ಬೆಂಗಳೂರು: ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲ ಎಲ್ಲೆಡೆ ಹಬ್ಬುತ್ತಿದೆ. ನಗರದ ಕಾಳಸಂತೆಯಲ್ಲಿ ಮತ್ತೇರಿಸುವ ಎಣ್ಣೆ ಮಾರಾಟ ದಂಧೆ ಜೋರಾಗಿದೆ. ಇದೀಗ, ಅಫೀಮು, ಗಾಂಜಾ, ಕೊಕೈನ್ಗಿಂತ ಹೆಚ್ಚು ನಶೆ ಏರಿಸುವ ದ್ರವ್ಯವೊಂದು ಈಗ ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ.
ಇತರೆ ರಾಜ್ಯಗಳಲ್ಲಿ ತಯಾರಾಗಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಸರಬರಾಜಾಗುವ ಈ ಹ್ಯಾಶ್ ಆಯಿಲ್ನ (Hash oil) ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. 1 ಗ್ರಾಂ ಹ್ಯಾಶ್ ಆಯಿಲ್ ಬೆಲೆ 3ರಿಂದ 5 ಸಾವಿರ ರೂಪಾಯಿಯಷ್ಟು ಇದೆ. ಆಂಧ್ರದ ವಿಶಾಖಪಟ್ಟಣಂನಿಂದ ಈ ಮಾದಕ ದ್ರವ್ಯವನ್ನು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆಯಂತೆ.
ಈ ಮಾದಕ ದ್ರವ್ಯದ ವಿತರಕರಿಗೆ ನಗರದ ಐಟಿ-ಬಿಟಿ ಉದ್ಯೋಗಿಗಳೇ ಟಾರ್ಗೆಟ್ . ಜೊತೆಗೆ, ಇದು ಬಹು ಬೇಡಿಕೆಯ ದ್ರವ್ಯವಾಗಿದೆ. ಸದ್ಯ ಈಗ ನಗರದಲ್ಲಿ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 950 ಗ್ರಾಂ ಆಯಿಲ್ ಮತ್ತು 3 ಕೆ.ಜಿ. ಗಾಂಜಾ ಸಹ ಜಪ್ತಿ ಮಾಡಲಾಗಿದೆ.
ಚೆಕ್ಪಾಯಿಂಟ್ನಲ್ಲಿ ಕೆಲ ಬೈಕ್ ಸವಾರರನ್ನ ಸಂಶಯದ ಮೇಲೆ ಹಿಡಿದು ತಪಾಸಣೆ ನಡೆಸಿದ ವೇಳೆ ಅವರು ಗಾಂಜಾ ಸೇವನೆ ಮಾಡಿರೋದು ಪೊಲೀಸರಿಗೆ ಕಂಡು ಬಂದಿತ್ತು. ವಿಚಾರಣೆ ನಡೆಸಿದಾಗ ಅವರಿಗೆ ಗಾಂಜಾ ಸಪ್ಲೈ ಮಾಡಿದ್ದವರ ಮಾಹಿತಿ ದೊರಕಿತ್ತು. ಹೀಗಾಗಿ, ಮಾರಾಟಗಾರರ ಮೇಲೆ ದಾಳಿ ಮಾಡಿ ಗಾಂಜಾ ಹಾಗೂ ಸೊಪ್ಪು ಸೀಜ್ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಸುಮಾರು 80 ಕೆ.ಜಿ ಗಾಂಜಾ ಒಣಗಿಸಿ, ನಂತರ ಕುದಿಸಿ, ಅದರಿಂದ ಎಣ್ಣೆ ತೆಗಿಯುತ್ತಾರೆ. 1 ಕೆ.ಜಿ ಗಾಂಜಾ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಆಗುತ್ತೆ. ದೀಪುರಾಜ್ ಎಂಬ ಬೈಕ್ ಸವಾರನನ್ನ ಬಂಧಿಸಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ ಎಂದು ಶ್ರೀನಾಥ್ ಹೇಳಿದ್ದಾರೆ.