ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಹಲ್ಲೆ, ಕೊಲೆಗೆ ಯತ್ನ

ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಸಹಪಾಠಿಗಳು ಹಾಗೂ ಇತರರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ (ಜನವರಿ 29) ರಂದು ಘಟನೆ ನಡೆದಿದ್ದು, ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಹಲ್ಲೆ, ಕೊಲೆಗೆ ಯತ್ನ
ಸಾಂದರ್ಭಿಕ ಚಿತ್ರ

Updated on: Jan 31, 2024 | 11:12 AM

ಉಡುಪಿ, ಜನವರಿ 31: ದ್ವಿತೀಯ ಪಿಯುಸಿ ವಿದ್ಯಾರ್ಥಿ (2nd PUC Student) ಮೇಲೆ ಸಹಪಾಠಿಗಳು ಹಾಗೂ ಇತರರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉಡುಪಿ (Udupi) ನಗರ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ರಹ್ಮಾವರದ ವಿದ್ಯಾ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿ ಪ್ರತೀಕ್ (17) ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ಖರೀದಿಸಿದ್ದನು. ಈ ಬೈಕ್​​​ ಅನ್ನು ಸಹಪಾಠಿ ಸುಹಾಸ್​ ಕದ್ದಿದ್ದಾನೆಂದು ಪ್ರತೀಕ್​ ಆರೋಪ ಮಾಡಿದ್ದಾನೆ. ಪ್ರತೀಕ್​​ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾನೆ ಎಂದು ಸಹಾಸ್ ನಿಗಿ ನಿಗಿ ಕೆಂಡ ಕಾರುತ್ತಿದ್ದನು. ​

ಇದೇ ಕೋಪದಲ್ಲಿ ಜನವರಿ 28 ರ ಸಂಜೆ ಸುಹಾಸ್​ ಮತ್ತು ಆತನ ಸ್ನೇಹಿತ ತರುಣ್ ಕರೆ ಮಾಡಿ, ಪ್ರತೀಕ್​ನನ್ನು ಅವಾಚ್ಯವಾಗಿ ನಿಂದಿಸಿದರು. ಬಳಿಕ ಸುಹಾಸ್ ಜನವರಿ 29 ರಂದು ಮಧ್ಯಾಹ್ನ 12:15ರ ಸುಮಾರಿಗೆ ಪ್ರತೀಕ್‌ನನ್ನು ಎಂಜಿಎಂ ಮೈದಾನಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿಗೆ ಬಂದ ಪ್ರತೀಕ್‌ಗೆ ಸುಹಾಸ್, ಮೋನಿಶ್, ತರುಣ್ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದರು. ಇದೆ ವೇಳೆ ತರುಣ್ ಪ್ರತೀಕ್‌ನ ಹೊಟ್ಟೆ ಮತ್ತು ಎಡ ಸೊಂಟಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಹೆಂಡತಿಯನ್ನು ಜೊತೆಗೆ ಕಳಿಸ್ತಿಲ್ಲ ಎಂದು ಮಾವನ ಮೇಲೆ ಹಲ್ಲೆ ಮಾಡಿ ಕೊಂದೇಬಿಟ್ಟ ಅಳಿಯ

ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 143, 147, 148, 323, 324, 504, 506, 307, ಮತ್ತು 149 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ