ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದ್ದಕ್ಕೆ ರಾಬರಿ ಸ್ಕೆಚ್ ತಪ್ಪಿರುವ ಸ್ವಾರಸ್ಯಕರ ಪ್ರಸಂಗ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ನಡೆದಿದೆ. ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯನ್ನ ಲೋಟಿ ಮಾಡಲು ಪ್ಲಾನ್ ಮಾಡಿದ್ದ ಕಳ್ಳರು ಅದೇ ಬಿಲ್ಡಿಂಗ್ ಮೇಲ್ಭಾಗದ ಮತ್ತೊಂದು ಶಾಪ್ನಿಂದ ಒಳನುಗ್ಗಲು ಸ್ಕೆಚ್ ಹಾಕಿದ್ದರು. ಅದರಂತೆ, ಮೇಲ್ಭಾಗದ ಅಂಗಡಿಯ ಕಾಂಕ್ರಿಟ್ ನೆಲವನ್ನ ಕೊರೆಯುವ ಪ್ಲಾನ್ ಮಾಡಿದ್ದರು.
ಅಂತೆಯೇ, ಆಗಸ್ಟ್ 2 ರ ರಾತ್ರಿ ಬೈಕ್ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಅಂಗಡಿಯ ಸ್ಟ್ರಾಂಗ್ ರೂಮ್ನ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮೆಷಿನ್ ಬಳಸಿ ಕೊರೆಯೋಕೆ ಮುಂದಾದರು. ಆದರೆ, ಮೆಷೀನ್ನ ಬಿಟ್ ಸಿಲುಕಿಕೊಂಡು ಇದು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಖದೀಮರಿಗೆ ಇದನ್ನ ಬಿಡಿಸಲು ಆಗಲಿಲ್ಲ
ಹಾಗಾಗಿ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದು ಕಂಪ್ಯೂಟರ್ ಶಾಪ್ ಆಗಿದ್ದ ಮೇಲಿನ ಅಂಗಡಿಯಲ್ಲಿದ್ದ ಎರಡು ಸಾವಿರ ರೂಪಾಯಿ ನಗದು, ಸಿಸಿ ಕ್ಯಾಮಾರಾ ಹಾಗೂ ಡಿವಿಆರ್ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಖಾಗಿ ಬಲೆ ಬೀಸಿದೆ.