ಪ್ರೀತಿಸಿದವ ಬೇರೆಯೊಬ್ಬಳ ಜೊತೆ ಮದುವೆ; ಮನನೊಂದ ಯುವತಿ ನೇಣಿಗೆ ಶರಣು
ಓದಿ ಉದ್ಧಾರ ಆಗುವ ಸಂದರ್ಭದಲ್ಲೇ ಕೋಟೆನಾಡು ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದ ಯುವತಿಯೊಬ್ಬಳು ಪ್ರೇಮಲೋಕದಲ್ಲಿ ಮಿಂದಿದ್ದಳು. ಕೊನೆಗೂ ಆ ಪ್ರೀತಿಯೇ ಯುವತಿಯನ್ನು ಬಲಿ ಪಡೆದಿದೆ. ಹಾಗಾದರೆ, ಅಸಲಿಗೆ ಯುವತಿಯ ಸಾವಿಗೆ ಕಾರಣವೇನು ಅಂತೀರಾ? ಈ ಸ್ಟೋರಿ ಓದಿ.
ಚಿತ್ರದುರ್ಗ, ಫೆ.25: ಕೋಟೆನಾಡು ಚಿತ್ರದುರ್ಗ(Chitradurga) ತಾಲೂಕಿನ ಕೂನಬೇವು ಗ್ರಾಮದ ವಿಶಾಲಾಕ್ಷಿ(21) ಎಂಬುವವರು ಚಿತ್ರದುರ್ಗ ನಗರದ ಜಿಟಿಟಿಸಿ ಡಿಪ್ಲೋಮಾ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಅದೇ ಕೂನಬೇವು ಗ್ರಾಮದ ಚಾಲಕ ತಿಪ್ಪೇಸ್ವಾಮಿ(24) ಎಂಬಾತ ನಿತ್ಯ ಆಕೆಯ ಬೆನ್ನು ಬಿದ್ದು ಪ್ರೀತಿಸು ಎಂದು ಕಾಡಿದ್ದನು. ಕೊನೆಗೂ ಮನಸೋತ ವಿಶಾಲಾಕ್ಷಿ, ತಿಪ್ಪೇಸ್ವಾಮಿ ಜೊತೆ ಪ್ರೀತಿಯಲ್ಲಿ ಮುಳುಗಿ ಓಡಾಟ ನಡೆಸಿದ್ದಳು. ತಿಪ್ಪೇಸ್ವಾಮಿ ಎಸ್ಟಿ (ನಾಯಕ) ಸಮುದಾಯಕ್ಕೆ ಸೇರಿದ್ದರೆ, ವಿಶಾಲಾಕ್ಷಿ ಎಸ್ಸಿ (ಮಾದಿಗ) ಸಮುದಾಯಕ್ಕೆ ಸೇರಿದ್ದಳು. ಹೀಗಾಗಿ, ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧವಿತ್ತು.
ಈ ಹಿನ್ನಲೆ ಕಳೆದ ಆರು ತಿಂಗಳ ಹಿಂದೆ ಇಬ್ಬರೂ ಊರು ತೊರೆದು ನಾಯಕನಹಟ್ಟಿ ಬಳಿಯ ಚೌಡಮ್ಮ ದೇಗುಲದಲ್ಲಿ ಮದುವೆ ಆಗಿದ್ದರು. ಆದ್ರೆ, ವಿಷಯ ತಿಳಿದ ಪೋಷಕರು ಈ ಜೋಡಿಯನ್ನು ಹಿಡಿದು ತಂದು ಪಂಚಾಯತಿ ನಡೆಸಿದ್ದರು. ತಿಪ್ಪೇಸ್ವಾಮಿ ಪೋಷಕರು ವಿಶಾಲಾಕ್ಷಿ ಕೊರಳಿಗೆ ಕಟ್ಟಿದ ಅರುಶಿಣ ಕೊಂಬು ಕಿತ್ತೆಸೆದು ಬರುವಂತೆ ಹೇಳಿ ಬೇರ್ಪಡಿಸಿದ್ದರು. ವಿಶಾಲಾಕ್ಷಿ ತನ್ನ ಪೋಷಕರ ಜೊತೆ ತೆರಳಿ ವಾಸವಾಗಿದ್ದಳು. ಅಲ್ಲದೆ ಮತ್ತೆ ಜಿಟಿಟಿಸಿ ಕಾಲೇಜಿಗೆ ಹೋಗುತ್ತಿದ್ದಳು. ಆದ್ರೆ, ಕಳೆದ ಗುರುವಾರ ತಿಪ್ಪೇಸ್ವಾಮಿ ಮತ್ತೊಬ್ಬಳ ಜತೆ ಮದುವೆ ಆಗಿರುವುದು ತಿಳಿದಿದೆ. ಸೋಷಿಯಲ್ ಮಿಡಿಯಾದಲ್ಲಿ ಮದುವೆ ಫೋಟೊಗಳು ಕಂಡು ಕಂಗಾಲಾಗಿದ್ದಾಳೆ. ಅಂತೆಯೇ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ:ತೆಲಂಗಾಣದಲ್ಲಿ ಮತ್ತೊಂದು ದಾರುಣ, ಪ್ರಿಯಕರ ಮೋಸ ಮಾಡಿದ್ದಕ್ಕೆ ಯುವತಿ ನೇಣಿಗೆ ಶರಣು
ಇನ್ನು ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು, ಗ್ರಾಮಸ್ಥರು ಜಮಾಯಿಸಿದ್ದಾರೆ. ತಿಪ್ಪೇಸ್ವಾಮಿ ಮತ್ತು ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಕೇವಲ ಜಾತಿಕಾರಣಕ್ಕೆ ತಿಪ್ಪೇಸ್ವಾಮಿ ಜೊತೆ ವಿವಾಹವಾಗಿದ್ದ ವಿಶಾಲಾಕ್ಷಿಯನ್ನು ಬೇರ್ಪಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ತಿಪ್ಪೇಸ್ವಾಮಿಗೆ ಸ್ವಜಾತಿಯ ಯುವತಿ ಜತೆ ಮದುವೆ ಮಾಡಿದ್ದಾರೆ. ಹೀಗಾಗಿ, ಅರಿಶಿಣಕೊಂಬನ್ನೇ ತಾಳಿಯೆಂದು, ತಿಪ್ಪೇಸ್ವಾಮಿಯೇ ಪತಿ ಎಂದು ನಂಬಿಕೊಂಡಿದ್ದ ವಿಶಾಲಾಕ್ಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದಲ್ಲ, ನಾಳೆ ತಿಪ್ಪೇಸ್ವಾಮಿ ತನ್ನ ಬಳಿಗೆ ಬಂದು ಬಾಳ್ವೆ ಮಾಡುತ್ತಾನೆಂದೇ ವಿಶಾಲಾಕ್ಷಿನಂಬಿಕೊಂಡಿದ್ದಳು. ಆದ್ರೆ, ತಿಪ್ಪೇಸ್ವಾಮಿ ಮತ್ತು ಕುಟುಂಬದವರ ದರ್ಪ, ವಂಚನೆಯಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ. ಹೀಗಾಗಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬುದು ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಕಾಡಿಸಿ ಪೀಡಿಸಿ ಯುವತಿಯ ಒಲಿಸಿಕೊಂಡು ಮದುವೆ ಆಗಿದ್ದ ತಿಪ್ಪೇಸ್ವಾಮಿ ಕೊನೆಗೂ ವಿಶಾಲಾಕ್ಷಿಯ ಬಲಿ ಪಡೆದಿದ್ದಾನೆ. ತುರುವನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ