ಬೆಂಗಳೂರು: 100 ಕೋಟಿ ಮೌಲ್ಯದ ಆಸ್ತಿಗಾಗಿ ಮಗನೇ ಅಪ್ಪನ ಹತ್ಯೆಗೆ ಸುಪಾರಿ ನೀಡಿ ಅಪ್ಪನನ್ನ ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಘಟನೆ ನಡೆದಿದ್ದು ಪಾಪಿ ಪುತ್ರನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ವರ್ಷದ ಬಳಿಕ ಇಬ್ಬರು ಮಾಸ್ಟರ್‌ಮೈಂಡ್‌ಗಳ ಬಂಧನವಾಗಿದೆ. ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತರು. ಈ ಘಟನೆ ನಡೆದಿದ್ದು 2020ರ ಫೆಬ್ರವರಿ 14ರಂದು. ಬರೊಬ್ಬರಿ ವರ್ಷದ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಂದೆ ಮಾಧವ್ ಹತ್ಯೆಗೆ ಪುತ್ರ ಹರಿಕೃಷ್ಣ ಸುಪಾರಿ ನೀಡಿದ್ದ. ಅದರಂತೆ 2020ರ ಫೆಬ್ರವರಿ 14ರಂದು ಬೆಂಗಳೂರಿನ ಗುಬ್ಬಲಾಳ ರಸ್ತೆಯಲ್ಲಿ ಮಾಧವ್ ಎಂಬುವವರ ಕೊಲೆಯಾಗಿತ್ತು. ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆಸ್ತಿಗಾಗಿ ತಂದೆಯ ಹತ್ಯೆಗೆ ಮಗ ಹರಿಕೃಷ್ಣ 25 ಲಕ್ಷ ಸುಪಾರಿ ನೀಡಿದ್ದ. ಇನ್ನು ಹರಿಕೃಷ್ಣನ ಈ ಕೃತ್ಯಕ್ಕೆ ಆತನ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಕೂಡ ಸಾಥ್ ನೀಡಿದ್ದ. ಇವರಿಬ್ಬರು ಸೇರಿಕೊಂಡು ಮಾಧವ್ ಕೊಲೆ ಮಾಡಿಸಿದ್ದರು. ಹತ್ಯೆ ಬಳಿಕ ಐವರು ಆರೋಪಿಗಳನ್ನ ತಲಘಟ್ಟಪುರ ಪೊಲೀಸರು ಕಳೆದ ವರ್ಷವೇ ಬಂಧಿಸಿದ್ದರು. ರಿಯಾಜ್ ಅಹಮದ್, ಶಾರುಖ್ ಖಾನ್, ಸೈಯ್ಯದ್ ಸಲ್ಮಾನ್, ಆದಿಲ್ ಖಾನ್, ಷಹಬಾಜ್ ನಜೀರ್ ಬಂಧಿತ ಆರೋಪಿಗಳು. ಆದ್ರೆ ಕೊಲೆ ಹಿಂದಿದ್ದ ಮಾಸ್ಟರ್‌ಮೈಂಡ್‌ಗಳು ಒಂದು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾರೆ. ಮಾಧವ್ ಸಹೋದರ ಶಿವರಾಮ್ ಪ್ರಸಾದ್ ಮತ್ತು ಪುತ್ರ ಹರಿಕೃಷ್ಣನನ್ನು ಬಂಧಿಸಲಾಗಿದೆ.
ಕೊಲೆಯಾದ ಮಾಧವ್ ಗಣಿಗಾರಿಕಾ ಉದ್ಯಮಿಯಾಗಿದ್ದ. 100 ಕೋಟಿ ಬೆಲೆ ಬಾಳುವ ಬಳ್ಳಾರಿ ಸ್ಟೀಲ್ & ಅಲಾಯ್ ಲಿಮಿಟೆಡ್ ಕಂಪನಿಗಳಿಗೆ ಮಾಲೀಕನಾಗಿದ್ದ. ಮೈನಿಂಗ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದ. ಆಸ್ತಿ ಮಾರಾಟ ಮಾಡುವಂತೆ ಮಾಧವ್ಗೆ ಮಗ ಹಾಗೂ ಸಹೋದರ ಸೂಚಿಸಿದ್ದರಂತೆ. ಸಲಹೆಯನ್ನ ತಳ್ಳಿ ಹಾಕಿದಾಗ ಮಾಧವ್ ಹತ್ಯೆಗೆ ಆರೋಪಿಗಳು ನಿರಂತರ ಪ್ರಯತ್ನ ನಡೆಸಿದ್ದು ಸುಪಾರಿ ಹಂತಕರ ನೆರವಿನಿಂದ ಮಾಧವ್ ಕೊಲೆ ಮಾಡಿಸಿದ್ದರು.
ಇದನ್ನೂ ಓದಿ: ಆಸ್ತಿಗಾಗಿ.. ಅಪ್ಪನ ಸಾವಿಗೆ ಕಾರಣನಾದ ಅಣ್ಣನನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಮ್ಮ
Published On - 7:58 am, Tue, 16 February 21