ಚೆನ್ನೈ: ಹೆಂಡತಿ ಸದಾ ಕಾಲ ಸೋಷಿಯಲ್ ಮೀಡಿಯಾ ರೀಲ್ಸ್ (Reels) ಮಾಡುತ್ತಿರುವುದನ್ನು ನೋಡಿ ಬೇಸತ್ತ ಗಂಡನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ (Tamil Nadu Crime News) ನಡೆದಿದೆ. ತಮಿಳುನಾಡಿನ 38ರ ಹರೆಯದ ವ್ಯಕ್ತಿಯೊಬ್ಬ ಭಾನುವಾರ ರಾತ್ರಿ ತನ್ನ ಪತ್ನಿಯನ್ನು ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಆಕೆ ಸಾಮಾಜಿಕ ಮಾಧ್ಯಮದಲ್ಲಿ (Social Media) ರೀಲ್‌ಗಳನ್ನು ಮಾಡಲು ದಿನದ ಹೆಚ್ಚು ಸಮಯವನ್ನು ಕಳೆಯುತ್ತಿದ್ದಳು. ಇದರಿಂದ ಆಕೆಯ ಗಂಡ ಕೋಪಗೊಂಡಿದ್ದ. ಇದೇ ಕಾರಣದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೆಂಡತಿಯನ್ನು ಕೊಂದ ವ್ಯಕ್ತಿಯನ್ನು ಬಂಧಿಸಲಾಗಿದೆ. ದಿಂಡುಗಲ್‌ನ 38 ವರ್ಷದ ಅಮೃತಲಿಂಗಂ ಚಿತ್ರಾಳನ್ನು ಮದುವೆಯಾಗಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದ. ಆ ತೆನ್ನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ.
ಅಮೃತಲಿಂಗಂನ ಪತ್ನಿ ಚಿತ್ರಾ ಅವರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದಳು. ರೀಲ್‌ಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ಬಗ್ಗೆ ಅಸಮಾಧಾನಗೊಂಡಿದ್ದ ಅಮೃತಲಿಂಗಂ ತನ್ನ ಹೆಂಡತಿ ಚಿತ್ರಾ ಜೊತೆ ಹಲವಾರು ಬಾರಿ ಜಗಳವಾಡಿದ್ದ. ಇಡೀ ದಿನ ಮೊಬೈಲ್ನಲ್ಲಿ ಮುಳುಗಿರುವುದಕ್ಕೆ ಕೋಪಗೊಂಡಿದ್ದ.
ಇದನ್ನೂ ಓದಿ: Crime News: ಹೆಂಡ್ತಿಯ ರೀಲ್ಸ್ ಹುಚ್ಚಿಗೆ ಗಂಡ ಬಲಿಯಾದ..!
ಚಿತ್ರಾಳ ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಗಳ ಸಂಖ್ಯೆ ಹೆಚ್ಚಾದ ನಂತರ ಆಕೆ ಇನ್ನಷ್ಟು ಅದಕ್ಕೆ ಅಡಿಕ್ಟ್ ಆಗಿದ್ದಳು. ತಾನು ದೊಡ್ಡ ನಟಿಯಾಗಬೇಕು ಎಂದು ಬಯಸಿದ ಆಕೆ ಹೆಚ್ಚೆಚ್ಚು ರೀಲ್ಸ್ಗಳನ್ನು ಮಾಡತೊಡಗಿದಳು. ಎರಡು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದ ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ 33 ಸಾವಿರ ಫಾಲೋವರ್ಗಳನ್ನು ಹೊಂದಿದ್ದಳು.
ಗಂಡನಿಂದ ದೂರ ಹೋಗಿ ಚೆನ್ನೈನಲ್ಲಿದ್ದ ಆಕೆ ಕಳೆದ ವಾರ ತನ್ನ ಮಗಳ ಮದುವೆಗೆಂದು ಊರಿಗೆ ವಾಪಾಸ್ ಬಂದಿದ್ದಳು. ಮದುವೆ ಮುಗಿಸಿ ಅವಳು ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದಳು, ಆದರೆ ಅಮೃತಲಿಂಗಂಗೆ ಅವಳು ಚೆನ್ನೈಗೆ ಹೋಗುವುದು ಇಷ್ಟವಿರಲಿಲ್ಲ. ಚಿತ್ರಾ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬಯಸಿದ್ದಕ್ಕೆ ಭಾನುವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದಾಗ ಅಮೃತಲಿಂಗಂ ಚಿತ್ರಾಳ ಕುತ್ತಿಗೆಯನ್ನು ಅವಳ ಶಾಲಿನಿಂದ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಆಕೆ ಮೂರ್ಛೆ ಹೋದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಎದುರು ಸಿಕ್ಕ ಮಗಳ ಬಳಿ ತಾನು ಚಿತ್ರಾಗೆ ಹೊಡೆದಿರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ.
ಇದನ್ನೂ ಓದಿ: ವ್ಯಕ್ತಿಯ ಬರ್ಬರ ಕೊಲೆ; ಮೃತನ ಪತ್ನಿ ಸೇರಿದಂತೆ ಏಳು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ
ಅಪ್ಪ-ಅಮ್ಮನ ಜಗಳದ ಬಗ್ಗೆ ತಿಳಿದಿದ್ದ ಮಗಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಸ್ವಲ್ಪ ಹೊತ್ತಾದ ಬಳಿಕ ಅಮ್ಮನನ್ನು ಸಮಾಧಾನ ಮಾಡಲೆಂದು ರೂಮಿಗೆ ಹೋದ ಆಕೆ ಚಿತ್ರಾಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸಾವನ್ನಪ್ಪಿರುವುದು ಬಯಲಾಗಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ ಆಕೆ ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ. ಪೆರುಮಾನಲ್ಲೂರಿನಲ್ಲಿ ಅಮೃತಲಿಂಗಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.