
ಮೈಸೂರು: ಪೆರೋಲ್ ಮೇಲೆ ಹೋಗಿದ್ದ ಕೈದಿ (Prisoner) ತಲೆ ಮರೆಸಿಕೊಂಡಿರುವ ಹಿನ್ನೆಲೆ ಅಪರಾಧಿ ಪತ್ತೆಗೆ ಅಥವಾ ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ ಮೈಸೂರು ಪೊಲೀಸ್ ಕಮಿಷನರ್ (Mysuru Police Commissioner) ರಮೇಶ್ ಬಾನೋತ್ ಘೋಷಣೆ ಮಾಡಿದ್ದಾರೆ. ಸೋಮ ಅಲಿಯಾಸ್ ಕೋತಿ ಸೋಮ ಪರಾರಿಯಾದ ಅಪರಾಧಿ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಮಂಡ್ಯ 3ನೇ ಎಫ್.ಟಿ.ಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯಾಗಿದ್ದ ಸೋಮ, 30 ದಿನಗಳ ಫೆರೋಲ್ ರಜೆ ಮೇಲೆ ತೆರಳಿದ್ದು, 2009ರ ನ.1ರಂದು ವಾಪಸ್ ಕೇಂದ್ರ ಕಾರಾಗೃಹಕ್ಕೆ ಶರಣಾಗಬೇಕಿತ್ತು. ಆದರೆ ಪರಾರಿಯಾದ ದಿನದಿಂದ ಇಲ್ಲಿಯವರೆಗೂ ಕಾರಾಗೃಹಕ್ಕೆ ಶರಣಾಗಿಲ್ಲ. ಹಾಗಾಗಿ ಈತನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ. ಈ ಸಂಬಂಧ ಮೈಸೂರು ನಗರ ನಬರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳ್ಳಾರಿ: ಪೆರೋಲ್ ರಜೆ ಮೇಲೆ ಹೋಗಿದ್ದ ಅಪರಾಧಿ ಕಾರಾಗೃಹಕ್ಕೆ ಮರಳ ಕಾರಣ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಲೋಕೇಶ್ ಕುಮಾರ್ ತಿಳಿಸಿದ್ದಾರೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಎಪಿಎಂಸಿ ಹಿಂಭಾಗ 11ನೇ ವಾರ್ಡ್‍ನ ನಿವಾಸಿ ಕೊರಚರ ನಾಗೇಶ ಅಲಿಯಾಸ್ ನಾಗಪ್ಪ (45) ಪರಾರಿಯಾದ ಅಪರಾಧಿ. ಈ ವ್ಯಕ್ತಿ 2020 ಜ. 20ರಂದು 15ದಿನಗಳ ಮೇಲೆ ಪೆರೋಲ್ ರಜೆ ಮೇಲೆ ಹೋಗಿದ್ದು, ಇನ್ನು ಕೇಂದ್ರ ಕಾರಾಗೃಹಕ್ಕೆ ಮರಳಿ ಹಾಜರಾಗಿರುವುದಿಲ್ಲ.
ಇದನ್ನೂ ಓದಿ: ಐಡಿಬಿಐ ಬ್ಯಾಂಕಿನಲ್ಲಿಟ್ಟಿದ್ದ ಗ್ರಾಹಕರ ಎಫ್ಡಿ ಹಣ ಗುಳಂ: ಆರೋಪಿ ಸಜಿಲಳ ಬಂಧನ
ನಾಗೇಶ ಅಲಿಯಾಸ್ ನಾಗಪ್ಪನ ಚಹರೆ ಗುರುತು: 5.6ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ ಹಾಗೂ ಕಪ್ಪು-ಬಿಳಿ ಮಿಶ್ರಿತ ಗುಂಗುರು ಕೂದಲು ಹೊಂದಿರುತ್ತಾನೆ. ಪರಾರಿಯಲ್ಲಿರುವ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬಳ್ಳಾರಿ ಪೊಲೀಸ್ ಅಧೀಕ್ಷಕರ ದೂ. 08392-258400, ಮೊ.9480803001, ನಗರ-ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಮೊ. 9480803020, 9480803000. ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಸಿರುಗುಪ್ಪ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಮೊ.9480803021ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬ್ಯಾಂಕ್ನಲ್ಲಿ ಕಳ್ಳತನ ಮಾಡಿದ್ದ ಬೆಳಗಾವಿ ಜಿಲ್ಲೆಯ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಯುವರಾಜ ರಾಂಪುರ, ವೈಷ್ಣವಿ ಶಾಹೀನ್ ಬಂಧಿತ ಆರೋಪಿಗಳು. ಸದ್ಯ ಆರೋಪಿಗಳಿಂದ 17.90 ಲಕ್ಷ ನಗದು, 615 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಆರೋಪಿ ಯುವರಾಜ ಬ್ಯಾಂಕ್‌ನ ಮಾಜಿ ಉದ್ಯೋಗಿಯಾಗಿದ್ದು, ಆರೋಪಿ ವೈಷ್ಣವಿ ಬ್ಯಾಂಕ್‌ನ ನಿರ್ದೇಶಕರ ಮಗಳು ಎನ್ನಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ: ಕಾಡುಹಂದಿ ಮಾಂಸವೆಂದು ನಂಬಿಸಿ ಜನರಿಗೆ ಬೌ ಬೌ ಮಾಂಸ ಮಾರಾಟ
ಧಾರವಾಡದಲ್ಲಿ ಹೊಸ ವರ್ಷದಂದು ರಾತ್ರಿ ಬೀರೇಶ್ವರ ಕೋ ಆಫ್ ಸೊಸೈಟಿಯಲ್ಲಿ ಕಳ್ಳತನ ನಡೆದಿತ್ತು. ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ ಮಾಡಿದ್ದು, ಬ್ಯಾಂಕ್‌ನ ಸಿಸಿಕ್ಯಾಮರಾ ಸುಟ್ಟು ಹಾಕಿದ್ದಾರೆ. ಮತ್ತಿಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಬೆಂಗಳೂರು: ಲಾಡ್ಜ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ BMTC ಬಸ್ ಚಾಲಕ ಸಾವನ್ನಪ್ಪಿರುವಂತಹ ಘಟನೆ ಕೆಂಗೇರಿಯ ಖಾಸಗಿ ಲಾಡ್ಜ್ನಲ್ಲಿ ನಡೆದಿದೆ. ನೇಣುಬಿಗಿದ ಸ್ಥಿತಿಯಲ್ಲಿ ಬಸ್ ಚಾಲಕ ಪುಟ್ಟೇಗೌಡ(28) ಶವ ಪತ್ತೆಯಾಗಿದೆ. ಮೃತ ಪುಟ್ಟೇಗೌಡ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದವರು. 6 ತಿಂಗಳಿಂದ BMTC ಬಸ್ ಚಾಲಕನಾಗಿ ಕೆಲಸ ಮಾಡ್ತಿದ್ದರು. ಓರ್ವ ಯುವತಿ ಜೊತೆ ಲಾಡ್ಜ್ಗೆ ಪುಟ್ಟೇಗೌಡ ಹೋಗಿರುವ ಮಾಹಿತಿಯಿದ್ದು, ಲಾಡ್ಜ್ನಿಂದ ಯುವತಿಯೊಬ್ಬಳು ಹೊರಬಂದಿದ್ದಾಳೆ. ಈ ವೇಳೆ ರೂಮ್ನ ಬಾಗಿಲು ಲಾಕ್ ಸಹ ಮಾಡಿದ್ದಾಳೆ ಎನ್ನಲಾಗುತ್ತಿದೆ. ಯುವತಿಯ ಬಗ್ಗೆ ಮೃತನ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಣ ಬಾಕಿ ಹಿನ್ನೆಲೆ ಸಿಬ್ಬಂದಿ ರೂಮ್ಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ: ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ ಬೀಜ ತಿಂದು ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆ ಅಸ್ವಸ್ಥಗೊಂಡ ಮಕ್ಕಳನ್ನ ಶಿಗ್ಗಾಂವಿ ತಾಲ್ಲೂಕು ಆಸ್ಪತ್ರೆ ದಾಖಲು ಮಾಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:40 pm, Mon, 30 January 23