Rape Case: 10 ರೂ. ಆಮಿಷವೊಡ್ಡಿ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ
ಆ ಬಾಲಕಿ ವಾಸಿಸುವ ಪ್ರದೇಶದಲ್ಲಿಯೇ ವಾಸಿಸುವ 76 ವರ್ಷದ ಕುಂಜ್ರಾಮ್ ಪ್ರತಿ ಬಾರಿ ಆಕೆಗೆ 10 ರೂ. ನೀಡುವುದಾಗಿ ಆಮಿಷವೊಡ್ಡಿ ತನ್ನ ಮನೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ.
ಬಲೋದಬಜಾರ್: ಛತ್ತೀಸ್‌ಗಢದ ಬಲೋದಬಜಾರ್ ಜಿಲ್ಲೆಯಲ್ಲಿ (Balodabazar District) 13 ವರ್ಷದ ಬಾಲಕಿಯ ಮೇಲೆ 76 ವರ್ಷದ ವೃದ್ಧ ಮತ್ತು ಇನ್ನೋರ್ವ ವ್ಯಕ್ತಿ ಸೇರಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ (Rape) ನಡೆದಿದ್ದು, ಶನಿವಾರ ಈ ಘಟನೆ ಬೆಳಕಿಗೆ ಬಂದಿದೆ. ನಿಮ್ಮ ಮಗಳನ್ನು ಅವರು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು, ಆಕೆಯನ್ನು ವಿಚಾರಿಸಿ ನೋಡಿ ಎಂದು ಮಹಿಳೆಯೊಬ್ಬರು ಆ ಬಾಲಕಿಯ ಪೋಷಕರನ್ನು ಎಚ್ಚರಿಸಿದ್ದಾರೆ. ಆಗ ಈ ವಿಷಯ ಅವರಿಗೆ ಗೊತ್ತಾಗಿದೆ.
ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಕುಂಜ್ರಾಮ್ ವರ್ಮಾ (76) ಮತ್ತು ರಮೇಶ್ ವರ್ಮಾ (47) ಅವರನ್ನು ಜುಲೈ 31ರಂದು ಬಂಧಿಸಲಾಗಿದೆ ಎಂದು ಬಲೋದಬಜಾರ್ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ (ಎಸ್‌ಎಚ್‌ಒ) ಯದುಮಣಿ ಸಿದರ್ ತಿಳಿಸಿದ್ದಾರೆ. ಶನಿವಾರ ಆ ಬಾಲಕಿಯ ಪಕ್ಕದ ಮನೆಯ ಮಹಿಳೆಯೊಬ್ಬರು ಆ ಬಾಲಕಿ ಆರೋಪಿಗಳ ಮನೆಯಿಂದ ಹೊರಗೆ ಬರುತ್ತಿರುವುದನ್ನು ಕಂಡು ಆಕೆಯ ಪೋಷಕರಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ ಬಾಲಕಿ ವಾಸಿಸುವ ಪ್ರದೇಶದಲ್ಲಿಯೇ ವಾಸಿಸುವ ಕುಂಜ್ರಾಮ್ ಪ್ರತಿ ಬಾರಿ ಆಕೆಗೆ 10 ರೂ. ನೀಡುವುದಾಗಿ ಆಮಿಷವೊಡ್ಡಿ ತನ್ನ ಮನೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ. ಕುಂಜ್ರಾಮ್ಗೆ ಪರಿಚಿತರಾಗಿರುವ ರಮೇಶ್ ಕೂಡ ಆಕೆಗೆ 10 ರೂ. ನೀಡುವ ಹಣದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, 3 ಶಂಕಿತರ ಬಂಧನ
“ಅವರಿಬ್ಬರ ಮನೆಯಿಂದ ಬಾಲಕಿ ಹೊರಗೆ ಬರುತ್ತಿರುವುದನ್ನು ನೆರೆಹೊರೆಯ ಮಹಿಳೆಯೊಬ್ಬರು ಗಮನಿಸಿದಾಗ, ಆಕೆ ಆ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಆಕೆಯ ಮನೆಯವರು ವಿಚಾರಿಸಿದ ನಂತರ ಬಾಲಕಿ ತನಗಾದ ಕಷ್ಟವನ್ನು ವಿವರಿಸಿದ್ದಾಳೆ. ಬಳಿಕ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.