ಬೆಂಗಳೂರು, (ಜುಲೈ 28): ನಗರದ ಬಾಣಸವಾಡಿ ಸಮೀಪದ ವಿನ್ಸೆಂಟ್ ಪೆಲ್ಲೋಟಿ ಕಾಲೇಜಿನ ವಿದ್ಯಾರ್ಥಿ (College Student) ಮಾರ್ವೇಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಲವ್ (Love) ಕಹಾನಿ ಬಟಾಬಯಲಾಗಿದೆ. ಅಸಲಿಗೆ ಟಾರ್ಗೆಟ್ ಆಗಿದ್ದೇ ಒಬ್ಬ. ಆದ್ರೆ, ಏನು ಮಾಡದ ತಪ್ಪಿಗೆ ಮೃತಪಟ್ಟವನೇ ಮಾರ್ವೇಶ್. ಹೌದು.. ಸ್ನೇಹಿತನ ಪ್ರೀತಿ-ಪ್ರೇಮಕ್ಕೆ ಮಾರ್ವೇಶ್ ಬಲಿಯಾಗಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆ ಪೊಲೀಸರು ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಬಂಧಿತ ಆರೋಪಿಗಳು. ಬಂಧಿತರ ತನಿಖೆ ವೇಳೆ ಲವ್ ಸ್ಟೋರಿ ಬಯಲಿಗೆ ಬಂದಿದೆ.
ಬಾಣಸವಾಡಿ ಸಮೀಪದ ವಿನ್ಸೆಂಟ್ ಪೆಲ್ಲೋಟಿ ಕಾಲೇಜಿನಲ್ಲಿ ಮಾರ್ವೇಶ್ ಬಿಕಾಂ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಮಾರ್ವೇಶ್ ಸ್ನೇಹಿತ ಪ್ರೀತಿಸುತ್ತಿದ್ದು, ಈ ವಿಚಾರವಾಗಿ ಮತ್ತೊಂದು ವಿದ್ಯಾರ್ಥಿ ಗುಂಪಿನೊಂದಿಗೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಮಾರ್ವೇಶ್ನನ್ನು ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕಳುಹಿಸಿದ್ದಾರೆ. ಇದರಿಂದ ಅಸ್ವಸ್ಥಗೊಂಡಿದ್ದ ಮಾರ್ವೇಶ್ ವಾಂತಿ ಮಾಡಿಕೊಂಡು ಮೃತಪಟ್ಟಿದ್ದ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಮಾರ್ವೇಶ್ ಸ್ನೇಹಿತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದ್ರೆ, ಆ ಹುಡುಗಿ ಒಪ್ಪಿಕೊಂಡಿರಲ್ಲಿಲ್ಲ. ಅಲ್ಲದೇ ಆಕೆ ಬೇರೆ ಯುವಕ ಲವ್ನಲ್ಲಿ ಬಿದ್ದಿದ್ದಳು. ಆದರೂ ಬಿಡದ ಮಾರ್ವೇಶ್ನ ಗೆಳೆಯ ಪ್ರೀತಿಸುವಂತೆ ಸತಾಯಿಸುತ್ತಿದ್ದ. ಅಲ್ಲದೇ ಈ ಬಗ್ಗೆ ಆಕೆಗೆ ಕೆಟ್ಟ ಕೆಟ್ಟದಾಗಿ ಮೆಸೆಜ್ ಕಳುಹಿಸಿದ್ದ. ಇದರಿಂದ ಕೋಪಗೊಂಡ ಯುವತಿ ತನ್ನ ಬಾಯ್ ಫ್ರೆಂಡ್ಗೆ ಹೇಳಿದ್ದಾಳೆ. ಬಳಿಕ ಆಕೆಯ ಬಾಯ್ ಫ್ರೆಂಡ್ ಮಾರ್ವೇಶನ ಸ್ನೇಹಿತನ ಫೋನ್ಗೆ ಕರೆ ಮಾಡಿದ್ದಾನೆ. ಆದ್ರೆ, ಆತ ಫೋನ್ ಸ್ವೀಕರಿಸದ ಕಾರಣ ಮಾರ್ವೇಶ್ ಸಂಪರ್ಕಿಸಿದ್ದ. ಫೋನ್ನಲ್ಲಿ ಅದೇನು ಮಾತುಕತೆ ಆಯ್ತೋ ಏನೋ ಹುಡುಗಿಯ ಬಾಯ್ ಫ್ರೆಂಡ್ ಹಾಗೂ ಆತನ ಸಹಚರರು ಜುಲೈ 26ರಂದು ಬಂದು ಮಾರ್ವೇಶ್ನನ್ನು ರೂಮ್ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಗೆಳೆಯನಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಅದರಂತೆ ಮಾರ್ವೇಶ್ ತನ್ನ ಮೊಬೈಲ್ನಿಂದ ಹಲವು ಬಾರಿ ಕರೆ ಮಾಡಿದರೂ ಸ್ನೇಹಿತ ಫೋನ್ ಪಿಕ್ ಮಾಡಿಲ್ಲ. ಇದರಿಂದ ಕೊಪಗೊಂಡ ಯುವತಿಯ ಬಾಯ್ ಫ್ರೆಂಡ್ ಹಾಗೂ ಆತನ ಸಹಚರರು ಮಾರ್ವೇಶ್ಗೆ ಮನಬಂದಂತೆ ಥಳಿಸಿ ಹಲ್ಲೆ ಮಾಡಿದ್ದಾರೆ. ಈ ಮೂಲಕ ಮಾರ್ವೇಶ್ ಸ್ನೇಹಿತನ ಮೇಲಿದ್ದ ಕೋಪ ಮಾರ್ವೇಶ್ ಮೇಲೆ ತೀರಿಸಿಕೊಂಡಿದ್ದಾರೆ.
ನಂತರ ಮಾರ್ವೇಶ್ ನನ್ನು ಸ್ನೇಹಿತ ಸುನೀಲ್ ಎಂಬಾತನಿಗೆ ಒಪ್ಪಿಸಿದ್ದಾರೆ. ಆ ಬಳಿಕ ಮಾರ್ವೇಶ್ ವಾಂತಿ ಮಾಡಿಕೊಂಡಿದ್ದ. ಇದರಿಂದ ಸುನೀಲ್ ಸೇರಿದಂತೆ ಇತರೆ ಯುವಕರು ಮಾರ್ವೇಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದ್ರೆ, ಅಷ್ಟರಾಗಲೇ ಮಾರ್ವೇಶ್ ಮೃತಪಟ್ಟಿದ್ದ.
ಈ ಪ್ರಕರಣದ ಸಂಬಮಧ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಎರಡು ದಿನದ ಹಿಂದೆ ಮಾರ್ವೇಶ್ ಎಂಬಾತನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರು ಜನರ ಬಂಧನವಾಗಿದೆ. . ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಬಂಧಿತ ಆರೋಪಿಗಳು. ಇದರಲ್ಲಿ ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ಕಾಲೇಜು ಡ್ರಾಪೌಟ್ ಆಗಿದ್ದಾರೆ. ಜೊತೆಗೆ ಈ ಮೂವರ ವಿರುದ್ಧ ಅಪರಾಧ ಪ್ರಕರಣಗಳು ಸಹ ಇವೆ. ಕಾರ್ತಿಕ್ ವಿರುದ್ಧ ರಾಮಮೂರ್ತಿನಗರದಲ್ಲಿ ರೌಡಿ ಪಟ್ಟಿ ಸಹ ಇದೆ. ಆತನ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಬಾಂಡ್ ಸಹ ಬರೆಸಿಕೊಳ್ಳಲಾಗಿತ್ತು. ಬಂಧಿತರೆಲ್ಲರು 20 ರಿಂದ 21 ವರ್ಷದ ಯುವಕರಾಗಿದ್ದು, ಈ ಕೊಲೆಯಲ್ಲಿ ಭಾಗಿಯಾದ ಅಭಿ, ನೆಲ್ಸನ್ ವಿರುದ್ಧ ಮುಂದಿನ ದಿನಗಳಲ್ಲಿ ರೌಡಿ ಶೀಟ್ ಓಪನ್ ಮಾಡಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು
ಸದ್ಯ ಮರಣೋತ್ತರ ಪರಿಕ್ಷಾ ವರದಿಗಾಗಿ ಹೆಣ್ಣೂರು ಪೊಲೀಸರು, ಕಾಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:52 pm, Fri, 28 July 23