ಹಾಸನ: ಗುಂಡು ಹಾರಿಸಿ ಜಾನುವಾರು ಹತ್ಯೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿದ ಅಮಾನವೀಯ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿಯಲ್ಲಿ ನಡೆದಿದೆ. ನಿನ್ನೆ(ಜೂ.27) ಸಂಜೆ ಕಾಫಿ ತೋಟದಲ್ಲಿ ಕ್ಯಾಮನಹಳ್ಳಿಯ ದಯಾನಿದಿ ಎಂಬುವರಿಗೆ ಸೇರಿದ ಎಮ್ಮೆಯ ಮೇಲೆ ಪರವಾನಗಿ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಮಾಂಸ ಕತ್ತರಿಸುವ ವೇಳೆ ವೇಳೆ ಸ್ಥಳೀಯರು ಸ್ಥಳಕ್ಕೆ ಬಂದಿದ್ದು, ಅವರನ್ನು ನೋಡುತ್ತಿದ್ದಂತೆ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದರು. ಬಳಿಕ ಜಾನುವಾರು ಹತ್ಯೆ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳ ಬಳಿಯಿದ್ದ 1 ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಂಚಗಳ್ಳಿಯಲ್ಲಿ ಹೊಲದ ಗುಡಿಸಲಿನಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ಜೋಳದ ಫಸಲು ಕಾವಲು ಕಾಯುತ್ತಿದ್ದ ರೈತ ನಂಜಪ್ಪ, ಸ್ವಲ್ಪ ಸಮಯದ ಬಳಿಕ ರಗ್ಗು ಹೊದ್ದು ಮಲಗಿದ್ದ. ಈ ವೇಳೆ ರೈತ ನಂಜಪ್ಪನ ಮೇಲೆ ಚಿರತೆ ದಾಳಿ ನಡೆಸಿ, ತೋಳು ಪರಚಿದೆ. ತಕ್ಷಣ ರಗ್ಗು ಬೀಸಾಡುತ್ತಿದ್ದಂತೆ ಚಿರತೆ ಓಡಿ ಹೋಗಿದ್ದು, ರೈತ ನಂಜಪ್ಪನಿಗೆ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಆಡು ನುಂಗಲು ಹೆಬ್ಬಾವು ವಿಫಲಯತ್ನ ಮಾಡಿದ ಘಟನೆ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಭಾರೀ ಗಾತ್ರದ ಹೆಬ್ಬಾವು, ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಡೊಂದನ್ನು ಬೇಟೆಯಾಡಿತ್ತು. ಬಳಿಕ ಅದನ್ನು ಹಿಡಿದ ನುಂಗಲು ಸುಮಾರು ಒಂದು ತಾಸು ಸೆಣಸಿ ಬಳಿಕ ಸಾದ್ಯವಾಗದೆ ಬಿಟ್ಟು ಹೋಗಿದೆ. ಈ ಆಡು ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ್ದು, ಸುಮಾರು 45 ಕೆಜಿ ತೂಕವನ್ನ ಹೊಂದಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ