ಬೆಂಗಳೂರು: ಕೊರೊನಾ ಲಾಕ್ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಭಾವನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರರು ಆರೋಪಿ ಸೈಯ್ಯದ್ ಮಸೂದ್ನನ್ನು ಬಂಧಿಸಿದ್ದಾರೆ.
ಆರೋಪಿ ಸೈಯ್ಯದ್, ಅಬ್ದುಲ್ ರಶೀದ್ ಮೇಖ್ರಿ ಪತ್ನಿಯ ಸಹೋದರನಾಗಿದ್ದಾನೆ. ಹಿಂದೆ ಅಬ್ದುಲ್ ರಶೀದ್ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಸೈಯದ್ ಮಸೂದ್ ಕೆಲಸ ಬಿಟ್ಟಿದ್ದ. ಲಾಕ್ಡೌನ್ ವೇಳೆ ಬೆನ್ಸನ್ ಟೌನಿನಲ್ಲಿದ್ದ ಮಗಳ ಮನೆಗೆ ಅಬ್ದುಲ್ ರಶೀದ್ ಹೋಗಿದ್ದ. ಆಗ ಅಬ್ದುಲ್ ಮಗಳ ಮನೆಯಲ್ಲಿ ಸೈಯದ್ ಮಸೂದ್ ಸಹೋದರಿ ಮನೆಗೆಲಸ ಮಾಡುತ್ತಿದ್ದರು.
ಕದ್ದ ಮಾಲು ಮಾರಲಾಗದೆ ಪರದಾಡುತ್ತಿದ್ದ:
ರಶೀದ್ ಮನೆಯಲ್ಲಿ ಹಣ, ಒಡವೆಗಳಿರುವ ವಿಚಾರವನ್ನ ಸಹೋದರನ ಮುಂದೆ ಹೇಳಿದ್ದಳು. ಈ ಹಿಂದೆ ಕೆಲಸ ಮಾಡಿದ್ದ ಮನೆಯಾದ್ದರಿಂದ ಸಲೀಸಾಗಿ ಬೀಗ ಒಡೆದು ಮಸೂದ್ ಕಳ್ಳತನ ಮಾಡಿದ್ದ. ಲಾಕ್ಡೌನ್ ಸಂದರ್ಭದಲ್ಲಿ ಕದ್ದ ಮಾಲು ಮಾರಲಾಗದೆ ಪರದಾಡುತ್ತಿದ್ದ. ಕಳ್ಳತನ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಮಾಲೀಕನ ಭಾವನೇ ಕಳ್ಳ ಎಂಬುದು ಪತ್ತೆಯಾಗಿದೆ. ಪರಸ್ಪರ ರಾಜಿಯಾಗಲು ಆರೋಪಿ ಹಾಗೂ ಮನೆ ಮಾಲೀಕ ಮುಂದಾಗಿದ್ದರು. ಅಷ್ಟರಲ್ಲಿ ಆರೋಪಿ ಮಸೂದ್ನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ನಗದು, 171 ಗ್ರಾಂ ಚಿನ್ನ, ಮೈಕ್ರೋ ಓವೆನ್, ಸೀರೆಗಳು, ಆಸ್ತಿ ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Published On - 12:49 pm, Mon, 18 May 20