ಗುವಾಹಟಿ: ಕೇವಲ 500 ರೂ.ಗಾಗಿ ವ್ಯಕ್ತಿಯೊಬ್ಬ ಶಿರಚ್ಛೇದ ಮಾಡಿ, ಆ ರುಂಡವನ್ನು ಪೊಲೀಸ್ ಠಾಣೆಗೆ ತಂದಿರುವ ಭಯಾನಕ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ. ಅಸ್ಸಾಂನಲ್ಲಿ ಸೋಮವಾರ ಫುಟ್‌ಬಾಲ್ ಪಂದ್ಯವೊಂದರಲ್ಲಿ (Football Match) 500 ರೂ.ಗಳ ಬೆಟ್ಟಿಂಗ್ ಸೋತ ಬಳಿಕ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ ಘಟನೆ ನಡೆದಿದೆ. ತುಂಡರಿಸಿದ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ ಆ ವ್ಯಕ್ತಿ 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಶರಣಾಗಿದ್ದಾನೆ.
ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಫುಟ್‌ಬಾಲ್ ಪಂದ್ಯ ಮುಗಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಗಾರ ತುನಿರಾಮ್ ಮದ್ರಿ ಎಂಬಾತ ಬೆಟ್ಟಿಂಗ್ ಕಟ್ಟಿ ಸೋತಿದ್ದ. ಆದರೆ ಆತನಿಗೆ ಬೆಟ್ಟಿಂಗ್ನಲ್ಲಿ ಸೋತ 500 ರೂ. ಪಾವತಿಸಲು ತುನಿರಾಮ್ ನಿರಾಕರಿಸಿದ್ದ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಊಟದ ವಿಚಾರವಾಗಿ ಗಂಡ-ಹೆಂಡತಿ ಜಗಳ: ಚಾಕುವಿನಿಂದ ಇರಿದು ಯೋಧನ ಬರ್ಬರ ಹತ್ಯೆ
ಪಂದ್ಯದ ನಂತರ, ತುನಿರಾಮ್ ಮದ್ರಿ ತನ್ನ ಗೆಳೆಯನಾದ ಬೋಯಿಲಾ ಹೆಮ್ರಮ್ನನ್ನು ಊಟಕ್ಕೆ ಮನೆಗೆ ಕರೆದೊಯ್ದು, ಅಡುಗೆಗೆಂದು ಮೇಕೆಯನ್ನು ಕಡಿಯುತ್ತಿದ್ದಾಗ ಇಬ್ಬರ ನಡುವೆ ಬೆಟ್ಟಿಂಗ್ ಹಣದ ವಿಚಾರದಲ್ಲಿ ಜಗಳವಾಗಿತ್ತು. ಆಗ ಹೆಮ್ರಾಮ್ ತನ್ನ ಬೆಟ್ಟಿಂಗ್ ಹಣ ನೀಡಲು ಒತ್ತಾಯಿಸಿದಾಗ, ಕೋಪಗೊಂಡ ಮದ್ರಿ ಆತನನ್ನು ಮಚ್ಚಿನಿಂದ ಕತ್ತರಿಸಿ ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!
ಕತ್ತರಿಸಿದ ತಲೆಯನ್ನು ತುನಿರಾಮ್ ಮದ್ರಿ ತಾನೇ ಇಟ್ಟುಕೊಂಡಿದ್ದ. ತನ್ನ ತಮ್ಮ ಕೊಲೆ ಮಾಡಿದ್ದನ್ನು ನೋಡಿ ಗಾಬರಿಯಾದ ಆತನ ಅಣ್ಣ ಆತನನ್ನು ಹಿಡಿಯಲು ಯತ್ನಿಸಿದನಾದರೂ ತುನಿರಾಮ್ ಆತನಿಂದ ತಪ್ಪಿಸಿಕೊಂಡು ಓಡಿಹೋಗಿದ್ದ. ನಂತರ ತುನಿರಾಮ್ ಮದ್ರಿ 25 ಕಿ.ಮೀ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದು ತುಂಡರಿಸಿದ ತನ್ನ ಗೆಳೆಯನ ತಲೆಯನ್ನು ಟೇಬಲ್ ಮೇಲಿಟ್ಟು ಶರಣಾಗಿದ್ದಾನೆ. ಆತನನ್ನು ಕತ್ತರಿಸಿದ ಮಚ್ಚನ್ನೂ ಪೊಲೀಸರಿಗೆ ನೀಡಿದ್ದಾನೆ.