ಮಧ್ಯಪ್ರದೇಶದ ಶಾಲೆಯಲ್ಲಿ ರ‍್ಯಾಗಿಂಗ್; ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ
ಸಂತ್ರಸ್ತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಪ್ರಕಾರ, ವಿದ್ಯಾರ್ಥಿಯನ್ನು ಮೊದಲು ಮೂವರು ಹುಡುಗರು ರ‍್ಯಾಗಿಂಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಇಡೀ ತರಗತಿಯಲ್ಲಿ ಮೆರವಣಿಗೆ ಮಾಡಲಾಯಿತು.ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಇಡೀ ತರಗತಿಯ ಮುಂದೆಯೇ ಆತನನ್ನು ಥಳಿಸಿದ್ದಾರೆ ಎಂದಿದ್ದಾರೆ.
ಜಬಲ್‌ಪುರ ಫೆಬ್ರುವರಿ 02: ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬನ ಜತೆ ಸಹಪಾಠಿಗಳು ಅನುಚಿತವಾಗಿ ವರ್ತಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿಯ ತಂದೆ ಮಧ್ಯಪ್ರದೇಶದ (Madhya Pradesh) ಜಬಲ್ಪುರದ ಗ್ವಾರಿಘಾಟ್ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಪ್ರಕಾರ, ವಿದ್ಯಾರ್ಥಿಯನ್ನು ಮೊದಲು ಮೂವರು ಹುಡುಗರು ರ‍್ಯಾಗಿಂಗ್ (Ragging) ಮಾಡಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಇಡೀ ತರಗತಿಯಲ್ಲಿ ಮೆರವಣಿಗೆ ಮಾಡಲಾಯಿತು.
ದೂರಿನಲ್ಲಿ ಹೇಳಿದ್ದೇನು?
ತನ್ನ ಮಗ ಎಂದಿನಂತೆ ಅಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಎಂದು ಸಂತ್ರಸ್ತ ವಿದ್ಯಾರ್ಥಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಇಡೀ ತರಗತಿಯ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅವರು ಆತನ ಜೊತೆ ಅನುಚಿತವಾಗಿ ವರ್ತಿಸಿ, ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದರು.
ಈ ವಿದ್ಯಾರ್ಥಿಯ ಕುಟುಂಬದವರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದಾಗ ಅವರು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿಲ್ಲ. “ಈ ಘಟನೆಯ ನಂತರ, ವಿದ್ಯಾರ್ಥಿ ಶಾಲೆಗೆ ಹೋಗಲು ತುಂಬಾ ಹೆದರುತ್ತಿದ್ದರು. ಇದರೊಂದಿಗೆ ಇತರ ವಿದ್ಯಾರ್ಥಿಗಳನ್ನೂ ಬಟ್ಟೆ ಬಿಚ್ಚಿಸಿ ಅವಮಾನಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ತನಿಖೆ ಆರಂಭ
ಸಂತ್ರಸ್ತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಮೌರ್ಯ ಮಾತನಾಡಿ, ಸಂತ್ರಸ್ತ ವಿದ್ಯಾರ್ಥಿಯ ತಂದೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರ ತಂಡ ಶಾಲೆಗೆ ತೆರಳಿ ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದೆ. ಅಲ್ಲದೆ, ಆರೋಪಿ ವಿದ್ಯಾರ್ಥಿಗಳ ಪೋಷಕರನ್ನು ವಿಚಾರಣೆಗಾಗಿ ಸಂಪರ್ಕಿಸಲಾಗುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ