ವಿಜಯಪುರ: ಯುವಕನ ಬೆತ್ತಲೆ ಪೋಟೋ ಇಟ್ಟುಕೊಂಡು ಹಾಸನ (Hassan)ದ ಪೇಸ್ಬುಕ್ ಗೆಳತಿಯಿಂದ ಲಕ್ಷಾಂತರ ರೂಪಾಯಿ ವಂಚನೆ (Cheating) ಎಸಗಿದ ಪ್ರಕರಣದ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಹಿಂದೆ ವಂಚಕಿಯ ಗಂಡನ ಕೈವಾಡವೂ ಇರುವುದು ಬೆಳಕಿಗೆ ಬಂದಿದೆ. ಮಹಿಳೆಯನ್ನ ಬಂಧಿಸಿದ ವಿಜಯಪುರ ಸಿಇಎನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸತ್ಯ ಬಾಯಿಬಿಟ್ಟ ವಂಚಕಿ, ಯುವನಿಗೆ ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಹಾಗೂ ಈ ಪ್ರಕರಣದಲ್ಲಿ ತನ್ನ ಗಂಡನೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ತಲೆಮರೆಸಿಕೊಂಡಿರುವ ವಂಚಕಿಯ ಪತಿಯ ಬಂಧನಕ್ಕೆ ಪೊಲೀಸರು ಶೂಧಕಾರ್ಯ ಮುಂದುವರಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ದಾಸರಹಳ್ಳಿ ಗ್ರಾಮದ ದಂಪತಿಯಾಗಿರುವ ಮಂಜುಳಾ ಮತ್ತು ಸ್ವಾಮಿ ಒಟ್ಟು ಸೇರಿ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ವಂಚನೆ ಮಾಡಿದ್ದಾರೆ. ಆರಂಭದಲ್ಲಿ ಫೇಸ್ಬುಕ್ನಲ್ಲಿ ಪರಮೇಶ್ವರ ಹಿಪ್ಪರಗಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಮಂಜುಳಾ, ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ. ದಿನಗಳು ಉರುಳುತ್ತಿದ್ದಂತೆ ಅದನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕಿಸಲು ಯೋಜನೆ ರೂಪಿಸಿದ್ದಾಳೆ.
ಸಲುಗೆಯಿಂದ ಮಾತನಾಡುತ್ತಿದ್ದ ಮಂಜುಳಾ, ಬೆತ್ತಲೆ ಸ್ನಾನ ಮಾಡುವಂತೆ ಯುವಕನನ್ನು ಒತ್ತಾಯಿಸಿ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದಾಳೆ. ಬಳಿಕ ಫೋಟೋ ಮುಂದಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾನಕ್ಕೆ ಅಂಜಿದ ಪರಮೇಶ್ವರ 39,04,870 ಹಣವನ್ನು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಪರಮೇಶ್ವರ ಕಳುಹಿಸಿದ ಹಣದಲ್ಲಿ 100 ಗ್ರಾಂ ಬಂಗಾರ, ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಳು, ಜೊತೆಗೆ ದಾಸರಹಳ್ಳಿ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪರಮೇಶ್ವರ ಅವರಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯಿಸಿ ಅವನು ಸ್ನಾನ ಮಾಡುವಾಗ ವಿಡಿಯೊ ಕಾಲ್‍ನ ಸ್ಕ್ರಿನ್‍ಶಾಟ್ ಪಡೆದು, ಹಣ ಕೊಡು ಇಲ್ಲದಿದ್ದರೆ ನಿನ್ನ ಬೆತ್ತಲೆ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ವಂಚನೆ ಪ್ರಕರಣ ಸಂಬಂಧ ಪರಮೇಶ್ವರ ಅವರು ವಿಜಯಪುರ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಯ ಬಂಧನಕ್ಕೆ ತನಿಖೆ ಆರಂಭಿಸಿದ್ದರು. ತನಿಖಾ ತಂಡವು ಆರೋಪಿತರ ಮೊಬೈಲ್ ಲೊಕೇಶನ್ ಹಾಗೂ ಮೊಬೈಲ್ ಸಿಮ್ ಮಾಹಿತಿ ಹಾಗೂ ಬ್ಯಾಂಕ್ ಕೆವೈಸಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಮಂಜುಳಾಗೆ ಸಹಕಾರ ನೀಡಿದ ಆಕೆಯ ಪತಿ ಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Fri, 2 December 22