ಕೊಟ್ಟಾಯಂ: ಕಳೆದ 6 ವರ್ಷಗಳಿಂದ ತನ್ನ ಗಂಡ ಊಟ ಮಾಡುವ ಆಹಾರದಲ್ಲಿ ಡ್ರಗ್ಸ್ (Drugs) ಬೆರೆಸುತ್ತಿದ್ದ ಆರೋಪದಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯನ್ನು ಬಂಧಿಸಲಾಗಿದೆ. ಈ ಕುರಿತು 38 ವರ್ಷದ ಸತೀಶ್ ನೀಡಿದ ದೂರಿನ ಆಧಾರದಲ್ಲಿ 36 ವರ್ಷದ ಆಶಾ ಸುರೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ 2006ರಲ್ಲಿ ಮದುವೆಯಾಗಿದ್ದರು. ಅವರಿಬ್ಬರೂ ಮದುವೆಯಾದ ಬಳಿಕ ಪಾಲಾದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಸತೀಶ್ ತನ್ನ ವ್ಯವಹಾರದಲ್ಲಿ ಭಾರೀ ಕಷ್ಟಪಟ್ಟಿದ್ದರು. ಆದರೆ 2012ರಲ್ಲಿ ಅವರು ಐಸ್ಕ್ರೀಮ್ ಉದ್ಯಮಕ್ಕೆ ಸೇರಿದ ನಂತರ ಅವರ ಬದುಕೇ ಬದಲಾಯಿತು. ನಂತರ ಈ ದಂಪತಿ ಪಾಲಕ್ಕಾಡ್‌ನಲ್ಲಿ ಸ್ವಂತ ಮನೆಯನ್ನು ಖರೀದಿಸಿದ್ದರು.
ಕ್ಷುಲ್ಲಕ ವಿಚಾರಕ್ಕೆ ಆಶಾ ತನ್ನ ಗಂಡ ಸತೀಶ್ ಜೊತೆ ಜಗಳವಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲವು ಸಮಯದಿಂದ ಸತೀಶ್ ದಿನವೂ ಬಹಳ ಸುಸ್ತಾಗುತ್ತಿದ್ದರು. ತಮ್ಮ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಗಮನಿಸಿದ ಸತೀಶ್ ವೈದ್ಯರನ್ನು ಸಂಪರ್ಕಿಸಿದರು. ಆಗ ಅವರ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುವುದೇ ಸುಸ್ತಾಗುತ್ತಿರುವುದಕ್ಕೆ ಕಾರಣವಿರಬಹುದು ಎಂದು ವೈದ್ಯರು ಹೇಳಿದರು. ಆದರೆ, ಔಷಧ ಸೇವಿಸಿದರೂ ಅವರ ಆರೋಗ್ಯ ಸುಧಾರಿಸಿರಲಿಲ್ಲ.
2021ರ ಸೆಪ್ಟೆಂಬರ್ನಲ್ಲಿ ಸತೀಶ್ ತಮ್ಮ ಮನೆಯಲ್ಲಿ ಆಹಾರ ಸೇವಿಸುವುದನ್ನು ಬಿಟ್ಟರು. ಅದಾದ ನಂತರ ಅವರು ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವುದನ್ನು ಗಮನಿಸಿದರು. ಇದರಿಂದ ತಮ್ಮ ಆರೋಗ್ಯ ಹದಗೆಡಲು ಹೆಂಡತಿಯೇ ಕಾರಣವಿರಬಹುದು ಎಂಬ ಅನುಮಾನ ಮೂಡಿತ್ತು. ಹೀಗಾಗಿ, ಆಶಾ ತಯಾರಿಸುವ ಆಹಾರಕ್ಕೆ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಪತ್ತೆಹಚ್ಚಲು ಅವರು ತನ್ನ ಸ್ನೇಹಿತೆಯ ಬಳಿ ಸಹಾಯ ಕೇಳಿದರು.
ಅದರಂತೆ ಸತೀಶನ ಸ್ನೇಹಿತೆ ಆಶಾಳನ್ನು ಸಂಪರ್ಕಿಸಿದಾಗ ಆಕೆ ಸತೀಶ್‌ನ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದಳು ಎಂಬುದು ಗೊತ್ತಾಯಿತು. ಆಕೆ ವಾಟ್ಸಾಪ್ನಲ್ಲಿ ಸತೀಶ್ಗೆ ಅದರ ಫೋಟೋವನ್ನು ಕಳುಹಿಸಿದಳು. ಅದರಿಂದ ಶಾಕ್ ಆದ ಸತೀಶ್ ತನ್ನ ಮನೆಯೊಳಗಿನ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರ ಪ್ರಕಾರ, ಸತೀಶ್ ಕಚೇರಿಗೆ ಕೊಂಡೊಯ್ದ ಆಹಾರ ಮತ್ತು ನೀರಿಗೂ ಹೆಂಡತಿ ಡ್ರಗ್ಸ್ ಬೆರೆಸುತ್ತಿದ್ದಳು. ಸತೀಶ್ ತನ್ನ ಸಂಪತ್ತು ಅಥವಾ ಆಸ್ತಿಯಿಂದ ತನ್ನ ಹೆಂಡತಿಗೆ ಏನನ್ನೂ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆಕೆ 6 ವರ್ಷಗಳಿಂದ ಗಂಡನ ಆಹಾರಕ್ಕೆ ಡ್ರಗ್ಸ್ ಬೆರೆಸುತ್ತಿದ್ದಳು.
ಈ ಕುರಿತು ಪೊಲೀಸರ ಎದುರು ತಪ್ಪೊಪ್ಪಿಕೊಂಡಿರುವ ಆಕೆ ತನ್ನ ಗಂಡ ಎಲ್ಲ ಆಸ್ತಿಯನ್ನು ತನ್ನ ಕುಟುಂಬ ಸದಸ್ಯರು ಮತ್ತು ತಮ್ಮಂದಿರಿಗೆ ನೀಡಿದ್ದರಿಂದ ಕೋಪಗೊಂಡು ಈ ರೀತಿ ಮಾಡಿದ್ದಾಗಿ ಹೇಳಿದ್ದಾಳೆ. ಈ ಕುರಿತು ಪೊಲೀಸ್ ತನಿಖೆಗಳು ನಡೆಯುತ್ತಿವೆ.
ಇದನ್ನೂ ಓದಿ: Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?