ಅಮೆರಿಕ ಓಕ್ಲಾಹಾಮಾದ (Oklahoma) ಈ ಹಂತಕ ಇತರ ಘೋರ ಅಪರಾಧಿಗಳಿಗಿಂತ ಭಿನ್ನವಾಗಿದ್ದ. ಯಾಕೆ ಗೊತ್ತಾ? ತಾನೆಸಗಲಿರುವ ಅಪರಾಧದ ಬಗ್ಗೆ ಅವನು ಮೊದಲೇ ಮುನ್ಸೂಚನೆ ನೀಡಿದ್ದ. 1977 ರಲ್ಲಿ ಅದು ಬೇಸಿಗೆ ಸಮಯವಾಗಿತ್ತು. ಓಕ್ಲಾಹಾಮಾದ ಸ್ಕೌಟ್ಸ್ ಕ್ಯಾಂಪ್ ನಲ್ಲಿ ಮೂವರು ಅಪ್ರಾಪ್ತ ಸ್ಕೌಟ್ ಬಾಲಕಿಯರ (scout girls) ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿತ್ತು. ಲೋರಿ (Lory), ಮಿಶೆಲ್ (Michele), ಮತ್ತು ಡೋರಿಸ್ (Doris) ಎಂಟರಿಂದ ಹತ್ತು ವರ್ಷದೊಳಗಿನ ಬಾಲಕಿಯರಾಗಿದ್ದರು. ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಬಾಲಕಿಯರ ಹತ್ಯೆ ನಡೆಯುವ ಸುಮಾರು ಎರಡು ತಿಂಗಳು ಮೊದಲು ಆ ಕ್ಯಾಂಪ್ ನಲ್ಲಿ ಕೌನ್ಸೆಲರ್ ಅಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಬ್ಯಾಗೊಂದರಲ್ಲಿ ಆತಂಕ ಹುಟ್ಟಿಸುವ ಒಂದು ಚೀಟಿ ಸಿಕ್ಕಿತ್ತು. ಅದನ್ನು ಬರೆದ ದುಷ್ಟ, ಕ್ಯಾಂಪ್ ನಲ್ಲಿ ಮೂವರು ಬಾಲಕಿಯರ ಕೊಲೆ ಮಾಡುವುದಾಗಿ ಹೇಳಿದ್ದ.
ಆದರೆ ಕ್ಯಾಂಪ್ ಆಗಮಿಸಿದ ಶಿಬಿರಾರ್ಥಿಗಳು (ಸ್ಕೌಟ್ಸ್ ಬಾಲಕಿಯರು) ಕ್ಯಾಂಪ್ ಫೈರ್ ಸುತ್ತ ಕುಳಿತು ಒಬ್ಬರನ್ನೊಬ್ಬರು ಛೇಡಿಸುತ್ತಾ, ಜೋಕ್ ಗಳನ್ನು ಮಾಡುತ್ತಾ, ಭಯ ಹುಟ್ಟಿಸುವ ಕತೆಗಳನ್ನು ಹೇಳುತ್ತಾ ಎಂಜಾಯ್ ಮಾಡುತ್ತಿದ್ದುದನ್ನು ನೋಡಿದ ಕೌನ್ಸೆಲರ್ ಗೆ ತನ್ನ ಬ್ಯಾಗಲ್ಲಿ ಸಿಕ್ಕ ಚೀಟಿಯ ಸಂಗತಿ ಹೇಳಿ ಅವರ ಮೋಜು ಹಾಳು ಮಾಡುವುದು ಬೇಡ ಅನಿಸಿದ್ದರಿಂದ ಅವರು ಚೀಟಿ ಯಾರೋ ತಮಾಷೆಗೆ ಬರೆದಿರುತ್ತಾರೆಂದು ಪರಿಣಿಸಿ ಅದನ್ನು ಮರೆತು ಬಿಟ್ಟಿದ್ದರು. ಅದರೆ ಅವರ ನಿರ್ಧಾರ ಅಥವಾ ಉಡಾಫೆ ಮಕ್ಕಳ ಪಾಲಿಗೆ ಮುಳುವಾಯಿತು ಮತ್ತು ಜೀವನ ಪರ್ಯಂತ ಅವರು ಪಶ್ಚಾತ್ತಪ ಪಡುವಂತಾಯಿತು.
ಕೊಲೆಯಾದ ಬಾಲಕಿಯರು
ಜೂನ್ 13, 1977 ಬೆಳಗಿನ ಸಮಯ ಬಾಲಕಿಯರ ದೇಹಗಳು ಅವರ ಸ್ಲೀಪಿಂಗ್ ಬ್ಯಾಗ್ ಗಳಲ್ಲಿ ಸಿಕ್ಕವಾದರೂ ಅವುಗಳನ್ನು ಕ್ಯಾಂಪಿನ ಬಾತ್ ರೂಮುಗಳ ಹತ್ತಿರ ಬಿಸಾಡಲಾಗಿತ್ತು. ಹಂತಕ ತನ್ನ ಬಗ್ಗೆ ಬಿಟ್ಟುಹೋಗಿದ್ದ ಸುಳಿವು ಒಂದು ಕೆಂಪು ಫ್ಲ್ಯಾಶ್ ಲೈಟ್ ಮಾತ್ರ ಆಗಿತ್ತು. ಅದಲ್ಲದೆ ರಕ್ತ ಮೆತ್ತಿದ್ದ ಪಾದದ ಗುರುತು ಸಹ ಎಫ್ ಬಿಐ ಅಧಿಕಾರಿಗಳಿಗೆ ಸಿಕಿತ್ತು.
ಓಕ್ಲಾಹಾಮ ಬಾಲಕಿ ಸ್ಕೌಟ್ ಗಳ ತ್ರಿವಳಿ ಕೊಲೆ ಪ್ರಕರಣದಲ್ಲಿ ಪ್ರಮುಖ ಶಂಕಿತ ನೊಟೋರಿಯಸ್ ಅಪರಾಧಿ ಎನಿಸಿಕೊಂಡಿದ್ದ ಜೀನ್ ಲಿರಾಯ್ ಹಾರ್ಟ್ ಆಗಿದ್ದ. ಅವನು ಕ್ಯಾಂಪ್ ಸ್ಕೌಟ್ ನಿಂದ ಕೇವಲ ಒಂದು ಮೈಲಿಯಷ್ಟು ದೂರ ವಾಸವಾಗಿದ್ದ ಮತ್ತು ಬಾಲಕಿಯರ ಕೊಲೆಗಳು ನಡೆದ ಸಂದರ್ಭದಲ್ಲಿ ಕಳುವು, ಸುಲಿಗೆ, ಅಪಹರಣ ಮತ್ತು ರೇಪ್ ಪ್ರಕರಣಗಳಲ್ಲಿ ಅವನು ಜೈಲು ಸೇರಿ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರು ಅವನ ಹುಡುಕಾಟದಲ್ಲಿದ್ದರು.
ಪೊಲೀಸರು ಅವನ ಪತ್ತೆಹಚ್ಚಿ ಬಂಧಿಸಿದರಾದರೂ ಸ್ಥಳೀಯ ಕೋರ್ಟ್ ಸಾಕ್ಷ್ಯದ ಕೊರತೆಯಿಂದಾಗಿ ಅವನು ನಿರ್ದೋಷಿ ಎಂದು ಸಾರಿತು. ಓಕ್ಲಾಹಾಮ ಪೊಲೀಸ್ ದಾಖಲೆಗಳಲ್ಲಿ ಮಾತ್ರ ಈ ಪ್ರಕರಣ ಇತ್ಯರ್ಥಗೊಂಡಿದೆ ಎಂದು ಹೇಳಲಾಗಿದೆ.
ಜೀನ್ ಲೆರಾಯ್ ಹರ್ಟ್ ಕೊಲೆಗಳನ್ನು ನಡೆಸಿಯೂ ತಪ್ಪಿಸಿಕೊಂಡನೇ ಅಥವಾ ನಿಜವಾದ ಕೊಲೆಗಾರ ಬೇರೆಯೇ ವ್ಯಕ್ತಿಯಾಗಿದ್ದನೇ ಅಂತ ಇದುವರೆಗೆ ಪತ್ತೆಯಾಗಿಲ್ಲ. ವಿಷಾದಕರ ಸಂಗತಿಯೆಂದರೆ ಲೈಂಗಿಕ ಹಿಂಸೆಗೊಳಗಾಗಿ ಭೀಕರವಾಗಿ ಕೊಲೆಯಾದ ಅ ಮೂರು ಅಮಾಯಕ ಮಕ್ಕಳಿಗೆ ಅರ್ಧ ಶತಮಾನ ಕಳೆದರೂ ನ್ಯಾಯ ಸಿಗಲಿಲ್ಲ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ