ಕೊಡಗು: 12 ವರ್ಷದ ಬಾಲಕನ ಮೇಲೆ ಹುಲಿ ದಾಳಿ (Tiger Attack) ಮಾಡಿದ್ದು, ಸ್ಥಳದಲ್ಲೇ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ನಡೆದಿದೆ. ಚೇತನ್ ಮೃತ ಬಾಲಕ. ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ತೊಡೆ ಭಾಗವನ್ನು ತಿಂದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣ ಮತ್ತೆ ಮುಂದುವರಿದಿದೆ. ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಳವಳ್ಳಿ ತಾಲೂಕಿನ ಬ್ಲಫ್ ಬಳಿ ನಡೆದಿದ್ದು, ಪ್ರೀತಿಯಿಂದ ಸಾಕಿದ ಹಸುವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಸುರಿಸುತ್ತಿದ್ದಾರೆ. ತಾಲೂಕಿನಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಸಹಜವಾಗಿ ಜನರಲ್ಲಿನ ಆತಂಕವನ್ನು ಹೆಚ್ಚಿಸಿದೆ. ಮಳವಳ್ಳಿ ತಾಲೂಕಿನ ಬ್ಲಫ್ ಬಳಿಯ ನಂಜಪ್ಪ ಎಂಬುವವರು ಸಾಕಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Leopard: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಚಿರತೆ ಕಾಟ: ಹಸುವಿನ ಮೇಲೆ ದಾಳಿ, ಆತಂಕದಲ್ಲಿ ಜನ
ಗ್ರಾಮದಲ್ಲಿ ಕತ್ತಲಾದರೆ ಸಾಕು ಜನರು ಒಂಟಿಯಾಗಿ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಬಳಿ ಸಮರ್ಪಕ ಬೋನು ಇಲ್ಲದೆ ಇರುವ ಹಿನ್ನೆಲೆ ಚಿರತೆಗಳು ಸೆರೆಯಾಗದೆ ಅಲ್ಲೆಂದರಲ್ಲಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೋನ್ ಅಳವಡಿಸಿದರೆ ಅನಾಹುತಕ್ಕೆ ಕಡಿವಾಣ ಹಾಕ ಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಹೊರವಲಯದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ಹೋಗಿದ್ದ ರೈತರೊಬ್ಬರಿಗೆ ಕಾಣಿಸಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದ್ದು ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ರೈತರು ಅರಣ್ಯಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ. ಚಿರತೆ, ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡಿರುವ ಬಗ್ಗೆ ರೈತರು ಹಲವು ಬಾರಿ ದೂರು ನೀಡಿದ್ದರು. ಆದರೆ ರೈತರು ಎಷ್ಟೆ ಬಾರಿ ದೂರು ನೀಡಿದರು ಅಧಿಕಾರಿಗಳು ಸ್ಪಂದಿಸಿಲ್ಲ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ: ತಮಿಳುನಾಡು ಮೂಲದ ಭಕ್ತನ ಮೇಲೆ ದಾಳಿ
ಇದೀಗ ಹುಲಿ ಸಾವನಪ್ಪಿದೆ ಎಂದಾಕ್ಷಣ ತಕ್ಷಣ ಸ್ಥಳಕ್ಕಾಗಮಿಸಿದ್ದೀರಾ. ಮನುಷ್ಯರು ಜಾನುವಾರುಗಳು ಸಾವನನಪ್ಪಿದ್ರೆ ಬೆಲೆ ಇಲ್ಲವಾ ಎಂದು ಗುಂಡ್ಲುಪೇಟೆ ಎಸಿಎಫ್ ರವೀಂದ್ರ, ಆರ್.ಎಫ್ ಓ ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹುಲಿಯನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ನಂತರ ನಿಖರ ಕಾರಣ ತಿಳಿಯಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Sun, 12 February 23