ಕಾನ್ಪುರ (ಉತ್ತರ ಪ್ರದೇಶ): ಒಬ್ಬ 17-ವರ್ಷದ ಅಪ್ರಾಪ್ತೆಯಬ್ಬಳನ್ನು (minor girl) ಮದುವೆಯಾಗು ಇಲ್ಲದಿದ್ದರೆ ದೇಹವನ್ನು ತುಂಡುಗಳಾಗಿ ಕತ್ತರಿಸುವೆ ಎಂದು ಕಾಡಿಸಿ ಹೆದರಿಸುತ್ತಿದ್ದ ಉತ್ತರ ಪ್ರದೇಶದ ಕಾನ್ಪುರ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹ್ಮದ್ ಫೈಜ್ (Mohammad Faiz) ಎಂದು ಗುರುತಿಸಲಾಗಿರುವ ವ್ಯಕ್ತಿಯು ಮದುವೆಯಾಗುವಂತೆ ಯುವತಿಯ ದುಂಬಾಲು ಬಿದ್ದಿದ್ದ ಆದರೆ ಆಕೆ ಇವನ ಮದುವೆ ಪ್ರಸ್ತಾಪವನ್ನು (marriage proposal) ತಿರಸ್ಕರಿಸಿದ್ದಳು. ಅವಳ ನಿರಾಕರಣೆಯಿಂದ ಕೋಪೋದ್ರಿಕ್ತನಾಗಿದ್ದ ಯುವಕ ‘ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ತುಂಡು ತುಂಡುಗಳಾಗಿ ಕತ್ತರಿಸುವೆ’ ಎಂದು ಹೆದರಿಸಿದ್ದ.
ಯುವತಿ ಶಾಲೆಗೆ ಹೋಗುವಾಗ ಅವಳನ್ನು ಹಿಂಬಾಲಿಸುತ್ತಿದ್ದ ಫೈಜ್ ಅವಳಿಗೆ ಪದೇಪದೆ ಕಿರುಕುಳ ನೀಡುತ್ತಿದ್ದ ಎಂದು ಯುವತಿಯ ಕುಟುಂಬ ಪೊಲೀಸರಿಗೆ ತಿಳಿಸಿದೆ. ಕುಟುಂಬದ ಸದಸ್ಯರು ಫೈಜ್ ನೊಂದಿಗೆ ಸಮಾಲೋಚನೆ ನಡೆಸಿದರೂ ಅವನು ಯುವತಿಯನ್ನು ಕಾಡಿಸುವುದನ್ನು ನಿಲ್ಲಿಸದೆ ಮದುವೆಯಾಗುವಂತೆ ಪೀಡಿಸುತ್ತಲೇ ಇದ್ದ.
ಇನ್ನು ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನಗಂಡ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಯುವತಿಗೆ ಜೀವ ಬೆದರಿಕೆ ಇದೆಯೆಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಆರೋಪಿಯ ಬಂಧನ
ದೂರಿನ ಆಧಾರದ ಮೇಲೆ ಕಾನ್ಪುರ ನಗರದ ನೌಬಸ್ತಾ ಏರಿಯ ಠಾಣೆಯ ಪೊಲೀಸರು ಫೈಜ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಹೋದಾಗ ಫೈಜ್ ಕುಟುಂಬದ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಅಧಿಕಾರಿಗಳು ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಪೊಲೀಸ್ ದಂಡನ್ನು ಕಂಡ ಫೈಜ್ ಕುಟುಂಬದ ಸದಸ್ಯರ ಹುಟ್ಟಡಗಿದೆ, ನಂತರ ಆರೋಪಿಯನ್ನು ಅವರು ಜೀಪಲ್ಲಿ ಎತ್ಹಾಕಿಕೊಂಡು ಬಂದಿದ್ದಾರೆ.
ಪ್ರಕರಣದ ಬಗ್ಗೆ ಇಂಡಿಯ ಟುಡೆ ಇಂಗ್ಲಿಷ್ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿರುವ ನೌಬಸ್ತಾದ ಎಸಿಪಿ ಅಭಿಷೇಕ್ ಕುಮಾರ್ ಪಾಂಡೆ, ಅಕ್ಟೋಬರ್ 16 ರಂದು ಮಹ್ಮದ್ ಫೈಜ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸೊಂದು ದಾಖಲಾಗಿತ್ತು, ದೂರಿನ ಪ್ರಕಾರ ಪ್ರಕರಣ ದಾಖಲಾದ ಬಳಿಕ ಫೈಜ್ ನಿರಂತರವಾಗಿ ಅಪ್ರಾಪ್ತ ಹುಡುಗಿಯನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದ್ದಾರೆ.
ಫೈಜ್ ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ