ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಅವಂತಿಪೊರಾದ ಚಾರ್ಸೂ ಗ್ರಾಮದಲ್ಲಿ ಇಂದು (ಮಂಗಳವಾರ) ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ (Terrorist Encounter) ಮಾಡಲಾಗಿದೆ. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಖಚಿತಪಡಿಸಿದ್ದಾರೆ. ಆದರೆ, ಹತ್ಯೆಗೀಡಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಆವಂತಿಪೊರಾದಲ್ಲಿ ಇದುವರೆಗೂ ಒಟ್ಟು 36 ಉಗ್ರರನ್ನು ಸದೆಬಡಿಯಲಾಗಿದೆ.
ಚಾರ್ಸೂ ಗ್ರಾಮದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶೋಧ ಕಾರ್ಯ ನಡೆಸುತ್ತಿರುವ ತಂಡವು ಶಂಕಿತ ಸ್ಥಳವನ್ನು ಸುತ್ತುವರೆದಿದ್ದರಿಂದ ಅಡಗಿಕೊಂಡಿದ್ದ ಭಯೋತ್ಪಾದಕನು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದನು. ಇದರಿಂದ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದಿದ್ದಾರೆ.
ಹೆಚ್ಚಿನ ಭಯೋತ್ಪಾದಕರು ಕಾರ್ಡನ್‌ನೊಳಗೆ ಇದ್ದಾರೆ ಎಂದು ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸುತ್ತಿವೆ. ಆದ್ದರಿಂದ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಕಾಶ್ಮೀರದಲ್ಲಿ ಸೇನೆ, ಜಮ್ಮು ಕಾಶ್ಮೀರದ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮುಂದುವರಿದಿವೆ.
ಈ ವರ್ಷದ ಆರಂಭದಿಂದ ನಡೆದ 21ನೇ ಎನ್ಕೌಂಟರ್ ಇದಾಗಿದೆ. ಇದುವರೆಗೂ ಭದ್ರತಾ ಪಡೆಗಳು 36 ಉಗ್ರರನ್ನು ಹತ್ಯೆ ಮಾಡಿದ್ದಾರೆ. 20ಕ್ಕೂ ಹೆಚ್ಚು ಉಗ್ರರನ್ನು ಜೀವಂತವಾಗಿ ಹಿಡಿದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್ಕೌಂಟರ್: ನಾಲ್ವರು ಉಗ್ರರ ಸಾವು
Terrorists Encounter: ಜಮ್ಮು ಕಾಶ್ಮೀರದ ಶೋಪಿಯಾನ್ನಲ್ಲಿ ಎನ್ಕೌಂಟರ್; ಇಬ್ಬರು ಎಲ್ಇಟಿ ಉಗ್ರರ ಹತ್ಯೆ
Published On - 5:02 pm, Tue, 15 March 22