ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 100 ಕೋಟಿ ಮೌಲ್ಯದ ಡ್ರಗ್ಸ್‌ನ್ನು ಸೀಜ್ ಮಾಡಿದ್ದಾರೆ. ತೆಲಂಗಾಣ ಮೂಲದ 45 ವರ್ಷದ ವ್ಯಕ್ತಿಯೋರ್ವ ಬೆಂಗಳೂರು ಏರ್‌ಪೋರ್ಟ್‌ನಿಂದ ದೆಹಲಿಗೆ ಡ್ರಗ್ಸ್ ಸಾಗಿಸಲು ಯತ್ನಿಸಿದ್ದನು. ಈ ವೇಳೆ DRI ಅಧಿಕಾರಿಗಳು ಅನುಮಾನಗೊಂಡು ಆತನನ್ನು ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಗಿದೆ. ಕೂಡಲೆ ಆತನನ್ನು ಬಂಧಿಸಿ, ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ
ಬೆಂಗಳೂರು: ಅಕ್ರಮವಾಗಿ ವಿದೇಶದಿಂದ ಕಳ್ಳ ಸಾಗಾಣೆ ಮಾಡುತ್ತಿದ್ದ ಚಿನ್ನವನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 13 ಲಕ್ಷ 11 ಸಾವಿರದ 82 ರೂಪಾಯಿ ಮೌಲ್ಯದ 249 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನ ಸೋಗಿನಲ್ಲಿ ಕುವೈತ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದ ವ್ಯಕ್ತಿಯೋರ್ವ ಚಿನ್ನ ಸಾಗಣೆ ಮಾಡುತ್ತಿದ್ದನು.
ಆರೋಪಿ ಪ್ಲಾಸ್ಟಿಕ್ ಟೇಪ್ ಒಳ ಭಾಗದಲ್ಲಿ ಚಿನ್ನವಿಟ್ಟು ಮೇಲೆ ಟೇಪ್ ಹಾಕಿದ್ದನು. ಅನುಮಾನಗೊಂಡ ತಪಾಸಣೆ ನಡೆಸಿದ ವೇಳೆ ಚಿನ್ನ ಪತ್ತೆಯಾಗಿದೆ.
ಮೇಕೆಗಳನ್ನ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ರಾಮನಗರ: ಮೇಕೆಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಇಲಿಯಾಸ್, ಸಾದೀಕ್ ಬಂಧಿತ ಆರೋಪಿಗಳು. ಆರೋಪಿಗಳು ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ರಾಜು ಎಂಬ ರೈತನಿಗೆ ಸೇರಿದ 15 ಮೇಕೆಗಳನ್ನ ಕಳ್ಳತನ ಮಾಡಿದ್ದರು.
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ 11 ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಚಿತ್ರದುರ್ಗ: ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಪೊಲೀಸರು ಮೃತ ಮೂವರ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಲಾರಿ ಚಾಲಕನಿಗೆ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯ ಯಾದಗಿರಿ ಹೊರವಲಯದ ವಡಗೇರ ಕ್ರಾಸ್ ಬಳಿ ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳು ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳು ಆಟೋದಲ್ಲಿ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದರು.
ಈ ವೇಳೆ ನಾಯಿಗಳು ಅಡ್ಡ ಬಂದಿದ್ದಕ್ಕೆ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಗಾಯಗೊಂಡ ಅನಿಲ್, ರುಕ್ಸಾನಾ, ಶೋಭಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ಸಾವು, ಮತ್ತಿಬ್ಬರಿಗೆ ಗಾಯ
ಮಂಡ್ಯ: ಲಾರಿ ಮತ್ತು ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಬಳಿ ನಡೆದಿದೆ. ಕ್ಯಾಂಟರ್‌ನಲ್ಲಿದ್ದ ತಮಿಳುನಾಡಿನ ಮುರುಗೇಶ್, ಕೃಷ್ಣವೇಲು ಇಬ್ಬರಿಗೆ ಗಾಯಗಳಾಗಿದ್ದು, ಅವರಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ಯಾಂಟರ್ನಲ್ಲಿ ಕುರಿಗಳನ್ನು ಸಾಗಿಸುತ್ತಿದ್ದು, ಅಪಘಾತದ ರಭಸಕ್ಕೆ ಕ್ಯಾಂಟರ್‌ನಲ್ಲಿದ್ದ ಐದು ಕುರಿಗಳು ಸಾವನ್ನಪ್ಪಿವೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 11:00 pm, Fri, 26 August 22