ಪ್ರತ್ಯೇಕ ಘಟನೆ: ಯುವಕನ ಕಾಟ ತಾಳಲಾರದೆ ಬಾಲಕಿ ಆತ್ಮಹತ್ಯೆ, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ

| Updated By: ವಿವೇಕ ಬಿರಾದಾರ

Updated on: Feb 25, 2024 | 2:03 PM

ಪ್ರೀತಿಸು, ಪ್ರೀತಿಸು ಅಂತ ಯುವಕ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದಿದ್ದನು. ಈ ವಿಚಾರ ತಿಳಿದು ಬಾಲಕಿ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರು ಕೂಡ ಬೆಂಬಿಡದೆ ಯುವಕ ಪೀಡಿಸುತ್ತಿದ್ದನು. ಇದರಿಂದ ನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದು ಘಟನೆಯಲ್ಲಿ ಮನೆಯವರ ವಿರೋಧದ ನಡುವೆ ಯುವಕ ಪ್ರೀತಿಸಿದವಳನ್ನು ಮದುವೆಯಾಗಿದ್ದಾನೆ. ಮದುವೆ ನಂತರ ಪತ್ನಿಯಿಂದ ದೂರವಾಗಿ ಮತ್ತೊಂದು ಮದುವೆಯಾಗಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಪ್ರತ್ಯೇಕ ಘಟನೆ: ಯುವಕನ ಕಾಟ ತಾಳಲಾರದೆ ಬಾಲಕಿ ಆತ್ಮಹತ್ಯೆ, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ
ಮೃತ ವರ್ಷಿಣಿ (ಬಲಚಿತ್ರ), ಮೃತ ವಿಶಾಲಾಕ್ಷಿ (ಎಡಚಿತ್ರ)
Follow us on

ಶಿವಮೊಗ್ಗ, ಫೆಬ್ರವರಿ 25: ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ (Girl) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರ್ಷಿಣಿ (14 ವರ್ಷ) ಮೃತ ಬಾಲಕಿ. ಪ್ರೀತಿಸುವಂತೆ (Love) ಯುವಕ ತ್ಯಾಗರಾಜ್ ವರ್ಷಿಣಿಗೆ​ ನಿತ್ಯ ಕಾಡುತ್ತಿದ್ದನು. ಈ ವಿಚಾರ ತಿಳಿದ ವರ್ಷಿಣಿ ಪೋಷಕರು ಎರಡು ತಿಂಗಳ ಹಿಂದೆ ತ್ಯಾಗರಾಜ್​​ಗೆ ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ತ್ಯಾಗರಾಜ್​ ಪ್ರೀತಿಸುವಂತೆ ಪೀಡಿಸುವುದನ್ನು ಮುಂದುವರೆಸಿದ್ದನು.

ತ್ಯಾಗರಾಜ್​ನ ಕಾಟ ತಾಳಲಾರದೆ ವರ್ಷಿಣಿ ನಿನ್ನೆ (ಫೆ.24) ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದ್ಥರು ತ್ಯಾಗರಾಜ್​ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ

ಚಿತ್ರದುರ್ಗ: ಪತಿಯ ಮತ್ತೊಂದು ವಿವಾಹದ ವಿಚಾರ ತಿಳಿದು ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ. ವಿಶಾಲಾಕ್ಷಿ (21) ಮೃತ ದುರ್ದೈವಿ. ವಿಶಾಲಾಕ್ಷಿ-ತಿಪ್ಪೇಸ್ವಾಮಿ ಪ್ರೀತಿಸಿ ಒಂದು ವರ್ಷದ ಹಿಂದೆ ಅಷ್ಟೆ ಮದುವೆಯಾಗಿದ್ದರು. ತಿಪ್ಪೇಸ್ವಾಮಿ ಚಾಲಕನಾಗಿದ್ದು, ವಿಶಾಲಾಕ್ಷಿಯ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮದುವೆ ನಂತರ ವಿಶಾಲಾಕ್ಷಿ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಳು.

ಇದನ್ನೂ ಓದಿ: ಧಾರವಾಡ: ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ

ವಿಶಾಲಾಕ್ಷಿ ಅನ್ಯಜಾತಿಯವಳು ಎಂದು ತಿಪ್ಪೇಸ್ವಾಮಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯು ತಿಪ್ಪೇಸ್ವಾಮಿ ವಿಶಾಲಾಕ್ಷಿಯನ್ನು ಮದುವೆಯಾಗಿದ್ದ. ಆದರೆ ತಿಪ್ಪೇಸ್ವಾಮಿ ಮದುವೆ ನಂತರ ವಿಶಾಲಾಕ್ಷಿಯಿಂದ ದೂರವಾಗಿದನು. ಪತಿ ಕೈಬಿಟ್ಟ ನಂತರ ವಿಶಾಲಾಕ್ಷಿ ಕೂನಬೇವು ಗ್ರಾಮದಲ್ಲಿನ ತವರು ಮನೆ ಸೇರಿ, ಓದನ್ನು ಮುಂದುವರೆಸಿದ್ದಳು. ಇತ್ತ ತಿಪ್ಪೇಸ್ವಾಮಿಗೆ ಕುಟುಂಬಸ್ಥರು ಮತ್ತೊಂದು ಮದುವೆ ಮಾಡಿದರು. ಈ ವಿಚಾರ ತಿಳಿದಿ ವಿಶಾಲಾಕ್ಷಿ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ