ಪ್ರತ್ಯೇಕ ಘಟನೆ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಮತ್ತೊಂದೆಡೆ ಸಾವಿನ ಹಾದಿ ಹಿಡಿದ ಪ್ರೇಮಿಗಳು

| Updated By: ರಮೇಶ್ ಬಿ. ಜವಳಗೇರಾ

Updated on: Jan 18, 2023 | 7:11 PM

ಪ್ರತ್ಯೇಕ ಘಟನೆಯಲ್ಲಿ ಇಂದು(ಜನವರಿ 18) ಒಂದೇ ದಿನ ಒಟ್ಟು 7 ಜನರು ಆತ್ಮಹತ್ಯೆಗೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಜಯಪುರ, ವಿಜಯನಗರ ಹಾಗೂ ಕೋಲಾರದಲ್ಲಿ ಈ ಘಟನೆಗಳು ನಡೆದಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಪ್ರತ್ಯೇಕ ಘಟನೆ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಮತ್ತೊಂದೆಡೆ ಸಾವಿನ ಹಾದಿ ಹಿಡಿದ ಪ್ರೇಮಿಗಳು
ಸಾಂದರ್ಭಿಕ ಚಿತ್ರ
Follow us on

ವಿಜಯನಗರ: ಕರ್ನಾಟಕದಲ್ಲಿ ದಿನೇದಿನೇ ಆತ್ಮಹತ್ಯೆ(suicide) ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ (ಜ.17) ಅಷ್ಟೇ ತಾಯಿಯೊಬ್ಬಳು ತನ್ನ ಇಬ್ಬರು ಪುತ್ರಿಯರ ಜತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಸುದ್ದಿ ಮಾಸುವ ಮುನ್ನವೇ ಇಂದು(ಜನವರಿ 18) ವಿಜಯನಗರ ಜಿಲ್ಲೆಯಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೌದು…ತಾಯಿಯೊಬ್ಬು ತನ್ನ ಇಬ್ಬರು ಮಕ್ಕಳೊಂದಿಗೆ ಸಾವಿನ ಹಾದಿ ಹಿಡಿದಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ. ತಾಯಿ ಭವ್ಯಾ(36), ಕಾವ್ಯಾ(14), ಅಮೂಲ್ಯ(10) ನೇಣಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ: ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿದ ತಾಯಿ

ಕಳೆದ ಮೂರು ದಿನಗಳಿಂದ ಪತಿ ವೀರೇಶ್​ ಮನೆಗೆ ಬಂದಿರಲಿಲ್ಲ. ಪತಿ ಇಲ್ಲದ ವೇಳೆ ಇಬ್ಬರು ಮಕ್ಕಳೊಂದಿಗೆ ಪತ್ನಿ ಭವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಲವಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಜೈನಾಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಕೇಶ್ ಅಂಗಡಿ(23), ಸಾವಿತ್ರಿ ಅಂಬಲಿ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ರಾಕೇಶ್ ಹಾಗೂ ಸಾವಿತ್ರಿ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ನಿನ್ನೆ(ಜ.17) ರಾತ್ರಿ ಮನೆಯಿಂದ ಹೊರ ಹೋಗಿದ್ದ ರಾಕೇಶ್ ಹಾಗೂ ಸಾವಿತ್ರಿ ಜೈನಾಪುರ ಬಳಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣು ಬಿಗಿದುಗೊಂಡು ವ್ಯಕ್ತಿ ಆತ್ಮಹತ್ಯೆ

ಕೋಲಾರ: ವ್ಯಕ್ತಿಯೊಬ್ಬ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡವಿಚಂಬಗೂರು ಗ್ರಾಮದಲ್ಲಿ ನಡೆದಿದೆ. ವೆಂಕಟಪ್ಪ (46) ಆತ್ಮಹತ್ಯೆ ಮಾಡಿಕೊಂಡವರು. ಅಡವಿಚಂಬಗೂರು ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಗ್ಯಾಧಿಕಾರಿ ಆತ್ಮಹತ್ಯೆ

ಕೋಲಾರ: ಜಿಲ್ಲೆ ಮಾಲೂರು ತಾಲೂಕಿನ ಬಾಳಗಾನಹಳ್ಳಿಯ ಸಮುದಾಯದ ಆರೋಗ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಸ್ತಿ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿ ಇಂದು(ಜನವರಿ 18) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಾನಂದ ಜಕ್ಕಣ್ಣನವರ್(24)​ ಆತ್ಮಹತ್ಯೆ ಮಾಡಿಕೊಂಡ ಸಮುದಾಯ ಆರೋಗ್ಯಾಧಿಕಾರಿ. ಮೂಲತಃ ಬೆಳಗಾವಿ ಜಿಲ್ಲೆಯ ಇಂಚಲ ಗ್ರಾಮದ ಶಿವಾನಂದ ಅವರು ಕಳೆದ 9 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:07 pm, Wed, 18 January 23