Vijaypura: ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ ಆತ್ಮಹತ್ಯೆ: ಬಿಇಓ, ಸಿಆರ್​ಪಿ, ಮುಖ್ಯ ಶಿಕ್ಷಕ ಅಮಾನತು

ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆದಿದೆ.

Vijaypura: ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ ಆತ್ಮಹತ್ಯೆ: ಬಿಇಓ, ಸಿಆರ್​ಪಿ, ಮುಖ್ಯ ಶಿಕ್ಷಕ ಅಮಾನತು
ಶಿಕ್ಷಕ ಬಸವರಾಜ (ಎಡಚಿತ್ರ) ಡೆತ್​ ನೋಟ್​ (ಬಲಚಿತ್ರ)
Follow us
| Updated By: ವಿವೇಕ ಬಿರಾದಾರ

Updated on: Feb 13, 2023 | 3:19 PM

ವಿಜಯಪುರ: ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ (Teacher) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆದಿದೆ. ತಾಲೂಕಿನ ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ (55) ಮೃತ ದುರ್ದೈವಿ. ಶಿಕ್ಷಕ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ (ಶಿಕ್ಷಕ ಬಸವರಾಜ್) ಸಾವಿಗೆ ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್​.ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್​​ಪಿ ಜಿ.ಎನ್ ಪಾಟೀಲ್ ಕಾರಣವೆಂದು ಉಲ್ಲೇಖಿಸಿದ್ದಾರೆ.

ಡೆತ್​ ನೋಟ್​ನಲ್ಲಿ ಏನಿದೆ?

ಎಸ್​ ಎಲ್ ಭಜಂತ್ರಿ ಮುಖ್ಯಶಿಕ್ಷಕ ಹುದ್ದೆಯನ್ನು, ಶಿಕ್ಷಕ ಬಸವರಾಜಗೆ ವರ್ಗಾಯಿಸಿದ್ದರು. ಈ ವೇಳೆ ಶಿಕ್ಷಕರ, ಹಾಗೂ ಮಕ್ಕಳ ಹಾಜರಾತಿ ದಾಖಲಿಸುವ 1ನೇ ನಂಬರ್ ರಿಜಿಸ್ಟರ್​ನ್ನು ಹಸ್ತಾಂತರ ಮಾಡಿದ್ದರು. ಆದರೆ ಭಜಂತ್ರಿ ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮ ದಿನಾಂಕಗಳನ್ನು 1ನೇ ನಂಬರ್ ರಿಜಿಸ್ಟರ್​ ಸರಿಯಾಗಿ ದಾಖಲಿಸದೇ,​ ಅಪೂರ್ಣ ರೀತಿಯಲ್ಲಿ ವರ್ಗಾಯಿಸಿದ್ದರು.

ಈ ಸಂಬಂಧ ಎಸ್​ ಎಲ್ ಭಜಂತ್ರಿಯನ್ನು, ಶಿಕ್ಷಕ ಬಸವರಾಜ್​ ಪ್ರಶ್ನಿಸಿದರೇ “ನಾನು ಸಿಆರ್​ಪಿ ಆಗುತ್ತೇನೆ, ಆಗಾಗ ಬಂದು 1ನೇ ನಂಬರ್ ರಿಜಿಸ್ಟರ್ ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ ರಿಜಿಸ್ಟರ್​ನ್ನು ಸರಿಪಡಿಸದೇ ಸತಾಯಿಸುತ್ತಿದ್ದರು. ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಇದಕ್ಕೆ ಪ್ರತಿಯಾಗಿ ಬಿಇಓ ಹೆಚ್ ಎಂ ಹರಿನಾಳ ಟಾರ್ಚರ್ ನೋಟಿಸ್ ಕೊಡುತ್ತಿದ್ದನು. ಸಾಸಾಬಳ ಶಾಲೆಯ ಸಹಶಿಕ್ಷಕ ಶಿಕ್ಷಕ ಬಿಎಂ ತಳವಾರ ನಿಂದಲೂ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ನನ್ನ ಮೇಲೆ ಅಲಿಗೆಷನ್ ಮಾಡಿ, ಗ್ರಾಮದ ಸಂಗಮೇಶ್ ಚಿಂಚೋಳಿ ಎಂಬುವರು ಹಾಗೂ ಸಿಆರ್​ಪಿ ​​ನನ್ನಿಂದ ಹಣ ಪಡೆದಿದ್ದರು. ಹಾಗೇ ಬಿಸಿಯೂಟ ಯೋಜನೆಯಗೆ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದರು. ಶಿಕ್ಷಕ ಬಸವರಾಜ್ ವಿರುದ್ಧ ಸಂಗಮೇಶ್ ಚಿಂಚೋಳಿ ಬಿಇಓಗೆ ದೂರು ಕೊಟ್ಟಿದ್ದರು. ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ನನ್ನ ಹೆಂಡತಿ ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್​​ನಲ್ಲಿ ಮನವಿ ಮಾಡಿದ್ದಾರೆ.

 ತಾಲೂಕು ಆಸ್ಪತ್ರೆಯ ಶವಾಗಾರ ಬಳಿ ಶವವಿಟ್ಟು ಪ್ರತಿಭಟನೆ

ಕುಟುಂಬಸ್ಥರು, ಬಿಇಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಿಂದಗಿ ಬಿಇಓ ಹೆಚ್. ಎಂ ಹರಿನಾಳ ಬಂಧಿಸುವಂತೆ ಆಗ್ರಹ ಸಿಂದಗಿ ತಾಲೂಕು ಆಸ್ಪತ್ರೆಯ ಶವಾಗಾರ ಬಳಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಮುಖ್ಯಶಿಕ್ಷಕ ಬಸವರಾಜ್ ಆತ್ಮಹತ್ಯೆಗೆ ಕಾರಣವಾಗಿರುವ ಎಸ್ ಎಲ್ ಭಜಂತ್ರಿ, ಜಿ. ಎನ್ ಪಾಟೀಲ್, ಸಂಗಮೇಶ್ ಚಿಂಚೋಳಿ ಬಂಧಿಸುವಂತೆ ಆಗ್ರಹಿಸಿದ್ದರು. ಶಿಕ್ಷಕ ಸಂಘ ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದರು. ಸ್ಥಳಕ್ಕೆ ಡಿಡಿಪಿಐ ಉಮೇಶ್ ಶಿರಹಟ್ಟಿಮಠ ಸೇರಿದಂತೆ ಪೊಲೀಸರು ಭೇಟಿ ನೀಡಿದ್ದರು.

ಬಿಇಓ, ಸಿಆರ್​ಪಿ, ಮುಖ್ಯ ಶಿಕ್ಷಕ ಅಮಾನತು

ಸದ್ಯ ವಿಜಯಪುರ ಡಿಡಿಪಿಐ ಉಮೇಶ್ ಶಿರಹಟ್ಟಿಮಠ ಸಿಂದಗಿ ಬಿಇಓ ಎಂ ಹೆಚ್ ಹರಿನಾಳ, ಸಿಆರ್​ಪಿ ಜಿ. ಎನ್ ಪಾಟೀಲ್, ಮುಖ್ಯ ಶಿಕ್ಷಕ ಬಿ. ಎಲ್ ಭಜಂತ್ರಿ, ಸಹಶಿಕ್ಷಕ ಬಿಎಂ ತಳವಾರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನ ಪತ್ನಿ ಮಹಾದೇವಿಯಿಂದ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ