ಶಿವಮೊಗ್ಗ: ಶಂಕಿತ ಉಗ್ರ (suspected terrorist) ಮಾಜ್ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮಾಜ್ನನ್ನು ಪೊಲೀಸರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ದುರು. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಭದ್ರತೆ ಮೂಲಕ ಪೊಲೀಸರು ಮಾಜ್ನನ್ನು ಕರೆದೊಯ್ದರು. ಸೊಪ್ಪುಗುಡ್ಡೆಯ ತನ್ನ ಮನೆಯಲ್ಲಿ ಅರ್ಧ ಗಂಟೆ ಕಾಲ ಇದ್ದ ಮಾಜ್ ತಂದೆಯ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದನು. ಮಾಜ್ನನ್ನು ಮನೆಗೆ ಕರೆದೊಯ್ಯುತ್ತಿದ್ದಂತೆ ಹೈಡ್ರಾಮ ಕೂಡ ನಡೆದಿದೆ. ಮಾಜ್ ಮನೆಯ ಒಳಗೆ ಹೋಗುತ್ತಿದ್ದಂತೆ ಮನೆಯ ಬಾಗಿಲನ್ನು ಕುಟುಂಬಸ್ಥರು ಮುಚ್ಚಿದ್ದಾರೆ. ಅಷ್ಟೇ ಅಲ್ಲದೆ ಮನೆಯ ಬಳಿ ವೀಡಿಯೋ ಚಿತ್ರೀಕರಣ ಮಾಡಲು ಅಡ್ಡಿಪಡಿಸಲಾಗಿದೆ. ಬಂಧಿತ ಮಾಜ್ನನ್ನು ಸಂಜೆ 7 ಗಂಟೆ ಒಳಗಾಗಿ ಶಿವಮೊಗ್ಗಕ್ಕೆ ಪೊಲೀಸರು ಕರೆದೊಯ್ಯಲಿದ್ದಾರೆ.
ಶಂಕಿತ ಉಗ್ರ ಮಾಜ್ ತಂದೆ ಮನೀರ್ ಅಹಮದ್(57) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮನೀರ್ ಅಹಮದ್, ಚಿಕಿತ್ಸೆ ಫಲಿಸದೇ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಇಂದು ಸಂಜೆ ಕೊನೆಯುಸಿರೆಳೆದಿದ್ದರು. ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೆ ತಮ್ಮ ಮಗ ಮಾಜ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಮುನೀರ್ ಅಹಮದ್ ನೊಂದಿದ್ದರು. ಇದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಮುನೀರ್ ಅಹಮದ್ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ