ಮಹಾರಾಷ್ಟ್ರದಲ್ಲಿ (Maharashtra) ತನ್ನ ಸಹೋದ್ಯೋಗಿಯನ್ನು ಕೊಲೆ ಮಾಡಿದ ಒಡಿಶಾದ ಮೂವರು ಕಟ್ಟಡ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 4 ರಂದು ಮುಂಬೈನ ಹೊರವಲಯದಲ್ಲಿರುವ ಅಂಬರ್‌ನಾಥ್‌ನಲ್ಲಿರುವ ಕೊಳದಲ್ಲಿ ವ್ಯಕ್ತಿಯೊಬ್ಬರ ದೇಹ ಪತ್ತೆಯಾಗಿದೆ. ಆ ದೇಹದಲ್ಲಿ ಹಲ್ಲೆ ಮಾಡಿರುವ ಗಾಯಗಳನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಿದ್ದಾರೆ. ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಲಾಲ್ಜಿ ಸಹಾಯ್ (32) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾಜಿ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಶೋಕ್ ಭಗತ್ ಅವರು ಅಂಬರನಾಥ್ ಪಾಲೇಗಾಂವ್ ಎಂಐಡಿಸಿ ಪ್ರದೇಶದ ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಒಡಿಶಾ ಮೂಲದ ಆತನ ಸಹೋದ್ಯೋಗಿಗಳೇ ಕೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬರು ತಮ್ಮ ಮನೆಗೆ ಕರೆ ಮಾಡಲು ಸಾವನ್ನಪ್ಪಿರುವ ವ್ಯಕ್ತಿಯಲ್ಲಿ ಮೊಬೈಲ್ ಫೋನ್ ಕೇಳಿದ್ದಾರೆ. ಆದರೆ ಕೊಲೆಯಾದ ಲಾಲ್ಜಿ ಸಹಾಯ್ ಫೋನ್ ನೀಡಲು ನಿರಕಾರಿಸಿದ್ದಾರೆ. ಇದರಿಂದ ಕೋಪಗೊಂಡ ಮೂವರು ಆತನ ತಲೆಗೆ ಕಲ್ಲಿನಿಂದ ಹೊಡೆದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ಕೆರೆಗೆ ಎಸೆದಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಸ್ಗೆ ಬೆಂಕಿ, ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರು
ಇನ್ನು ಆರೋಪಿಗಳನ್ನು ಶಂಬು ಮಾಂಜಿ, ಮನೋದೀಪ್ ಮತ್ತು ಚಿಲಾ ಮಾಂಜಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳನ್ನು ಪತ್ತೆಹಚ್ಚಲು ಗುಪ್ತಚರ ಮಾಹಿತಿ ಪೊಲೀಸರಿಗೆ ಸಹಾಯ ಮಾಡಿದೆ ಎಂದು ಅಧಿಕಾರಿ ಹೇಳಿದರು. ಇನ್ನು ಈ ಕೊಲೆಯಲ್ಲಿ ಇನ್ನೊಬ್ಬ ವ್ಯಕ್ತಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:08 pm, Thu, 7 September 23