ನವದೆಹಲಿ: ಪಂಜಾಬ್ನಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಾಂತ್ರಿಕನ ಸಲಹೆಯಂತೆ ಯುವಕನೊಬ್ಬ 4 ವರ್ಷದ ಬಾಲಕನನ್ನು ನರಬಲಿ ನೀಡಿದ್ದಾನೆ. ಪಕ್ಕದ ಮನೆಯ 4 ವರ್ಷದ ಬಾಲಕನನ್ನು ಮನೆಗೆ ಕರೆದುಕೊಂಡು ಬಂದು, ಆತನ ತಲೆ ಕತ್ತರಿಸಿ, ರಕ್ತ ಕುಡಿದಿದ್ದಾನೆ. ಈ ಭೀಕರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆ ಯುವಕನನ್ನು ಬಂಧಿಸಲಾಗಿದೆ. ಈ ರೀತಿಯ ಕೃತ್ಯಕ್ಕೆ ಪ್ರಚೋದನೆ ನೀಡಿದ ಮಾಂತ್ರಿಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಸೋಮವಾರ ರಾತ್ರಿ ಪಕ್ಕದ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮನೆಗೆ ಕರೆದೊಯ್ದ ಯುವಕ ಆ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆತನ ಮನೆಯಲ್ಲಿದ್ದ ರಕ್ತಸಿಕ್ತವಾಗಿದ್ದ ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಪಂಜಾಬ್ನ ಖನ್ನಾದಲ್ಲಿ ಈ ನರಬಲಿ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಐದು ದಶಕಗಳ ಹಿಂದೆ ಅಮೆರಿಕದಲ್ಲಿ16-ವರ್ಷದ ಯುವತಿಯನ್ನು ವಾಮಾಚಾರದ ಭಾಗವಾಗಿ ನರಬಲಿ ನೀಡಲಾಗಿತ್ತೆ?
ಇಲ್ಲಿ ಮಾಂತ್ರಿಕರ ಸಲಹೆಯ ಮೇರೆಗೆ ಯುವಕನೊಬ್ಬ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 4 ವರ್ಷದ ಮಗುವನ್ನು ಕತ್ತು ಸೀಳಿ ಕೊಂದಿದ್ದಾನೆ. ಆತ ಮಗುವಿನ ರಕ್ತವನ್ನೂ ಕುಡಿದಿರುವ ಘಟನೆ ಪಂಜಾಬ್ನ ಖನ್ನಾ ಜಿಲ್ಲೆಯ ಸಿಟಿ ಖನ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಸೋಮವಾರ ತಡರಾತ್ರಿ ಮಗುವನ್ನು ಅಪಹರಿಸಿದ್ದ. ಮಂಗಳವಾರ ಬೆಳಗ್ಗೆ ಆ ಮಗುವಿನ ತಂದೆ-ತಾಯಿಗೆ ಈ ವಿಷಯ ತಿಳಿಯಿತು. ಇದಾದ ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ಶವವನ್ನು ಹೊರತೆಗೆದು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಅರವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಸಮಾಜದಲ್ಲಿ ಶಕ್ತಿಯುತ ವ್ಯಕ್ತಿಯಾಗಬೇಕೆಂದು ಬಯಸಿದ್ದ. ಅಮರನಾಗಬೇಕೆಂದರೆ ಏನು ಮಾಡಬೇಕೆಂದು ಆತ ಮಾಂತ್ರಿಕರ ಬಳಿ ಸಲಹೆ ಕೇಳಿದ್ದ. ಆ ಮಾಂತ್ರಿಕ ಮಗುವನ್ನು ಬಲಿ ನೀಡಿದರೆ ಈ ಸಾಧನೆ ಸಾಧ್ಯ ಎಂದು ಹೇಳಿದ್ದರು ಎಂದು ಆ ಯುವಕ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಸಾಧನೆಗಳನ್ನು ನರಬಲಿಯಿಂದ ಮಾತ್ರ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದ ಮಾಂತ್ರಿಕನೇ ನರಬಲಿಯ ವಿಧಾನವನ್ನು ಹೇಳಿಕೊಟ್ಟಿದ್ದರು. ಇದಾದ ಬಳಿಕ ಆ ಯುವಕ ಮಗುವನ್ನು ಬಲಿ ಕೊಟ್ಟಿದ್ದ.
ಇದನ್ನೂ ಓದಿ: ಅತ್ಯಾಚಾರ, ಕೊಲೆ ಪ್ರಕರಣ: 40 ವರ್ಷಗಳ ವಿಚಾರಣೆಯ ನಂತರ 75 ವರ್ಷದ ವ್ಯಕ್ತಿಗೆ ಸುಪ್ರೀಂಕೋರ್ಟ್ ಜಾಮೀನು
ಕೊಲೆಯಾದ 4 ವರ್ಷದ ಮಗು ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಅಕ್ಕ-ಅಣ್ಣನ ಜೊತೆ ಮಲಗಿತ್ತು. ಆದರೆ ಮಧ್ಯರಾತ್ರಿಯ ನಂತರ ಆರೋಪಿ ಬಂದು ಆ ಮಗುವನ್ನು ರಹಸ್ಯವಾಗಿ ಕರೆದುಕೊಂಡು ಹೋಗಿದ್ದ. ಪೋಷಕರು ಬೆಳಗ್ಗೆ ಎದ್ದು ನೋಡಿದಾಗ ಮಗು ನಾಪತ್ತೆಯಾಗಿರುವ ವಿಷಯ ತಿಳಿದಿತ್ತು. ಮೊದಲಿಗೆ ಕುಟುಂಬಸ್ಥರು ಸುತ್ತ ಮುತ್ತ ಹುಡುಕಾಡಿದರೂ ಮಗುವಿನ ಸುಳಿವು ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ರಕ್ತದಲ್ಲಿ ತೊಯ್ದಿದ್ದ ದೇಹವನ್ನು ಯುವಕನ ಮನೆಯಿಂದ ಹೊರಗೆ ತೆಗೆದಿದ್ದರು. ಮಾಂತ್ರಿಕನ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ