ಬೆಂಗಳೂರು: ಉದ್ಯಮಿ ಶ್ರೀನಿವಾಸ ನಾಯ್ಡು ಕಾರು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಕ್ಟೋಬರ್ 19ರ ತಡರಾತ್ರಿ ಐಷಾರಾಮಿ ಕಾರಿಗೆ ಬೆಂಕಿ ಇಟ್ಟಿದ್ದರು. ಸದಾಶಿವನಗರದ ಸಪ್ತಗಿರಿ ಅಪಾರ್ಟ್ಮೆಂಟ್ನಲ್ಲಿ ನಿಲ್ಲಿಸಿದ್ದ ರೇಂಜ್ ರೋವರ್ ಕಾರಿಗೆ ಬೆಂಕಿ ಇಟ್ಟಿದ್ದರು. ಇದೀಗ ಐವರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಆದ್ರೆ ತನಿಖಾ ಹಂತದಲ್ಲೇ ಕೇಸ್ ವಾಪಸ್ ಪಡೆದುಕೊಳ್ತಿನಿ ಅಂತ ಶ್ರೀನಿವಾಸ್ ನಾಯ್ಡು ಮುಂದಾಗಿದ್ದಾರೆ. ದಿ.ಡಾನ್ ಪುತ್ರನೇ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಾಕಿಸಿದ್ದ ಅನ್ನೊ ಅನುಮಾನ ಹೆಚ್ಚಾಗಿತ್ತು. ಹಣದ ವ್ಯವಹಾರದಲ್ಲಿ ಜಗಳ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಸದ್ಯ ಪ್ರಕರಣದಲ್ಲಿ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಒಂದು ಕಡೆ ಪೊಲೀಸ್ರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ ದೂರುದಾರನೇ ಕೇಸ್ ಬೇಡ ಅಂತ ದುಂಬಾಲು ಬಿದ್ದಿದ್ದಾರೆ. ಪ್ರಕರಣ ದೊಡ್ಡದಾಗುತ್ತಿದ್ದಂತೆ ರಾಜಿಗೆ ಮುಂದಾಗಿದ್ದಾರೆ.
ಚಾಕು ಇರಿದು ಯುವಕನ ಬರ್ಬರ ಕೊಲೆ
ಬೆಂಗಳೂರಿನಲ್ಲಿ ಚಾಕು ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 22 ವರ್ಷದ ಸಿದ್ಧಿಕ್ ಕೊಲೆಯಾದ ಯುವಕ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಕೊಲೆ ಆರೋಪಿ ಅಬಾಜ್ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಅಬಾಜ್ ಸಿದ್ಧಿಕ್ ಇಬ್ಬರು ಶಾಲಾದಿನಗಳಿಂದಲೇ ಸ್ನೇಹಿತರು. ನೆನ್ನೆ ತಡರಾತ್ರಿ ಕುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಬಾಜ್ ತನ್ನ ಸ್ನೇಹಿತ ಸಿದ್ಧಿಕ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೊಲೆಗೆ ಅಸಲಿ ಕಾರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪಿಗಳ ಬಂಧನ
ಇನ್ನು ಮತ್ತೊಂದೆಡೆ ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ದರೋಡೆಕೋರರ ಬಂಧನವಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ. ಪ್ರವೀಣ್(23), ಸಾಗರ್(20), ಮಹೇಂದ್ರ(23) ಬಂಧಿತ ಆರೋಪಿಗಳು.
ವಿಜಯಲಕ್ಷ್ಮಿ ಬಡಾವಣೆಯಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚುಹಾಕುವ ವೇಳೆ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ವಿವಿಧ ರೀತಿಯ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಪರಾರಿಯಾದ ಜಾನ್ ಪೀಟರ್ ಹಾಗೂ ಪ್ರಶಾಂತ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
KSRTC ಬಸ್ ಡಿಕ್ಕಿ, ರಸ್ತೆ ದಾಟುತ್ತಿದ್ದ ಮಹಿಳೆ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ರಾ.ಹೆ.4ರಲ್ಲಿ ಅಪಘಾತವೊಂದು ಸಂಭವಿಸಿದೆ. KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ಪಾವಗಡ ಮೂಲದ ರಾಮಕ್ಕ(45) ಮೃತ ದುರ್ದೈವಿ. ಕೆಎಸ್ಆರ್‌ಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡಿ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ
ಇಬ್ಬರು ದರೋಡೆಕೋರರನ್ನು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಪೊಲೀಸರು ಬಂಧಿಸಿದ್ದಾರೆ. ದರ್ಶನ್, ಪುನೀತ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಬೈಕ್, ಮೊಬೈಲ್‌ಗಳು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಬಿಹಾರ ಮೂಲದ ಕಾರ್ಮಿಕರನ್ನ ಅಡ್ಡಗಟ್ಟಿ ಬೈಕ್ ಹಾಗೂ ಮೊಬೈಲ್ ಕಿತ್ತುಗೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ತೀರ್ಥಹಳ್ಳಿ: ಸಂಪೂರ್ಣ ಸುಟ್ಟುಹೋದ ಕಾರು, ವ್ಯಕ್ತಿಯ ಕಳೇಬರ ಪತ್ತೆ
Published On - 9:53 am, Wed, 27 October 21