ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ನಮ್ಮ ರಾಜ್ಯದಲ್ಲೇ 5 ವರ್ಷಗಳ ಹಿಂದೆ ನಡೆದ ಮತ್ತು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಧಿಮಂತ ಪತ್ರಕರ್ತೆ, ಸಾಮಾಜಿಕ ಹೋರಾಟಗಾತಿ, ಎಡಪಂಥೀಯ ಧೋರಣೆಗಳನ್ನು ಪ್ರತಿಪಾದಿಸುತ್ತಿದ್ದ ಹಾಗೂ ಕನ್ನಡದಲ್ಲಿ ಟ್ಯಾಬ್ಯಾಯ್ಡ್ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದ ಪಿ ಲಂಕೇಶ್ ಅವರ ಮಗಳು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ನೋಡೋಣ. ಹಿಂದೂ-ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತಿದ್ದರು ಮತ್ತು ಅವರ ಬರಹಗಳಲ್ಲಿ ಅದು ಹಾಸು ಹೊಕ್ಕಿತ್ತು ಎನ್ನುವ ಕಾರಣಕ್ಕಾಗೇ ಅವರನ್ನು ಕೊಲ್ಲಲಾಯಿತು ಎಂಬ ಆರೋಪವಿದೆ. 5 ವರ್ಷ ಕಳೆದರೂ ಪ್ರಕರಣವಿನ್ನೂ ಇತ್ಯರ್ಥಗೊಂಡಿಲ್ಲ. ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆಯಾದರೂ ಇನ್ನೂ ಕೆಲ ಜನ ಪೊಲೀಸರ ಕೈಗೆ ಸಿಕ್ಕಿಲ್ಲ. ಗೌರಿ ಅವರನ್ನು ಸೆಪ್ಟೆಂಬರ್ 5, 2017 ರಂದು ಅವರ ಮನೆಯ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಅಸಲಿಗೆ ಅವತ್ತು ನಡೆದಿದ್ದೇನು?
ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆ ಅಂತ ನಮ್ಮೆಲ್ಲರಿಗೆ ಗೊತ್ತು. ಲಂಕೇಶ್ ಅವರು ಕೂಡ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು. ಆದರೆ, ಅವರ ಮಗಳು ಶಿಕ್ಷಕರ ದಿನಾಚರಣೆಯಂದೇ ಹಂತಕರ ಗುಂಡಿಗೆ ಬಲಿಯಾಗಿದ್ದು ಮಾತ್ರ ದುರಂತ. ಅವತ್ತು ಗೌರಿ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದವರು ಬೀಗ ತೆರೆದು ಒಳಹೋಗುವ ಹಂತದಲ್ಲಿದ್ದಾಗ ಬೈಕ್ ಮೇಲೆ ಬಂದು ಅವರಿಗಾಗಿ ಹೊಂಚು ಹಾಕುತ್ತಿದ್ದ ಹಂತಕರು ಅವರ ಮೇಲೆ ಗುಂಡು ಹಾರಿಸಿದರು. ತನಿಖಾಧಿಕಾರಿಗಳ ಪ್ರಕಾರ ಒಟ್ಟು 7 ಗುಂಡುಗಳು ಅವರ ದೇಹ ಹೊಕ್ಕಿದ್ದವು. ಅವರ ತಲೆ, ಕುತ್ತಿಗೆ ಮತ್ತು ಎದೆಯ ಮೇಲೆ ಗುಂಡು ತಾಕಿದ್ದವು. ಏನಾಗುತ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ತನಿಖೆಯಲ್ಲಿ ಕಂಡುಬಂದ ಅಂಶಗಳ ಪ್ರಕಾರ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಆವುಗಳಂಥ ಬಲಪಂಥೀಯ ಸಂಸ್ಥೆಗಳ ಸದಸ್ಯರು ಹತ್ಯೆಯ ರೂವಾರಿಗಳಾಗಿದ್ದರು. ಗೌರಿ ಅವರ ಮನೆ ಮುಂದಿನ ಸಿಸಿಟಿವಿ ಯಲ್ಲಿ ಹಂತಕರು ಬಳಸಿದ ಬೈಕ್ ನ ನೋಂದಣಿ ಸಂಖ್ಯೆ ಸೆರೆಯಾಗಿರಲಿಲ್ಲ.
ಲಭ್ಯವಿದ್ದ ಪುಟೇಜ್ ನಿಂದ ಹಂತಕರ ಗುರುತು ಹಿಡಿಯುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಅವರು ಕಪ್ಪುವರ್ಣದ ವಸ್ತ್ರ, ಮತ್ತು ಅದೇ ಬಣ್ಣದ ಹೆಲ್ಮೆಟ್ ಗಳನ್ನು ಧರಿಸಿದ್ದರು. ಮುಖ ಗುರುತು ಹಿಡಿಯಲು ಉಪಯೋಗಿಸುವ ಌಪ್ ಗಳು ಕೂಡ ವಿಫಲವಾದವು. ಸೆಪ್ಟೆಂಬರ್ 8, 2017ರಂದು, ಆಗಿನ ಕರ್ನಾಟಕ ಸರ್ಕಾರವು ಹಂತಕರ ಬಗ್ಗೆ ಸುಳಿವು ನೀಡಿದವರಿಗೆ ರೂ. 10 ಲಕ್ಷ ನಗದು ಬಹುಮಾನ ಘೋಷಿಸಿತು.
ಗೌರಿಯನ್ನು ಕೊಂದಿದ್ದು ಯಾಕೆ?
ಆಗಲೇ ಹೇಳಿದಂತೆ ಗೌರಿಯವರು ತಮ್ಮ ತಂದೆಯಂತೆ ನಿರ್ಭೀತ ಪತ್ರಕರ್ತೆಯಾಗಿದ್ದರು. ಜೇಡವನ್ನು ಜೇಡ, ಕತ್ತೆಯನ್ನು ಕತ್ತೆ ಅಂತ ಹೇಳುವ ದಿಟ್ಟತನ ಅವರಲ್ಲಿತ್ತು. ನೇರ ಮಾತುಗಾರಿಕೆಗೆ ಹೆಸರಾಗಿದ್ದ ಅವರು ವ್ಯವಸ್ಥೆಯ ವಿರುದ್ಧ, ಸರ್ಕಾರದ ವಿರುದ್ಧ ಟೀಕೆ ಮಾಡಲು, ಖಂಡಿಸಲು ಹಿಂಜರಿಯುತ್ತಿರುಲಿಲ್ಲ. ಅಧಿಕಾರದಲ್ಲಿರುವವರಿಗೆ ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು. ಅವರನ್ನು ಲೈವ್ ವೈರ್ ಜರ್ನಲಿಸ್ಟ್ ಎಂದು ಕರೆಯಲಾಗುತಿತ್ತು. ಅವರ ಈ ಮನೋಭಾವವನ್ನೇ ಬಲಪಂಥೀಯ ಸಂಸ್ಥೆಗಳು ಹಿಂದೂ ವಿರೋಧಿ ಧೋರಣೆ ಅಂತ ಭಾವಿಸಿ ಹತ್ಯೆಗೈಯಲು ಮುಂದಾದರು ಅಂತ ಹೇಳಲಾಗಿದೆ.
ಪ್ರಕರಣದ ಈಗ ಯಾವ ಹಂತದಲ್ಲಿದೆ?
ತನಿಖೆಗೆ ರಾಜ್ಯ ಸರ್ಕಾರ ರೂಪಿಸದ್ದ ವಿಶೇಷ ತನಿಖಾ ದಳ (ಎಸ್ ಐಟಿ) ರಚಿಸಿತ್ತು. ದಕ್ಷ ಅಧಿಕಾರಿಗಳನ್ನೊಳಗೊಂಡಿದ್ದ ತಂಡವು 2018 ರಲ್ಲಿ ಮೊದಲಿಗೆ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿತು. ಆಗಸ್ಟ್ 30, 2015ರಲ್ಲಿ ಹತ್ಯೆಯಾದ ಪ್ರೊಫೆಸರ್ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಎಮ್ ಎಮ್ ಕಲಬುರ್ಗಿ ಅವರ ಪ್ರಕರಣದಲ್ಲೂ ಇವರ ಕೈವಾಡವಿತ್ತು ಎಂದು ಹೇಳಲಾಗಿದೆ. ಜೂನ್ 2018ರಲ್ಲಿ ಪರಶುರಾಮ್ ವಾಗ್ಮೋರೆ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಕೊಂದಿದ್ದು ತಾನೇ ಅಂತ ನ್ಯಾಯಾಲದಲ್ಲಿ ತಪ್ಪೊಪ್ಪಿಕೊಂಡ.
ಆದರೆ ಕೊಲೆಯಲ್ಲಿ ಅವನೊಬ್ಬನೇ ಭಾಗಿಯಾಗಿಲ್ಲ. ಎಸ್ ಐ ಟಿ ಸಲ್ಲಿಸಿರುವ ವರದಿಯ ಪ್ರಕಾರ ಇದುವರೆಗೆ 16 ಜನರನ್ನು ಬಂಧಿಸಲಾಗಿದೆ ಮತ್ತು ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಇವರಲ್ಲಿ ಪ್ರಮುಖ ಆರೋಪಿಗಳೆಂದರೆ ಅಮೋಲ್ ಕಾಳೆ (ಹತ್ಯೆಯ ರೂವಾರಿ ಅಥವಾ ಮಾಸ್ಟರ್ ಮೈಂಡ್), ಪರಶುರಾಮ್ ವಾಗ್ಮೋರೆ, (ಗುಂಡು ಹಾರಿಸಿದವ) ಸುಜಿತ್ ಕುಮಾರ್ (ಹಂತಕನನ್ನು ನಿಯೋಜಿಸಿದವ) ಮತ್ತು ಗಣೇಶ ಮಿಸ್ಕಿನ್ (ಬೈಕ್ ಓಡಿಸಿದವ).
ತಲೆ ಮರೆಸಿಕೊಂಡವರಲ್ಲಿ ಒಬ್ಬನಾಗಿರುವ ಮಹಾರಾಷ್ಟ್ರದ ಹೃಷಿಕೇಶ್ ದೇವ್ಡಿಕರ್ ತನ್ನ ಬಂಧನಕ್ಕೆ ಕೆಳ ನ್ಯಾಯಾಲಯವೊಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿ ಸಲ್ಲಿಸಿದ ಮನವಿಯನ್ನು ರಾಜ್ಯ ಹೈಕೋರ್ಟ್ ನಿನ್ನೆ (ಸೋಮವಾರ,ಅಕ್ಟೋಬರ್ 24, 2022) ತಿರಸ್ಕರಿಸಿದೆ.