Crime News: ಹೆಂಡ್ತಿಯ ರೀಲ್ಸ್ ಹುಚ್ಚಿಗೆ ಗಂಡ ಬಲಿಯಾದ..!
Crime News In Kannada: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಸುಮಾರು 200 ಮೀಟರ್ ವರೆಗೆ ಇಬ್ಬರನ್ನು ಕಾರು ಎಳೆದೊಯ್ದಿದೆ.
ಇತಿ-ಮಿತಿಯಲ್ಲಿ ಇಲ್ಲದಿದ್ದರೆ ಸೋಷಿಯಲ್ ಮೀಡಿಯಾ ಕೂಡ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಏಕೆಂದರೆ ಹೆಂಡತಿಯು ತನ್ನ ಇನ್ಸ್ಟಾಗ್ರಾಮ್ ರೀಲ್ಸ್ ಹುಚ್ಚಿಗೆ ಗಂಡನನ್ನು ಬಲಿಕೊಟ್ಟಿದ್ದಾಳೆ. ರಾಜಸ್ಥಾನದ ಜೋಧ್ಪುರದ ಲುನಿ ಎಂಬಲ್ಲಿ ಇಂತಹದೊಂದು ಆಘಾತಕಾರಿ ಘಟನೆ ನಡೆದೆ. ದಿನಗಳ ಹಿಂದೆಯಷ್ಟೇ ಜೋಧಪುರದ ಪ್ರಮುಖ ರಸ್ತೆಯಲ್ಲಿ ಆ್ಯಕ್ಸಿಡೆಂಟ್ ಮೂಲಕ ಡಬಲ್ ಮರ್ಡರ್ ನಡೆದಿತ್ತು. ಈ ಕೊಲೆಯನ್ನು ನೋಡಿದ ಪ್ರತಿಯೊಬ್ಬರೂ ಪ್ರೀ ಪ್ಲ್ಯಾನ್ ಮರ್ಡರ್ ಎಂದೇ ಉದ್ದರಿಸಿದ್ದರು. ಆದರೆ ಯಾಕಾಗಿ ಈ ಕೊಲೆ ನಡೆದಿದೆ ಎಂಬುದೇ ಎಲ್ಲರನ್ನು ಕಾಡಿದ ಪ್ರಶ್ನೆಯಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.
ಈ ಘಟನೆಯಲ್ಲಿ ಮೃತಪಟ್ಟಿರುವ ರಮೇಶ್ ಪಟೇಲ್ ಅವರ ಪತ್ನಿ ಪ್ರೇಮಿಕಾ ಗುಡ್ಡಿ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದರು. ಆದರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದ ಹೆಂಡತಿಯ ನಡೆಯಿಂದ ರಮೇಶ್ ಪಟೇಲ್ ಬೆಸೆತ್ತಿದ್ದರು. ಹಲವು ಬಾರಿ ಬುದ್ದಿವಾದ ಹೇಳಿದರೂ ಕೇಳುವ ಜಾಯಮಾನ ಹೆಂಡತಿಯದ್ದಾಗಿರಲಿಲ್ಲ. ಹೀಗಾಗಿ ಪದೇ ಪದೇ ಇಬ್ಬರ ನಡುವೆ ಇದೇ ವಿಚಾರದಿಂದ ಸಣ್ಣ ಪುಟ್ಟ ಜಗಳಗಳಾಗುತ್ತಿತ್ತು.
ಗಂಡ ಇದ್ದರೆ ತನ್ನ ಸೋಷಿಯಲ್ ಮೀಡಿಯಾ ಹುಚ್ಚಾಟಕ್ಕೆ ಅವಕಾಶವಿಲ್ಲ ಎಂದರಿತು ಪ್ರೇಮಿಕಾ ಗಂಡನನ್ನೇ ಮುಗಿಸಲು ಪ್ಲ್ಯಾನ್ ರೂಪಿಸಿದ್ದಳು. ಇದರ ನಡುವೆ ಪ್ರೇಮಿಕಾಗೆ ಶಂಕರ್ ಪಟೇಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಬೆಳೆದಿದೆ. ಅತ್ತ ಶಂಕರ್ಗೆ ಪ್ರೇಮಿಕಾ ಬೇಕಿದ್ದರೆ, ಇತ್ತ ಪ್ರೇಮಿಕಾಗೆ ಗಂಡ ರಮೇಶ್ ಪಟೇಲ್ ದೂರವಾಗಬೇಕಿತ್ತು. ಹೀಗಾಗಿ ಗಂಡನನ್ನೇ ಮುಗಿಸಲು ತನ್ನ ಪ್ರಿಯತಮನಿಗೆ ತಿಳಿಸಿದಳು.
ಇತ್ತ ಕಾಮದ ಅಮಲಿನಲ್ಲಿದ್ದ ಶಂಕರ್ ಪಟೇಲ್ ಕೊಲೆಗೆ ಸ್ಕೆಚ್ ರೂಪಿಸಿ ದೆಹಲಿಯಿಂದ ಹಳೆಯ ಎಸ್ಯುವಿ ಕಾರೊಂದನ್ನು ಖರೀದಿಸಿದ್ದ. ಅಲ್ಲದೆ ರಮೇಶ್ ಪಟೇಲ್ ಅವರ ಚಲನವಲನಗಳ ಬಗ್ಗೆ ಪ್ರೇಮಿಕಾಳಿಂದ ಅಪ್ಡೇಟ್ ಪಡೆದುಕೊಳ್ಳುತ್ತಿದ್ದ. ಅದರಂತೆ ಜುಲೈ 17 ರಂದು ರಮೇಶ್ ಪಟೇಲ್ ತನ್ನ ಸೋದರಸಂಬಂಧಿ ಕವಿತಾರನ್ನು ಕರೆದುಕೊಂಡು ಲುನಿಯಿಂದ ಜೋಧ್‌ಪುರಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಲುನಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ಹೊರಡುತ್ತಿದ್ದಂತೆಯೇ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಸುಮಾರು 200 ಮೀಟರ್ ವರೆಗೆ ಇಬ್ಬರನ್ನು ಕಾರು ಎಳೆದೊಯ್ದಿದೆ. ಪರಿಣಾಮ ರಮೇಶ್ ಹಾಗೂ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಭೀಕರ ಅಪಘಾತ ಸಂಭವಿಸಿದರೂ ಯಾಕಾಗಿ ಈ ಕೊಲೆ ನಡೆದಿದೆ ಎಂಬುದರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದರಲ್ಲೂ ಇಬ್ಬರ ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇತ್ತ ಕಡೆಯಿಂದ ರಮೇಶ್ ಪಟೇಲ್ ಅವರ ಕುಟುಂಬಸ್ಥರಿಂದ ಪೊಲೀಸರಿಗೆ ಒತ್ತಡ ಹೆಚ್ಚಾಯಿತು. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಅಂತಿಮವಾಗಿ ಬಂದು ನಿಂತಿದ್ದು ರಮೇಶ್ ಪಟೇಲ್ ಅವರ ಮನೆಯ ಮುಂದೆ ಎಂಬುದು ವಿಶೇಷ.
ಏಕೆಂದರೆ ಘಟನೆ ನಡೆದ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದ್ದ ಮೊಬೈಲ್ನಿಂದಲೇ ಪ್ರೇಮಿಕಾಳಿಗೂ ಕರೆ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಪ್ರೇಮಿಕಾಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಂಡನ ನಡುವೆ ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರಕ್ಕೆ ಜಗಳವಾಗುತ್ತಿರುವ ವಿಚಾರ ಬಾಯಿಬಿಟ್ಟಿದ್ದಾಳೆ. ಅಷ್ಟೇ ಅಲ್ಲದೆ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಶಂಕರ್ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನು ಹೇಳಿದ್ದಾಳೆ.
ಅಲ್ಲಿಗೆ ಪೊಲೀಸರಿಗೆ ಪ್ರೀ ಪ್ಲ್ಯಾನ್ ಮರ್ಡರ್ ಯಾಕೆ ಮಾಡಿದ್ದರು ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿದೆ. ಇದಾಗ್ಯೂ ಕವಿತಾಳನ್ನು ಯಾಕೆ ಕೊಂದ್ರಿ ಎಂಬ ಪ್ರಶ್ನೆಗೆ ಸಿಕ್ಕ ಉತ್ತರ, ರಮೇಶ್ ಪಟೇಲ್ರನ್ನು ಕೊಲೆ ಮಾಡಲು ಮಾತ್ರ ಪ್ಲ್ಯಾನ್ ರೂಪಿಸಿದ್ದೆವು. ಆದರೆ ಅಂದು ಕವಿತಾ ಕೂಡ ಅವರ ಜೊತೆ ಹೋಗಿದ್ದಳು. ಹೀಗಾಗಿ ಅವಳನ್ನು ಕೂಡ ಕೊಲೆ ಮಾಡಲಾಗಿದೆ ಎಂದಿದ್ದಾಳೆ. ಇದೀಗ ಪ್ರೇಮಿಕಾ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಪ್ರಮುಖ ಆರೋಪಿ ಶಂಕರ್ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.