ಅಫ್ತಾಬ್ ಅಮೀನ್ ಪೂನಾವಾಲಾ (Aaftab Ameen Poonawala)ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್(Shraddha Walker) ಕತ್ತು ಹಿಸುಕಿ ಕೊಲೆಗೈದ ನಂತರ, 35 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಸಂಗ್ರಹಿಸಲು ಫ್ರಿಡ್ಜ್ ಖರೀದಿಸಿದ್ದ. ನಂತರ 16 ರಾತ್ರಿ ಮನೆಯಿಂದ ಹೊರಗೆ ಹೋಗಿ ದಕ್ಷಿಣ ದೆಹಲಿಯ ಕಾಡಿನಲ್ಲಿ ಆ ದೇಹದ ತುಂಡುಗಳನ್ನು ಬಿಸಾಡಿದ್ದ. ತಾನು ಮಾಡಿದ ಕೊಲೆಯ ಕುರುಹು ಅಳಿಸುವುದಕ್ಕಾಗಿ ಅಫ್ತಾಬ್ ಗೂಗಲ್ ಮಾಡಿ ರಕ್ತವನ್ನು ತೊಳೆಯಲು ರಾಸಾಯನಿಕಗಳನ್ನು ಬಳಸಿದನು. ಆಕೆ ಬದುಕಿದ್ದಾಳೆ,ಸತ್ತಿಲ್ಲ ಎಂಬುದನ್ನು ಹೊರ ಜಗತ್ತಿಗೆ ತೋರಿಸುವುದಕ್ಕಾಗಿ ಆಕೆಯ ಸಾಮಾಜಿಕ ಮಾಧ್ಯಮದಲ್ಲಿ ಈತ ಸಕ್ರಿಯನಾಗಿರುತ್ತಾನೆ. ಪ್ರೇಯಸಿಯನ್ನು ಕೊಂದ ಕೋಣೆ ದುರ್ನಾತ ಬೀರದಂತೆ ಅಗರಬತ್ತಿ ಹಚ್ಚಿಡುತ್ತಿದ್ದ. ಅಷ್ಟೇ ಅಲ್ಲ ಹೊಸ ಗರ್ಲ್ ಫ್ರೆಂಡನ್ನು ಅದೇ ಫ್ಲ್ಯಾಟ್ ಗೆ ಕರೆತಂದಿದ್ದ ಈ ಅಫ್ತಾಬ್. ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣದ ಬಗ್ಗೆ ಒಂದೊಂದೇ ಮಾಹಿತಿ ಹೊರಬರುತ್ತಿದ್ದಂತೆ ಅದೆಷ್ಟು ಭೀಭತ್ಸ ಕೃತ್ಯ ಅಲ್ಲಿ ನಡೆದಿತ್ತು ಎಂಬುದನ್ನು ಊಹಿಸಬಹುದು. ಇಂಥಾ ಘೋರ ಕೃತ್ಯವೆಸಗಿದ ಅಫ್ತಾಬ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಅಫ್ತಾಬ್ ಅಮೀನ್ ಪೂನಾವಾಲಾ ನಡೆಸಿರುವ ಈ ಭಯಾನಕ ಹತ್ಯೆ, ಸುರೀಂದರ್ ಕೋಲಿ, ರಾಜಾ ಕೊಲಂದರ್ ಮತ್ತು ಚಂದ್ರಕಾಂತ್ ಝಾ ಅವರಂತಹ ಭೀಕರ ಅಪರಾಧಗಳನ್ನು ನೆನಪಿಸುತ್ತದೆ. ಕೋಲಿ, ಕೊಲಂದರ್ ಮತ್ತು ಝಾ ಅನೇಕ ಜನರನ್ನು ಕೊಂದು ದೇಹವನ್ನು ತುಂಡರಿಸಿದ್ದರು. ಅಂದಹಾಗೆ ಶ್ರದ್ದಾಳನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇಂಥಾ ಕೃತ್ಯಗಳು ನಡೆದಾಗ ಆರೋಪಿ ಸೀರಿಯಲ್ ಕಿಲ್ಲರ್,ಕೊಲೆಗಟುಕ, ಸೈಕೋಪಾತ್ ಎಂದು ಹೇಳಲಾಗುತ್ತದೆ. ಅವರು ಯಾಕಾಗಿ ಈ ಕೃತ್ಯವೆಸಗಿದರು ಹಲವು ರೀತಿಯಲ್ಲಿ ಊಹಿಸಬಹುದು. ಯಾಕೆ ಇಂಥಾ ಕೃತ್ಯಗಳು ನಡೆಯುತ್ತವೆ? ಅವರೇಕೆ ಕೊಲೆ ಮಾಡಿದರು? ಈ ಪ್ರಶ್ನೆಗಳನ್ನು ಅನ್ವೇಷಿಸುವ ಪ್ರಯತ್ನಗಳು ಯಾವುದೇ ರೀತಿಯಲ್ಲಿ ಸಮರ್ಥನೆಯಾಗಿರುವುದಿಲ್ಲ .ಆದರೆ ಭವಿಷ್ಯದಲ್ಲಿ ಇಂತಹ ಆಘಾತಕಾರಿ ಘಟನೆಗಳನ್ನು ತಡೆಯಲು ಸಹಾಯ ಮಾಡುವ ವಿವರಣೆಗಳನ್ನು ಅವು ಒದಗಿಸುತ್ತವೆ. ಸೀರಿಯಲ್ ಕಿಲ್ಲರ್ ಗಳು ಹೇಗೆ ಇರುತ್ತಾರೆ. ವಿವಿಧ ಪ್ರಕರಣಗಳಲ್ಲಿ ಅವರ ಮನಸ್ಥಿತಿ ಹೇಗಿತ್ತು ಎಂಬುದಕ್ಕೆ ನಾಲ್ಕು ಅಪರಾಧ ಪ್ರಕರಣಗಳನ್ನು ಉದಾಹರಣೆಯಾಗಿ ನೀಡಿ ವಿವರಿಸಿರುವ ಇಂಡಿಯಾ ಟುಡೇ ವರದಿ ಇಲ್ಲಿದೆ.
ಪ್ರಕರಣ-1
ಅಫ್ತಾಬ್ ಪ್ರಕರಣದಿಂದಲೇ ಶುರು ಮಾಡೋಣ. ಮೊದಲನೆಯದಾಗಿ, ಮನೋರೋಗಿ ಅಥವಾ ಸೈಕೋಪಾತ್ ಎಂದರೆ ಯಾರು? ವಿಶಿಷ್ಟ ಮನೋರೋಗದ ಲಕ್ಷಣಗಳಲ್ಲಿ ಹಠಾತ್ ಪ್ರವೃತ್ತಿ, ಕುಶಲ ವರ್ತನೆ ಸೇರಿವೆ. ಆದರೆ ಅತ್ಯಂತ ಗಮನಾರ್ಹವಾದ ಗುಣಲಕ್ಷಣವೆಂದರೆ ಪಶ್ಚಾತ್ತಾಪ ಮತ್ತು ಸಹಾನುಭೂತಿಯ ಕೊರತೆ. ಕೆಲವೊಮ್ಮೆ ಇದು ಅಲ್ಲಿ ಏನಾಯಿತು ಎಂಬುದನ್ನು ವಿವರಿಸಲು ಸಾಧ್ಯವಾಗುತ್ತದೆ.
2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನನ್ನು ವಿದೇಶಿ ಪತ್ರಕರ್ತ ದೆಹಲಿಯ ತಿಹಾರ್ ಜೈಲು ಸಂಕೀರ್ಣದಲ್ಲಿ ಸಂದರ್ಶನ ಮಾಡಿದಾಗ ಈ ಪಶ್ಚಾತ್ತಾಪ ಮತ್ತು ಸಹಾನುಭೂತಿಯ ಕೊರತೆ ಇರುವುದು ಕಾಣಿಸಿತ್ತು. ಮುಂಬರುವ ದಿನಗಳಲ್ಲಿ, ತನಿಖಾಧಿಕಾರಿಗಳು ಅಫ್ತಾಬ್‌ನ ಮನಸ್ಥಿತಿಯನ್ನು ವಿವರಿಸಬಹುದು. ಆದರೆ ಇಲ್ಲಿಯವರೆಗೆ ಅಫ್ತಾಬ್ ಪಶ್ಚಾತಾಪಪಟ್ಟಂತೆ ಕಾಣುತ್ತಿಲ್ಲ.
ಅದೇನೇ ಇರಲಿ, ಕ್ರಿಮಿನಲ್ ಮನಶಾಸ್ತ್ರಜ್ಞರ ಪ್ರಕಾರ, ಅಫ್ತಾಬ್ ಮೇಲೆ ಆರೋಪಿಸಲ್ಪಟ್ಟ ಅಪರಾಧಗಳು ಉಪಪ್ರಜ್ಞೆಯ ಕ್ರೌರ್ಯದ (Subconscious cruelty)ಮೂರು ವರ್ಗಗಳಾಗಿ ಬರುತ್ತವೆ. ಮೊದಲ ಪ್ರಕರಣದಲ್ಲಿ, ಹಂತನಾಗಿರುವವನು ವೈದ್ಯ, ಕಟುಕ ಅಥವಾ ಬಾಣಸಿಗನಾಗಿದ್ದು ತಮ್ಮ ಜೀವನದ ಅನುಭವದಿಂದ ಕೊಚ್ಚುವ (ಕತ್ತರಿಸುವ) ವಿಧಾನಗಳನ್ನು ತಿಳಿದಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಅಫ್ತಾಬ್ ಶೆಫ್(ಬಾಣಸಿಗ).
ಅಮೆರಿಕದ ಕ್ರೈಮ್ ಶೋ ಡೆಕ್ಸ್ಟರ್‌ನಿಂದ ಸ್ಫೂರ್ತಿ ಪಡೆದ ಅಫ್ತಾಬ್, ತರಬೇತಿ ಪಡೆದ ಬಾಣಸಿಗನಾಗಿದ್ದರಿಂದ ಮಾಂಸದ ಚಾಕುವನ್ನು ಬಳಸುವುದರಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ತಜ್ಞರು ಹೇಳುವಂತೆ, ಕೆಲವು ಜನರಿಗೆ ಮನುಷ್ಯನ ದೇಹ ಕತ್ತರಿಸುವಾಗ ಅದು ಸಾಧ್ಯವಾಗದೇ ಇರಬಹುದು. ಈ ಪ್ರಕರಣದಲ್ಲಿ ರಕ್ಷಣಾತ್ಮಕ ಛೇದನ ವಿಧಾನವನ್ನು ಒಳಗೊಂಡಿರುವಂತೆ ತೋರುತ್ತಿದೆ. ಇದರಲ್ಲಿ ಇಡೀ ಶವವನ್ನು ಹೊರತೆಗೆಯುವುದು, ಮರೆಮಾಡುವುದು ಅಥವಾ ವಿಲೇವಾರಿ ಮಾಡುವುದು ಸೇರಿದೆ. ವಿವಿಧ ಸ್ಥಳಗಳಲ್ಲಿ ಎಸೆಯಲ್ಪಟ್ಟ ದೇಹದ ಸಣ್ಣ ಭಾಗಗಳು ಸಂತ್ರಸ್ತೆಯ ಗುರುತು ಪತ್ತೆ ಕಷ್ಟಕರವಾಗಿಸುತ್ತದೆ. ಅಪರಾಧ ಪತ್ತೆ ಮಾಡಲು ಪೊಲೀಸರು ಈ ದೇಹದ ಭಾಗಗಳೆಲ್ಲವನ್ನೂ ಒಟ್ಟುಗೂಡಿಸಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. ಈಗ ಪೊಲೀಸರು ಮಾಡುತ್ತಿರುವುದೂ ಅದನ್ನೇ.
ಆಘಾತವನ್ನು ಅನುಭವಿಸಿದ ಜನರಲ್ಲಿ ಉಪಪ್ರಜ್ಞೆಯ ಕ್ರೌರ್ಯದ ಮತ್ತೊಂದು ರೂಪ ಕಂಡುಬರುತ್ತದೆ. ಅವರು ತಮ್ಮ ಪ್ರತಿಕ್ರಿಯೆಯನ್ನು ಹಿಡಿದಿಟ್ಟು, ಕೋಪವನ್ನು ತಗ್ಗಿಸಲು ನೋಡುತ್ತಾರೆ. ಎಲ್ಲಾ ಭಾವನೆಗಳಂತೆ, ಕೋಪವು ಚಲನೆಯಲ್ಲಿನ ಶಕ್ತಿಯಾಗಿದೆ. ಕೋಪ ನಿಗ್ರಹಿಸಿದಾಗ ಅದು ತಣ್ಣಗಾಗುತ್ತದೆ ಮತ್ತು ಬಿಡುಗಡೆಗಾಗಿ ತುಡಿಯುತ್ತಿರುತ್ತದೆ. ಹೀಗಿರುವಾಗ ಸಣ್ಣ ಪ್ರಚೋದನೆಯೂ ಕೆಲವೊಂದು ಹಂತದಲ್ಲಿ ಗಂಭೀರ ರೂಪವನ್ನು ತಾಳಬಹುದು.
ಅಂತಹ ಅಂಶಗಳು ಪ್ರಕರಣಕ್ಕೆ ಮುಂಚಿತವಾಗಿವೆಯೇ ಎಂದು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆಯಾದರೂ, ಆರೋಪಿ ಅಥವಾ ಕೃತ್ಯವೆಸಗಿದ ವ್ಯಕ್ತಿ ದಮನಿತ ಭಾವನೆಗಳನ್ನು ಬಿಡುಗಡೆ ಮಾಡಲು ಹಿಂಸಾತ್ಮಕ ಅಪರಾಧಗಳನ್ನು ಮಾಡಬಹುದು ಎಂದು ಮನೋವೈದ್ಯರು ಹೇಳುತ್ತಾರೆ. ಮದುವೆಗೆ ಶ್ರದ್ಧಾ ಒತ್ತಾಯ ಮಾಡಿದಾಗ ನಡೆದ ಜಗಳ ನಂತರ ಅಫ್ತಾಬ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ಸಂಗಾತಿಯನ್ನು ಕೊಲೆಗೈದು 35 ತುಂಡು ಮಾಡಿ ಬಿಸಾಡಿದ ಪ್ರಿಯಕರ, ದೆಹಲಿಯಲ್ಲಿ ನಡೆಯಿತು ಆಘಾತಕಾರಿ ಘಟನೆ
ತಜ್ಞರ ಪ್ರಕಾರ, ಮೂರನೇ ವಿಧದ ಉಪಪ್ರಜ್ಞೆಯ ಕ್ರೌರ್ಯ ಎಂದರೆ ಕ್ರೋಧಕ್ಕೆ ಸಂಬಂಧಿಸಿದ ತೀವ್ರವಾದ ಮನೋವಿಕೃತ ಪ್ರಸಂಗಗಳನ್ನು ಅನುಭವಿಸುವ ಜನರಲ್ಲಿ ಕಂಡುಬರುತ್ತದೆ. ಅಂತರ್ಮುಖಿಯಾಗಿದ್ದರೂ, ಅವರು ಸಾಮಾನ್ಯ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಪ್ರಸ್ತುತ ಸಂದರ್ಭದಲ್ಲಿಯೂ ಇದು ನಡೆದಿರಬಹುದು.
ಮತ್ತೊಂದೆಡೆ, ಆಕ್ರಮಣಕಾರಿ ಛೇದನವು ಕೊಲ್ಲುವಷ್ಟೇ ಆಕ್ರಮಣಕಾರಿ ರೀತಿಯಲ್ಲೇ ನಡೆಸಲಾಗುತ್ತದೆ. ISIS ನಂತಹ ಭಯೋತ್ಪಾದಕ ಗುಂಪುಗಳ ಶಿರಚ್ಛೇದ ಪ್ರಕರಣಗಳಲ್ಲಿ ಕಂಡುಬರುವಂತೆ ಕೆಲವೊಮ್ಮೆ ಚಿತ್ರಹಿಂಸೆಯಿಂದಾಗಿ ಸಾವು ಸಂಭವಿಸಬಹುದು.
ಇನ್ನೊಂದು ರೀತಿಯ ಛೇದನವೆಂದರೆ ಆಕ್ರಮಣಕಾರಿ ಛೇದನ . ಇದು ಹೆಚ್ಚಾಗಿ ಕಾಮ ಮತ್ತು ನೆಕ್ರೋ ಸ್ಯಾಡಿಸ್ಟ್ ಗುಣಲಕ್ಷಣಗಳವಿರುವವರು ಮಾಡುತ್ತಾರೆ. ಇಲ್ಲಿ ಆರೋಪಿ ಅಥವಾ ಕೃತ್ಯವೆಸಗುವ ವ್ಯಕ್ತಿ ಸಂತ್ರಸ್ತರ ಜನನಾಂಗದ ಅಂಗಗಳು ಅಥವಾ ಸ್ತನಗಳನ್ನು ಕತ್ತರಿಸುತ್ತಾನೆ. ಕೇರಳದ ನರಬಲಿ ಪ್ರಕರಣದ ಆರೋಪಿ ಮೊಹಮ್ಮದ್ ಶಫಿ ಅಥವಾ ರಶೀದ್ ವಿರುದ್ಧ ಇದೇ ಆರೋಪವಿದೆ. ಕೆಲವು ದುಷ್ಕರ್ಮಿಗಳು ಮತಿಹೀನರಾದವರಂತೆ ಜನನಾಂಗದ ಮೂಲಕ ಹೊಟ್ಟೆಯ ಅಂಗಗಳನ್ನು ಹೊರತೆಗೆಯುತ್ತಾರೆ. ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈ ರೀತಿ ಮಾಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಕೆಲವು ಸರಣಿ ಕೊಲೆಗಾರರು ಕೃತ್ಯವೆಸಗುವ ಮುನ್ನ ಲೈಂಗಿಕ ವಾಂಛೆಯನ್ನು ವ್ಯಕ್ತಪಡಿಸುತ್ತಾರೆ ಅಂತಾರೆ ತಜ್ಞರು. ಹಿಂದಿನ ಆಘಾತಕಾರಿ ಅನುಭವಗಳಿಂದ ಉಂಟಾಗುವ ಭಾವನಾತ್ಮಕ ನೋವಿನಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು ಅವರು ವಸ್ತುಗಳು ಮತ್ತು ಪ್ರಾಣಿಗಳ ಮೇಲೆ ತಮ್ಮ ಕಲ್ಪನೆಗಳನ್ನು ನಿಭಾಯಿಸುವ ಕಾರ್ಯವಿಧಾನವಾಗಿ ಅಭ್ಯಾಸ ಮಾಡುತ್ತಾರೆ. ಇಲ್ಲಿ ನೈತಿಕತೆ, ಮಾನವೀಯತೆ ಮತ್ತು ಪರಿಣಾಮಗಳ ಪ್ರಶ್ನೆಗಳು ಅವರಿಗೆ ಅಡ್ಡಿಯುಂಟು ಮಾಡುವುದೇ ಇಲ್ಲ.
ವಿಜ್ಞಾನಿಗಳು ಹೇಳುವಂತೆ ಒಮ್ಮೆ ಒಂದು ಫ್ಯಾಂಟಸಿ ಕಂಡು ಬಂದರೆ ಅದು ಅವರಲ್ಲಿ ಸದಾ ಜಾಗೃತವಾಗಿರುತ್ತದೆ. ಈ ಫ್ಯಾಂಟಸಿ ಅವರಿಗೆ ಮಾಡಿಯೇ ತೀರಬೇಕು, ಇಲ್ಲದೇ ಇದ್ದರೆ ಅವರು ಅದನ್ನು ಪಡೆಯಲು ಆಕ್ರಮಣಕಾರಿಗಳಾಗುತ್ತಾರೆ.
ಪ್ರಕರಣ- 2
2005-06ರಲ್ಲಿ ನೋಯ್ಡಾದ ನಿಥಾರಿಯಲ್ಲಿ ಉದ್ಯಮಿ ಮೊನೀಂದರ್ ಸಿಂಗ್ ಪಂಧೇರ್ ಅವರ ಮನೆಯ ಉಸ್ತುವಾರಿ ಸುರೀಂದರ್ ಕೋಲಿ ಹಲವಾರು ಯುವತಿಯರು ಮತ್ತು ಹುಡುಗರನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ. ಅವನು ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಚರಂಡಿಯಲ್ಲಿ ಬೀಸಾಡಿದ್ದ. ನರಭಕ್ಷತೆ ಮತ್ತು ನೆಕ್ರೋಫಿಲಿಯಾದ ಅಂಶಗಳನ್ನು ಪ್ರಕರಣದಲ್ಲಿ ಹೇಳಿದ್ದರೂ ಸಂಪೂರ್ಣವಾಗಿ ರುಜುವಾತುಪಡಿಸಲಾಗಿಲ್ಲ. ಆದಾಗ್ಯೂ, ಮ್ಯಾಜಿಸ್ಟ್ರೇಟ್ ಮುಂದೆ ಕೋಲಿ ತಪ್ಪೊಪ್ಪಿಕೊಂಡಿದ್ದಾನೆ ಎಂಬುದನ್ನು ಸಾಕ್ಷ್ಯಚಿತ್ರವೊಂದು ತೋರಿಸಿದೆ. ಇದರಲ್ಲಿ ಆತ ಸಂತ್ರಸ್ತರ ಮಾಂಸದ ತುಂಡನ್ನು ಬೇಯಿಸಿ ಅದನ್ನು ತಿಂದಿರುವುದಾಗಿ ಒಪ್ಪಿಕೊಂಡಿದ್ದ.
ದೀರ್ಘಾವಧಿಯ ಶಕ್ತಿಹೀನತೆ ಮತ್ತು ಲೈಂಗಿಕ ಅಸಮರ್ಪಕತೆ ವಿಕೃತ ಕಲ್ಪನೆಗಳು(ಫ್ಯಾಂಟಸಿ)ಗೆ ಕಾರಣವಾಗುತ್ತದೆ. ಕೆಲವರು ಶವದ ಜತೆ ಸೆಕ್ಸ್ ಮಾಡುವುದುಂಟು. ಹಾಗೆ ಮಾಡಿದಾಗ ಅವರು ಹೆಚ್ಚಿನ ಉದ್ರೇಕವನ್ನು ಅನುಭವಿಸುತ್ತಾರೆ. ಅದನ್ನು ಅವರು ಜೀವಂತ ವ್ಯಕ್ತಿಗಳ ಜತೆಗೂ ಅನುಭವಿಸುವುದಿಲ್ಲ. ಕೋಲಿಗೆ ಕೆಲವು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಪಂಧೇರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಪ್ರಕರಣ- 3
ಉತ್ತರ ಪ್ರದೇಶದ ರಾಜಾ ಕೊಲಂದರ್ ಅಕಾ ರಾಮ್ ನಿರಂಜನ್ ಅಂತಹ ನರಭಕ್ಷಕನಾಗಿದ್ದು, ಆತ ವರ್ಷಗಳಲ್ಲಿ ಸುಮಾರು 15 ಜನರನ್ನು ಕೊಂದಿದ್ದಾನೆ. ಆತ ಕೊಲೆಯಾದವರ ಮೆದುಳನ್ನು ಪಾತ್ರೆಯಲ್ಲಿ ಬೇಯಿಸಿ ಅದರ ಸೂಪ್ ಕುಡಿಯುತ್ತಿದ್ದ ಎಂದು ಹೇಳಿದ್ದರೂ ಅದು ಸಾಬೀತಾಗಿಲ್ಲ.
ಕೊಲಂದರ್ ಅನ್ನು 2000 ರಲ್ಲಿ ಬಂಧಿಸಲಾಯಿತು. ಈ ವರ್ಷ, ನೆಟ್‌ಫ್ಲಿಕ್ಸ್ ಈ ಬಗ್ಗೆ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಆತ ಇತರ ಜನರ ಬುದ್ಧಿಶಕ್ತಿ ಮತ್ತು ಸಾಮಾಜಿಕ ಸ್ಥಾನಮಾನದ ಬಗ್ಗೆ ಅಸೂಯೆ ಹೊಂದಿದ್ದ. ಅವರನ್ನು ಕೊಲ್ಲುವುದು ಮತ್ತು ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸುವುದು ಅವನ ಚಟವಾಗಿತ್ತು.
ಮನೋವಿಕೃತ ಕೊಲೆಗಳಲ್ಲಿ ಅಪರಾಧಿಗಳು ಧ್ವನಿಗಳನ್ನು ಕೇಳುತ್ತಾರೆ ಅಥವಾ ವಿಲಕ್ಷಣ ಭ್ರಮೆಗಳಿಂದ ಬಳಲುತ್ತಿರುತ್ತಾರೆ ಅಂತಾರೆ ತಜ್ಞರು. ಕೊಲಂದರ್ ಡೈರಿಯೊಂದನ್ನು ಬರೆದಿಡುತ್ತಿದ್ದು, ಕೊಲೆ ಮಾಡಲು ಬಯಸಿದ್ದವರ ಪಟ್ಟಿ ಅದರಲ್ಲಿರುತ್ತಿತ್ತು.
ಕೊಲಂದರ್ ಆರೋಪಗಳನ್ನು ನಿರಾಕರಿಸಿದರೂ, ಆತನ ಕೋಲ್ ಸಮುದಾಯದ ಮೇಲಿನ ದಬ್ಬಾಳಿಕೆ ಬಗ್ಗೆ ಮಾತನಾಡಿದ್ದ. ಆತನ ಬಗ್ಗೆ ಅಧ್ಯಯನ ಮಾಡಿದವರು ಹೇಳುವ ಪ್ರಕಾರ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ (ನ್ಯಾಯಕ್ಕಾಗಿ ಕೊಲೆ) ಮಾಡುವ ಉದ್ದೇಶ ಅವನದ್ದಾಗಿತ್ತು. ಅದಕ್ಕಾಗಿಯೇ ಆತ ತನ್ನ ಹೆಸರಿನೊಂದಿಗೆ ರಾಜ ಪದವನ್ನು ಬಳಸಲು ಪ್ರಾರಂಭಿಸಿದ. ತನ್ನ ಹೆಂಡತಿಯನ್ನು ಫೂಲನ್ ದೇವಿ ಎಂದು ಮರುನಾಮಕರಣ ಮಾಡಿದ. ಮಕ್ಕಳಿಗೆ ಆಂದೋಲನ್, ಜಮಾನತ್ ಮತ್ತು ಅದಾಲತ್ ಎಂದು ಮರುನಾಮಕರಣ ಮಾಡಿದ್ದ!.
ಪ್ರಕರಣ- 4
ಬಿಹಾರದ ಚಂದ್ರಕಾಂತ್ ಝಾ 2003-2007ರ ಅವಧಿಯಲ್ಲಿ ದೆಹಲಿಯಲ್ಲಿ ಆರೋಪಿಸಲಾಗಿದ್ದ ಹಲವು ಕೊಲೆಗಳ ಪೈಕಿ ಮೂರರಲ್ಲಿ 2013ರಲ್ಲಿ ದೋಷಿ ಎಂದು ತೀರ್ಪು ನೀಡಲಾಗಿತ್ತು. ನೆಟ್‌ಫ್ಲಿಕ್ಸ್ ಈ ವರ್ಷದ ಆರಂಭದಲ್ಲಿ ಈ ಕುರಿತು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತು. ಝಾ ತಾನು ಕೊಲೆ ಮಾಡಿದವರ ದೇಹ ಕತ್ತರಿಸಿ, ದೇಹದ ತುಂಡುಗಳನ್ನು ಪತ್ರಗಳೊಂದಿಗೆ ತಿಹಾರ್ ಜೈಲು ಸಂಕೀರ್ಣದ ಬಳಿ ಪ್ಯಾಕೆಟ್‌ಗಳಲ್ಲಿ ಆಗಾಗ್ಗೆ ಬಿಸಾಡುವ ಮೂಲಕ ದೆಹಲಿಯನ್ನು ದಿಗ್ಭ್ರಮೆಗೊಳಿಸಿದ್ದ. ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಕರೆ ಮಾಡಿ ಸವಾಲು ಹಾಕುತ್ತಿದ್ದ.
ಅಂದಹಾಗೆ ಝಾ, ವಲಸೆ ಕಾರ್ಮಿಕ. ತನ್ನ ನಾಲ್ಕು ವರ್ಷಗಳ ಜೈಲುವಾಸದ ಸಮಯದಲ್ಲಿ ಜೈಲು ಸಿಬ್ಬಂದಿಯಿಂದ ತನಗೆ ನೀಡಿದ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಮಾರ್ಗ ಆ ಕೊಲೆ ಎಂದು ಅವ ಹೇಳಿದ್ದ. ಈಗ ತಿಹಾರ್ ಜೈಲಿನಲ್ಲಿರುವ ಈತನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ.
ಇವು ಪ್ರತ್ಯೇಕ ಪ್ರಕರಣಗಳಲ್ಲ ಎಂಬುದನ್ನು ಇಲ್ಲಿ ಹೇಳಬಹುದು. ಉದಾಹರಣೆಗೆ, ತಂದೂರ್ ಕಾಂಡ 1995 ರಲ್ಲಿ ದೆಹಲಿಯಿಂದ ವ್ಯಾಪಕವಾಗಿ ವರದಿಯಾದ ಮೊದಲ ನಿದರ್ಶನವಾಗಿದ್ದು, ಕಾಂಗ್ರೆಸ್ ನಾಯಕ ಸುಶೀಲ್ ಶರ್ಮಾ ತನ್ನ ಪತ್ನಿ ನೈನಾ ಸಾಹ್ನಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಂದು ಅವಳ ಕತ್ತರಿಸಿದ ದೇಹದ ಭಾಗಗಳನ್ನು ತನ್ನ ಸ್ನೇಹಿತನ ರೆಸ್ಟೋರೆಂಟ್‌ನಲ್ಲಿ ಮಣ್ಣಿನ ಒಲೆಗೆ ತಳ್ಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಇಷ್ಟೆಲ್ಲ ಹೇಳಿದ ಮೇಲೆ ಒಬ್ಬ ಸೀರಿಯಲ್ ಕಿಲ್ಲರ್ ಆಗುವುದಕ್ಕೆ ಆತನ ಪರಿಸರ ಕೂಡಾ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳೂ ಇದಕ್ಕೆ ಕಾರಣವಾಗಿರುತ್ತದೆ. ಅಂದ ಮಾತ್ರಕ್ಕೆ ಅವರ ಕ್ರೌರ್ಯ ಕೃತ್ಯಗಳನ್ನು ಕಡೆಗಣಿಸಬಾರದು.
Published On - 9:22 pm, Tue, 15 November 22