ಬೆಂಗಳೂರು: ಹಿರಿಯ ನಟಿ ವಿನಯಪ್ರಸಾದ್ ಅವರ ಬೆಂಗಳೂರಿನ ನಂದಿನಿ ಲೇಔಟ್ನಿವಾಸದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಅ 22ರಂದು ಮನೆ ಬೀಗ ಒಡೆದು ನುಗ್ಗಿರುವ ಕಳ್ಳರು ಲಾಕರ್ನಲ್ಲಿದ್ದ ಹಣ ದೋಚಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ಉಡುಪಿಗೆ ತೆರಳಿದ್ದ ನಟಿ ಅ 26ರಂದು ಮನೆಗೆ ಹಿಂದಿರುಗಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿ ಠಾಣೆಗೆ ದೂರು ನೀಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ 26ರ ಸಂಜೆ 4.30ಕ್ಕೆ ನಟಿ ಮನೆಗೆ ಹಿಂದಿರುಗಿದ್ದರು. ಮನೆಯ ಡೋರ್ಲಾಕ್ ಮೀಟಿ ಕಳ್ಳರು ಮನೆಯೊಳಗೆ ನುಗ್ಗಿದ್ದು ಈ ವೇಳೆ ಬೆಳಕಿಗೆ ಬಂದಿತ್ತು. ಮನೆಯ ರೂಂನ ಲಾಕರ್ನಲ್ಲಿಟ್ಟಿದ್ದ ನಗದನ್ನು ಕಳ್ಳರು ದೋಚಿದಿದ್ದರು. ಏರಿಯಾದ ಹಳೇ ಕಳ್ಳರ ಗ್ಯಾಂಗ್, ಸುಲಿಗೆಕೋರರು ಹಾಗೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಗಾಮಾ ಗ್ರಾಮದಲ್ಲಿ ಕಿಚ್ಚು ಹಾಯಿಸುವಾಗ ಹೋರಿ ತುಳಿದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಗಾಮಾ ಗ್ರಾಮದಲ್ಲಿ ನಡೆದಿದೆ. 36 ವರ್ಷದ ಕೃಷಿ ಕಾರ್ಮಿಕ ಪ್ರಶಾಂತ್ ಕುಮಾರ್ (36) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟರು.
ಕಿಚ್ಚು ಹಾಯಿಸುವಾಗ ಓಡುತ್ತಿದ್ದ ಹೋರಿ ದಿಢೀರನೆ ಜನರತ್ತ ನುಗ್ಗಿತು. ಈ ವೇಳೆ ಅಲ್ಲಿಯೇ ನಿಂತಿದ್ದ ಪ್ರಶಾಂತ ಕುಮಾರ್ ಕೆಳಗೆ ಬಿದ್ದರು. ಅವರನ್ನು ತುಳಿದುಕೊಂಡು ಹೋರಿ ಮುಂದಕ್ಕೆ ಓಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿತ್ತು.
ಅಗ್ನಿ ಆಕಸ್ಮಿಕ: ಮೆಕ್ಕೆಜೋಳ ತೆನೆ ರಾಶಿ ಭಸ್ಮ
ಹಾವೇರಿ: ಆಕಸ್ಮಿಕ ಬೆಂಕಿಯಿಂದಾಗಿ ಮೆಕ್ಕೆಜೋಳದ ತೆನೆಗಳ ರಾಶಿ, ಮೇವಿನ ಬಣವೆ ಸುಟ್ಟು ಕರಕಲಾಗಿರುವ ಘಟನೆ ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಪಕ್ಕದಲ್ಲಿದ್ದ ದನದ ಕೊಟ್ಟಿಗೆಗೂ ಬೆಂಕಿ ತಗುಲಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ಹೊಲ ಮತ್ತು ಕೊಟ್ಟಿಗೆ ಮಹದೇವಯ್ಯ ಉಕ್ಕಡಗಾತ್ರಿಮಠ ಎಂಬುವರಿಗೆ ಸೇರಿದ್ದು.
ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ಅವರು ಮೆಕ್ಕೆಜೋಳದ ತೆನೆಗಳನ್ನು ಕಟಾವು ಮಾಡಿ ರಾಶಿ ಮಾಡಲು ಹಾಕಿದ್ದರು. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
Published On - 8:09 am, Sun, 30 October 22