Chandrashekhar Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ಗುಂಡಿನ ದಾಳಿ

ದಾಳಿಕೋರರು ಹರಿಯಾಣ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಳಿಕೋರರ ಕಾರು ಪತ್ತೆಯಾಗಿದೆ. ದುಷ್ಕರ್ಮಿಗಳನ್ನು ಬಂಧಿಸಲು ಇಡೀ ನಗರದಲ್ಲಿ ದಿಗ್ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chandrashekhar Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ಗುಂಡಿನ ದಾಳಿ
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ
Follow us
Ganapathi Sharma
|

Updated on: Jun 28, 2023 | 7:07 PM

ಸಹರಾನ್​ಪುರ: ಭೀಮ್ ಆರ್ಮಿ (Bhim Army Chief) ಮುಖ್ಯಸ್ಥ ಚಂದ್ರಶೇಖರ್ ಆಜಾದ್​​ (Chandrashekhar Azad) ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ಸಹರಾನ್​ಪುರದ ದೇವಬಂದ್‌ನಲ್ಲಿ ಬುಧವಾರ ಸಂಜೆ ನಡೆದಿದೆ. ಚಂದ್ರಶೇಖರ್‌ ಅವರಿಗೆ ಗಾಯಗಳಾಗಿದ್ದು, ಅವರನ್ನು ಘಟನೆ ನಡೆದ ತಕ್ಷಣ ದೇವಬಂದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಶೇಖರ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ದಾಳಿಕೋರರು ಹರಿಯಾಣ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಳಿಕೋರರ ಕಾರು ಪತ್ತೆಯಾಗಿದೆ. ದುಷ್ಕರ್ಮಿಗಳನ್ನು ಬಂಧಿಸಲು ಇಡೀ ನಗರದಲ್ಲಿ ದಿಗ್ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ. ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಮ್ಮ ಫಾರ್ಚುನರ್‌ ಕಾರ್​​​ನಲ್ಲಿ ಚಂದ್ರಶೇಖರ್ ಅವರು ದೇವಬಂದ್‌ಗೆ ಬಂದಿದ್ದರು ಎಂದು ಅವರ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದಾರೆ.

ಚಂದ್ರಶೇಖರ್ ತಲುಪಿದ ತಕ್ಷಣ, ಹರಿಯಾಣ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದರು. ದುಷ್ಕರ್ಮಿಗಳು ಹಲವಾರು ಸುತ್ತು ಗುಂಡು ಹಾರಿಸಿದರು, ಆದರೆ ಅವುಗಳ ಪೈಕಿ ಒಂದು ಗುಂಡು ಮಾತ್ರ ಚಂದ್ರಶೇಖರ್ ಅವರಿಗೆ ತಾಗಿತು. ಕೃತ್ಯ ಎಸಗಿದ ಬಳಿಕ ವೇಗವಾಗಿ ವಾಹನ ಚಲಾಯಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದಾದ ನಂತರ ಚಂದ್ರಶೇಖರ್ ಬೆಂಬಲಿಗರು ಅವರನ್ನು ದೇವಬಂದ್‌ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ನಿಯೋಜಿತ ಸ್ಥಳಗಳಲ್ಲಿ ಮಾತ್ರ ‘ಬಲಿ’; ನಮಾಜ್​​​ನಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು: ಯುಪಿ ಸರ್ಕಾರದ ಬಕ್ರೀದ್ ಮಾರ್ಗಸೂಚಿ

ಚಂದ್ರಶೇಖರ್ ಮೇಲೆ ದಾಳಿಕೋರರು 4 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಗುಂಡು ಅವರ ಹೊಟ್ಟೆಗೆ ತಾಗಿ ಹೊರಬಂದಿದೆ ಎನ್ನಲಾಗಿದೆ. ಗುಂಡಿನ ದಾಳಿಯ ರಭಸಕ್ಕೆ ಕಾರಿನ ಗಾಜುಗಳು ಒಡೆದಿವೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಚಂದ್ರಶೇಖರ್ ಬೆಂಬಲಿಗರು ದೇವಬಂದ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ ಹೊರಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ