ಬೆಂಗಳೂರು, ಜು.29: ಮಹಾನಗರದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಭಯವೇ ಇಲ್ಲದಂತೆ ಕಾಣುತ್ತಿದೆ. ಹೌದು ಇದೀಗ ಚಾಕುವಿನಿಂದ ಇರಿದು ಅಡುಗೆ ಭಟ್ಟನನ್ನ ಕೊಲೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ(Rajajinagar) 6ನೇ ಬ್ಲಾಕ್ನಲ್ಲಿ ನಡೆದಿದೆ. ರವಿ ಭಂಡಾರಿ(44) ಮೃತ ವ್ಯಕ್ತಿ. ಮೃತ ರವಿ ಭಂಡಾರಿ ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಅದೇ ಪಿಜಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪದ್ಮಾವತಿ ಎಂಬ ಮಹಿಳೆಯ ಪುತ್ರ ರಾಹುಲ್ ಎಂಬಾತ ಈ ಕೃತ್ಯವೆಸಗಿದ್ದಾನೆ.
ಹೌದು, ಒಂದೇ ಕಡೆಯಲ್ಲಿ ಕೆಲಸ ಮಾಡುವಾಗ ಮಾತಾಡಿಕೊಳ್ಳುವುದು ಸಹಜ. ಆದರೆ, ಆರೋಪಿ ರಾಹುಲ್ ತನ್ನ ತಾಯಿ ಜೊತೆ ಅನ್ಯೋನ್ಯವಾಗಿ ಮಾತಾಡುತ್ತಿದ್ದಾನೆಂದು ಕೊಲೆ ಮಾಡಿದ್ದಾನೆ. ಇನ್ನು ಘಟನೆಗೂ ಮುನ್ನ ಆರೋಪಿ ತಾಯಿ ಪದ್ಮಾವತಿಯವರು ಪಿಜಿಯಲ್ಲಿದ್ದರು. ಈ ವೇಳೆ ರಾಹುಲ್, ರವಿ ಭಂಡಾರಿಗೆ ಕರೆ ಮಾಡಿ ನಿನ್ನ ಜೊತೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದ. ನಂತರ ಚಾಕುವಿನಿಂದ ಇರಿದು ಅಡುಗೆಭಟ್ಟ ರವಿ ಭಂಡಾರಿಯನ್ನ ಹತ್ಯೆ ಮಾಡಿ, ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಬೈಕ್ನಲ್ಲಿದ್ದ ಬಂಗಾರದ ನಕ್ಲೇಸ್ ಹಾಗೂ 20 ಸಾವಿರ ಹಣ ಕಳ್ಳತನವಾದ ಘಟನೆ ಜಿಲ್ಲೆಯ ಪಾವಗಡ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಪಾವಗಡ ತಾಲೂಕಿನ ಸಿಕೆ ಪುರ ಗ್ರಾಮದ ನಾಗರತ್ನಮ್ಮ ಎಂಬುವವರಿಗೆ ಸೇರಿದ ಸುಮಾರು 2 ಲಕ್ಷ ರೂ ಮೌಲ್ಯದ ಒಡವೆ ಹಾಗೂ ಹಣ ಇದಾಗಿದ್ದು, ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.