಂಚಾಯಿತಿಯ ನಂತರ ನಾಲ್ಕು ದಿನಗಳ ಹಿಂದಷ್ಟೇ ವಾಪಸ್ ಬಂದಿದ್ದರು. ಕ್ಷುಲ್ಲಕ ಕಾರಣಕ್ಕೆ ಮತ್ತೊಮ್ಮೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಹಾರೆ ಕೊಲಿನಿಂದ ಆಕೆಯ ತಲೆಗೆ ಮೋಹನ್ ಕುಮಾರ್ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Published On - 9:23 am, Wed, 19 October 22