ಸೆನ್ಸೇಷನಲ್ ಕ್ರೈಮ್ ಕತೆಗಳು: ಅಡಿಲೇಡ್ ಸಾಮರ್ಟನ್ ಬೀಚಲ್ಲಿ ಶವವಾಗಿ ಸಿಕ್ಕ ವ್ಯಕ್ತಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದನೇ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 16, 2022 | 7:58 AM

ಸುಮಾರು ಒಂದು ತಿಂಗಳು ನಂತರ ಅವನಿಗೆ ಸಂಬಂಧಿಸಿದ ಒಂದು ಬ್ಯಾಗ್ ಅಡಿಲೇಡ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಅವನ ಬ್ಯಾಗ್ ಮೇಲಿನ ಲೇಬಲ್ ಮತ್ತು ಅದರೊಳಗಿದ್ದ ಬಟ್ಟೆಗಳ ಲೇಬಲ್ ಸಹ ತೆಗೆದುಹಾಕಲಾಗಿತ್ತು!

ಸೆನ್ಸೇಷನಲ್ ಕ್ರೈಮ್ ಕತೆಗಳು: ಅಡಿಲೇಡ್ ಸಾಮರ್ಟನ್ ಬೀಚಲ್ಲಿ ಶವವಾಗಿ ಸಿಕ್ಕ ವ್ಯಕ್ತಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದನೇ?
ಸಾಮರ್ಟನ್ ಬೀಚ್​ನಲ್ಲಿ ಅಪರಿಚಿತ ವ್ಯಕ್ತಿಯ ದೇಹ ಈ ಸ್ಥಿತಿಯಲ್ಲಿ ಸಿಕ್ಕಿತ್ತು
Follow us on

ಅಮೇರಿಕ ಜೊಡಿಯಾಕ್ ಹಂತಕ (Zodiac Killer) ಕೊಲೆಗಳನ್ನು ಮಾಡಿ ಒಂದು ಕೋಡ್ ವರ್ಡ್ ಬಿಟ್ಟು ಹೋಗುತ್ತಿದ್ದ. ಅಂಥ ಕಿಲ್ಲರ್ ಕೇವಲ ಅಮೆರಿಕದಲ್ಲ್ಲಿ ಮಾತ್ರವಲ್ಲ, ಆಸ್ಟ್ರೇಲಿಯದಲ್ಲೂ ಒಬ್ಬನಿದ್ದ ಅನಿಸುತ್ತದೆ. ನಿಮಗೆ ಗೊತ್ತಿರಬಹುದು, ಅಮೆರಿಕದ ಜೊಡಿಯಾಕ್ ಹಂತಕ ಕೊನೆವರೆಗೂ ಅಪರಿಚಿತನಾಗೇ ಉಳಿದುಬಿಟ್ಟಿದ್ದ. ಹಲವಾರು ಹತ್ಯೆಗಳನ್ನು ಮಾಡಿದರೂ ಪೊಲೀಸರಿಗೆ ಅವನನ್ನು ಪತ್ತೆಹಚ್ಚುವುದು ಸಾಧ್ಯವಾಗಲಿಲ್ಲ. ಓಕೆ ಅಮೆರಿಕಾದಿಂದ ಆಸ್ಟ್ರೇಲಿಯಗೆ ಹೋಗೋಣ. ಡಿಸೆಂಬರ್ 1, 1948 ರಂದು ಅಡಿಲೇಡ್ ನ ಸಾಮರ್ಟನ್ ಬೀಚ್ ನಲ್ಲಿ (Somerton Beach) ಒಂದು ದೇಹ ಪತ್ತೆಯಾಗಿತ್ತ್ತು. ಅವನ ದೇಹದ ಮೇಲೆ ಒಂದೇ ಒಂದು ಗಾಯವಿರಲಿಲ್ಲ. ದೇಹ ಉತ್ತಮ ಸ್ಥಿತಿಯಲ್ಲಿತ್ತು. ಮೃತ ವ್ಯಕ್ತಿ ದುಬಾರಿ ವಸ್ತ್ರಗಳನ್ನು ಧರಿಸಿದ್ದ ಆದರೆ ಬಟ್ಟೆಗಳ ಮೇಲಿನ ಎಲ್ಲ ಲೇಬಲ್ ಗಳು ನಾಪತ್ತೆಯಾಗಿದ್ದವು. ಹೆನ್ಲೀ ಬೀಚ್ ನ (Henley Beach) ರೇಲ್ವೇ ಟಿಕೆಟ್ ಅವನ ಪ್ಯಾಂಟಿನ ಒಂದು ಜೇಬಿನಲ್ಲಿ ಸಿಕ್ಕಿತ್ತು.

ಸುಮಾರು ಒಂದು ತಿಂಗಳು ನಂತರ ಅವನಿಗೆ ಸಂಬಂಧಿಸಿದ ಒಂದು ಬ್ಯಾಗ್ ಅಡಿಲೇಡ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಅವನ ಬ್ಯಾಗ್ ಮೇಲಿನ ಲೇಬಲ್ ಮತ್ತು ಅದರೊಳಗಿದ್ದ ಬಟ್ಟೆಗಳ ಲೇಬಲ್ ಸಹ ತೆಗೆದುಹಾಕಲಾಗಿತ್ತು!

ಹಾಗಾಗಿ, ಆ ಬ್ಯಾಗ್ ಕೂಡ ಮೃತವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ. ಮರಣೋತ್ತರ ಪ್ರರೀಕ್ಷೆಯಲ್ಲೂ ಯಾವುದೇ ವಿಷಕಾರಿ ಪದಾರ್ಥ ಅವನ ದೇಹದಲ್ಲಿ ಪತ್ತೆಯಾಗಲಿಲ್ಲ. ಆದರೆ, ಒಂದು ತಿಂಗಳ ನಂತರ ಪೊಲೀಸರಿಗೆ ಅವನ ಪ್ಯಾಂಟ್ ನ ಹಿಡನ್ ಜೇಬಿನಲ್ಲಿ ‘ತಮಾನ್ ಶುಡ್’ ಎಂದು ಬರೆದಿದ್ದ ಒಂದು ಚೀಟಿ ಸಿಕ್ಕಿತು.

ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಲೈಬ್ರರಿಯಿಂದ ಕೋಡ್ ವರ್ಡ್ ಬಿಡಿಸುವ ತಜ್ಞರನ್ನು ಠಾಣೆಗೆ ಕರೆಸಿ ಅದರರ್ಥ ಪರಿಶೋಧಿಸುವಂತೆ ಮನವಿ ಮಾಡಿದರು. ತಜ್ಞರು ‘ಮುಕ್ತಾಯ, ‘ಸಮಾಪ್ತಿ’ ಎಂಬ ಅರ್ಥಗಳನ್ನು ಹೇಳಿ ಈ ಪದ ಒಮರ್ ಖಯ್ಯಾಮನ ರುಬೈಯತ್ ನಲ್ಲಿ (ಕವನ ಸಂಕಲನ) ಉಲ್ಲೇಖವಾಗಿವೆ ಎಂದರು. ಪೊಲೀಸರು ಆ ಕವನ ಸಂಕಲನಕ್ಕಾಗಿ ದೇಶದೆಲ್ಲೆಡೆ ಹುಡುಕಾಟ ನಡೆಸಿದರು.

ಆಮೇಲೆ, ವ್ಯಕ್ತಿಯೊಬ್ಬ ಪೊಲೀಸರಿಗೆ ಫೋನ್ ಮಾಡಿ ಮೃತವ್ಯಕ್ತಿಯ ದೇಹ ಪತ್ತೆಯಾದ ಒಂದೆರಡು ವಾರ ಮೊದಲು ರುಬೈಯತ್ ಪುಸ್ತಕ ತನ್ನ ಓಪನ್ ಕಾರ್ ನ ಹಿಂಬದಿ ಸೀಟಲ್ಲಿ ಸಿಕ್ಕಿತ್ತು ಅಂತ ಹೇಳಿದ. ಆ ಪುಸ್ತಕದಲ್ಲೂ ಒಂದು ವಿಸ್ಮಯಕಾರಿ ಕೋಡ್ ವರ್ಡ್ ಸಿಕ್ಕಿತು. ಅದನ್ನು ಪೊಲೀಸರು ಪೆನ್ಸಿಲ್ ಹಿಂಭಾಗದಿಂದ ಸ್ಕ್ರ್ಯಾಚ್ ಮಾಡಿದಾಗ ನರ್ಸೊಬ್ಬಳ ಫೋನ್ ನಂಬರ್ ಪತ್ತೆಯಾಯಿತು. ರುಬೈಯತ್ ಪುಸ್ತಕವನ್ನು ಅಲ್ಫ್ರೆಡ್ ಬೊಕ್ಸಾಲ್ ಹೆಸರಿನ ಒಬ್ಬ ಸೇನಾಧಿಕಾರಿಗೆ ಡೆಲಿವರಿ ಮಾಡಿದ ಸಂಗತಿಯನ್ನು ಹೇಳಿದಳಾದರೂ ಅವನ ಸಾವಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದಳು. ಸತ್ತವನು ಅಲ್ಫ್ರೆಡ್ ಬೊಕ್ಸಾಲ್ ಅಂತ ಖಚಿತವಾಗಿ ಹೇಳಲು ಯಾವುದೇ ಪುರಾವೆ ಇರಲಿಲ್ಲ.

ನರ್ಸ್ ನಂತೆಯೇ, ಓಪನ್ ಕಾರಿನ ಮಾಲಿಕ ಸಹ ಮೃತವ್ಯಕ್ತಿಯ ಜೊತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ. ಪೊಲೀಸರು ಅಲ್ಲಿಗೆ ಪ್ರಕರಣದ ತನಿಖೆಯನ್ನು ನಿಲ್ಲಿಸಿಬಿಟ್ಟರು. ತಜ್ಞರ ಪ್ರಕಾರ ಮೃತವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪದ ‘ತಮಾನ್ ಶುಡ್’ ಅರ್ಥವೂ ಅವನ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಾಬೀತು ಮಾಡುತ್ತದೆ ಎಂದು ಅವರ ಅಭಿಪ್ರಾಯಪಟ್ಟರು. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ತನ್ನ ಜೀವವನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ, ಬದುಕಿನ ಬಗ್ಗೆ ಯಾವುದೇ ವಿಷಾದವಿಲ್ಲ ಅಂತ ಹೇಳಬೇಕಾದರೆ ಅವನು ಚಿಕ್ಕದಾಗಿ ‘ತಮಾನ್ ಶುಡ್’ ಅಂತ ಡೆತ್ ನೋಟ್ ನಲ್ಲಿ ಬರೆದಿರುತ್ತಾನೆ ಅಂತ ಅವರು ತರ್ಕಿಸಿದರು.

ಬೇರೆ ಕೆಲವರು ಅವನೊಬ್ಬ ಗೂಢಚಾರಿಯಾಗಿದ್ದ ಅಂತ ಹೇಳಿದರು. ಅವನ ಸಮಾಧಿಯ ಮೇಲೆ, ‘ಡಿಸೆಂಬರ್ 1, 1948 ರಂದು ಸಾಮರ್ಟನ್ ಬೀಚ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಅಪರಚಿತ ವ್ಯಕ್ತಿಯ ಸಮಾಧಿ’ ಎಂದು ಬರೆಯಲಾಗಿದೆ. ಅವನು ಯಾರೆಂದು ಗೊತ್ತಾಗದ ಹೊರತು ಈ ವಾಕ್ಯ ಬದಲಾಗದು.