ಓದನ್ನ ಅರ್ಧಕ್ಕೆ ನಿಲ್ಲಿಸಿ ಲವ್ವಲ್ಲಿ ಬಿದ್ದಿದ್ದ ಸುಂದರಿ, ಎರಡನೆಯವನ ಸಂಗದಲ್ಲಿದ್ದಳು! ಪ್ರೀತಿಯ ಅರಸಿ ಬಂದವಳು ನಿಗೂಢವಾಗಿ ಹೆಣವಾದಳು!

| Updated By: ಸಾಧು ಶ್ರೀನಾಥ್​

Updated on: Dec 17, 2022 | 12:10 PM

Living Together: ಇತ್ತ ಹೆತ್ತವರಿಗೆ ತಾನು ಬೆಂಗಳೂರಿನಲ್ಲಿದ್ದೀನಿ, ಪಿಜಿಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದೀನಿ ಎಂದು ಹೇಳಿಕೊಂಡಿದ್ದಳು. ಮನೆಯರವನ್ನ ನೋಡಬೇಕು ಅಂದ್ರೆ ಊರಿಗೆ ಹೋಗಿ ಬರ್ತಿದ್ದಳು. ಆದ್ರೆ ಇಲ್ಲಿ ತಾನು ಅವಿನಾಶ್ ಜೊತೆಗೆ ಲಿವಿಂಗ್ ಟುಗೆದರ್ ನಲ್ಲಿಇರುವುದನ್ನ ಹೇಳಿಕೊಂಡಿರಲಿಲ್ಲ.

ಓದನ್ನ ಅರ್ಧಕ್ಕೆ ನಿಲ್ಲಿಸಿ ಲವ್ವಲ್ಲಿ ಬಿದ್ದಿದ್ದ ಸುಂದರಿ, ಎರಡನೆಯವನ ಸಂಗದಲ್ಲಿದ್ದಳು! ಪ್ರೀತಿಯ ಅರಸಿ ಬಂದವಳು ನಿಗೂಢವಾಗಿ ಹೆಣವಾದಳು!
ಓದನ್ನ ಅರ್ಧಕ್ಕೆ ನಿಲ್ಲಿಸಿ ಲವ್ವಲ್ಲಿ ಬಿದ್ದಿದ್ದ ಸುಂದರಿ, ಎರಡನೆಯವನ ಸಂಗದಲ್ಲಿದ್ದಳು!
Follow us on

ಇದು ಓರ್ವ ಸುಂದರಿಯ (woman) ದುರಂತ ಅಂತ್ಯದ ಕತೆ. ಪ್ರೀತಿ ಪ್ರೇಮ (love affair) ಅಂತಾ ಎರಡೆರಡು ಬಾರಿ ಎಡವಿ ಬದುಕನ್ನೇ ಕೊನೆಗಾಣಿಸಿಕೊಂಡ ನತದೃಷ್ಟಳೊಬ್ಬಳ ದಾರುಣ ಕತೆ… ಆಕೆ ಸುಂದರಿ… ಮೊದಲ ನೋಟದಲ್ಲೇ ಎಂತಹವರನ್ನು ಸೆಳೆಯೋ ಅಪ್ಸರೆ…ಟಿಕ್ ಟಾಕ್ ಮಾಡೋಕೆ ನಿಂತ್ರೆ ಯಾವ ಕಲಾವಿದೆಗೂ ಕಡಿಮೆಯಿಲ್ಲ. ಯಾವುದೇ ಹೀರೊಯಿನ್ ಗೂ ಕಮ್ಮಿಯಿಲ್ಲ ಎನ್ನುವ ಆಕ್ಟಿಂಗ್. ಅಬ್ಬ ಪಾದರಸದಂತೆ ಆಕ್ಟೀವ್ ಆಗಿರುವ ಆಕೆಯ ಲವಲವಿಕೆ ನೋಡಿದರೆ ನಿಜಕ್ಕೂ ಈಕೆಯ ಬದುಕಿನಲ್ಲಿ ಇದೆಂತಹಾ ಘೋರ (murder) ನಡೆದು ಹೋಯ್ತು ಎಂದು ನೀವು ಮರುಕ ಪಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂದಹಾಗೆ ವಿವಿಧ ಹಾಡುಗಳಿಗೆ ತುಟಿಸೇರಿಸಿ, ಟಿಕ್ ಟಾಕ್ ಮೂಲಕ ಸೆಳೆಯುತ್ತಿರೋ ಈಕೆಯ ಹೆಸರು ಕಾವ್ಯಾ. ಇನ್ನೂ 22ರ ಪ್ರಾಯದ ಈಗೆ ಈಗ ಬದುಕಿಲ್ಲ ಎನ್ನೋದೆ ದುರಂತ.. ಮೂಲತಃ ಹಾಸನ ಜಿಲ್ಲೆ (Hassan) ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸಮೀಪದ ಮದಲಾಪುರ ಗ್ರಾಮದ ಕಾವ್ಯಾ ಬಿಬಿಎಂ ಓದುತ್ತಿದ್ದಳು.. ಕಾಲೇಜು ಮಟ್ಟಿಲು ಹತ್ತಿದ ವೇಳೆಗೆ ಲವ್ವಲ್ಲಿ ಬಿದ್ದಿದ್ದ ಸುಂದರಿ ಓದಿನ ಕಡೆಗೆ ಆಸಕ್ತಿ ಕಳೆದುಕೊಂಡಿದ್ದಳು. ಇಷ್ಟಪಟ್ಟವನನ್ನೇ ಮದುವೆಯಾಗ್ತೀನಿ, ಅವನ ಜೊತೆಗೇ ಬದುಕು ಕಟ್ಟಿಕೊಳ್ತಿನಿ ಎಂದು ಓದನ್ನ ಅರ್ಧಕ್ಕೆ ನಿಲ್ಲಿಸಿ ಮದುವೆ ಮಾಡಿಕೊಂಡು ಗಂಡನ ಜೊತೆ ಸೇರಿಕೊಂಡಿದ್ದಳು.

ಬೆಂಗಳೂರಿನಲ್ಲಿ ಪ್ರೇಮಿ ಜೊತೆ ಸೇರಿ ಕೆಲಸಕ್ಕೆ ಸೇರಿಕೊಂಡು ಬದುಕು ಕಟ್ಟಿಕೊಳ್ಳೋಕೆ ಶುರುಮಾಡಿದ್ದಳು. ಮದುವೆಯಾಗಿ ಕೇವಲ ಮೂರೇ ವರ್ಷಕ್ಕೆ ನಡೆಯಬಾರದ್ದು ನಡದು ಹೋಗಿದೆ. ಇನ್ನೂ ಜೀವನದಲ್ಲಿ ಬಹಳ ದೂರ ಕ್ರಮಿಸಬೇಕಿದ್ದವಳು ಅದೇ ಪ್ರೀತಿಯಿಂದಲೇ ದಾರುಣವಾಗಿ ಬಲಿಯಾಗಿ ಹೋಗಿದ್ದಾಳೆ. ಎರಡೆರಡು ಬಾರಿ ಪ್ರಿತಿಯಲ್ಲಿ ಸಿಲುಕಿ ನರಳಾಡಿ ಕಡೆಗೆ ಜೀವನ ಯಾನವನ್ನೇ ಮುಗಿಸಿ ಕಣ್ಣೀರು ಉಳಿಸಿಹೋಗಿದ್ದಾಳೆ. ಅಷ್ಟಕ್ಕೂ ಈ ಸುಂದರಿ ಬಾಳಲ್ಲಿ ಆಗಿದ್ದೇನು ಎಳೆ ಎಳೆಯಾಗಿ ಬಿಡಿಸಿ ಹೇಳ್ತೀವಿ ಓದಿ.

ಪ್ರೀತಿಸಿ ಹಿಂದೆ ಬಿದ್ದವಳನ್ನ ಕೊಂದನಾ ಪ್ರೇಮಿ…

ಸುಂದರವಾದ ಕಾವ್ಯ ಕವಿತೆಗಳಂತೆ ಸುಂದರವಾಗಿದ್ದ ಕಾವ್ಯ ಬಿಬಿಎಂ ಓದುವಾಗಲೇ ಪ್ರೀತಿಗೆ ಬಿದ್ದು ಮದುವೆಯಾಗಿಬಿಟ್ಟಿದ್ದಳು. ಆದ್ರೆ ಒಂದೇ ವರ್ಷಕ್ಕೆ ಪ್ರೀತಿಸಿದವ ಕೈಕೊಟ್ಟಿದ್ದ. ಪ್ರೀತಿಸಿ ಮದುವೆಯಾಗಿದ್ದ ದಾಂಪತ್ಯ ಬದುಕು ಒಂದೇ ವರ್ಷಕ್ಕೆ ಅಂತ್ಯವಾದಾಗ ಕುಸಿದು ಹೋಗಿದ್ದ ಕಾವ್ಯ, ವಾಪಸ್ ತವರಿಗೆ ಬಂದಿದ್ದಳು. ಕೋವಿಡ್ ಕಾರಣದಿಂದ ಬೆಂಗಳೂರಿನಿಂದ ತಮ್ಮ ಹುಟ್ಟೂರಿಗೆ ಬಂದು, ಪೋಷಕರು ನೆಲೆಸಿದ್ದ ಊರಿನಲ್ಲೆ ಹೊಸ ಜೀವನ ಶುರುಮಾಡಿದ್ದಳು.

ಆದ್ರೆ ಈ ನಡುವೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿಯ ಅವಿನಾಶ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಕಾವ್ಯಾ ಆತನ ಸ್ನೇಹಕ್ಕೆ ಬಿದ್ದಿದ್ದಳು. ಸ್ನೇಹ ಪ್ರೀತಿಯಾಗಿ ಇಬ್ಬರೂ ಇಷ್ಟಪಟ್ಟಿದ್ದರು. ಮೊದಲ ಪ್ರೀತಿಯಲ್ಲಿ ಸೋತು ಹೋಗಿದ್ದ ಕಾವ್ಯಾ ಎರಡನೇ ಪ್ರೀತಿಯಲ್ಲಾದರೂ ಸುಂದರ ಬದುಕು ಕಟ್ಟಿಕೊಳ್ಳೋಣ ಕನಸು ಕಾಣುತ್ತಿದ್ದಳು. ಅದಕ್ಕೆ ಪೂರಕವಾಗಿ ಅವಿನಾಶ್ ಕೂಡ ಹೇಗೂ ನಾನು-ನೀನು ಇಷ್ಟಪಟ್ಟಿದ್ದೀವಿ. ನೀನು ಬೇರೆ ಕಡೆ ಇರೋದು ಬೇಡಾ. ನಮ್ಮ ಮನೆಯಲ್ಲೇ ಇದ್ದುಬಿಡು ಎಂದು ತನ್ನ ಊರು ಪಾಸರನಹಳ್ಳಿಗೆ ಕರೆದೊಯ್ದಿದ್ದ ಅವಿನಾಶ್.

ಇತ್ತ ಹೆತ್ತವರಿಗೆ ತಾನು ಬೆಂಗಳೂರಿನಲ್ಲಿದ್ದೀನಿ, ಪಿಜಿಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದೀನಿ ಎಂದು ಹೇಳಿಕೊಂಡಿದ್ದ ಕಾವ್ಯಾ ಆಗಾಗ ಮನೆಯವರಿಗೆ ಫೋನ್ ಮಾಡುತ್ತಿದ್ದಳು. ಮನೆಯರವನ್ನ ನೋಡಬೇಕು ಅಂದ್ರೆ ಊರಿಗೆ ಹೋಗಿ ಬರ್ತಿದ್ದಳು. ಆದ್ರೆ ಇಲ್ಲಿ ತಾನು ಅವಿನಾಶ್ ಜೊತೆಗಿರೋದನ್ನ ಹೇಳಿಕೊಂಡಿರಲಿಲ್ಲ. ಮದುವೆಯಾದ ಬಳಿಕ ಹೇಳೋಣ ಎಂದು ಸುಮ್ಮನಿದ್ದಳೋ ಏನೋ.

ಎಲ್ಲವನ್ನು ಮುಚ್ಚಿಟ್ಟಿದ್ದ ಕಾವ್ಯಾ ನವೆಂಬರ್ 25ರಿಂದ ಮನೆಗೆ ಫೋನ್ ಮಾಡೋದನ್ನ ನಿಲ್ಲಿಸಿದ್ದಾಳೆ. ವಾಯ್ಸ್ ಮೆಸೇಜ್ ಕೂಡ ಮಾಡಿಲ್ಲ. ಅಲ್ಲಿಗೆ ಒಂದೂವರೆ ವರ್ಷದಿಂದ ಮೊದಲ ಪ್ರೀತಿ ಕೈಕೊಟ್ಟ ಬಳಿಕ ಸಂಪರ್ಕದಲ್ಲಿದ್ದ ಮಗಳು ಏಕಾಏಕಿ ಸಂಪರ್ಕ ಕಡಿದುಕೊಂಡಾಗ ಮನೆಯವರಿಗೂ ಆತಂಕ ವಾಗಿತ್ತು. ಆದ್ರೆ ಎಲ್ಲಿಗೆ ಹೋಗ್ತಾಳೆ? ವಾಪಸ್ ಬರ್ತಾಳೆ ಅನ್ನೋ ನಿರೀಕ್ಷೆಯಲ್ಲೇ ಇದ್ದರು. ಆದ್ರೆ ಆಕೆ ಬರಲಿಲ್ಲ… ಬದಲಾಗಿ ಆಕೆಯ ಹೆಸರು ಹೇಳಿಕೊಂಡು ಫೋನ್ ಕರೆಯೊಂದು ಬಂದಿತ್ತು.

ಹಾಗೆ ಬಂದ ಕರೆ ಹೊಳೆನರಸೀಪುರ ನಗರ ಠಾಣೆಯಿಂದಾಗಿತ್ತು. ಫೋನ್ ಮಾಡಿದ್ದ ಪೊಲೀಸರು ನಿಮ್ಮ ಮಗಳು ಎಲ್ಲಿದ್ದಾಳೆ? ಏನು ಮಾಡಿಕೊಂಡಿದ್ದಾಳೆ? ಎಂದು ಕೇಳಿದ್ದಾರೆ. ಆಗ ಬೆಂಗಳೂರಿನಲ್ಲಿ ಪಿಜಿ ಯಲ್ಲಿದ್ದುಕೊಂಡು ಕೆಲಸ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಹೇಳಿದಾಗ ಪೊಲೀಸರು ಬೇರೆಯದೇ ವಿಚಾರ ಹೇಳಿದ್ದಾರೆ. ನಿಮ್ಮ ಮಗಳು ಇದ್ದದ್ದು ಬೆಂಗಳೂರಿನಲ್ಲಿ ಅಲ್ಲ, ಬದಲಿಗೆ ಹಾಸನದ ಒಂದು ಹಳ್ಳಿಯಲ್ಲಿ. ಅವಿನಾಶ್ ಎಂಬುವವನ ಜೊತೆಗಿದ್ದಳು. ಈಗ ಆಕೆ ಮೃತಪಟ್ಟು ಕಬ್ಬಿನ ಗದ್ದೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎನ್ನೋ ಶಾಕಿಂಗ್ ಮಾಹಿತಿ ಹೇಳಿದ್ದರು.

ಕುಸಿದು ಹೋಗಿದ್ದ ಮನೆಯವರು ಓಡೋಡಿ ಬಂದಿದ್ದರು. ಮಗಳನ್ನ ಹಲ್ಲೆ ಮಾಡಿ ಕೊಂದು ಹೂತು ಹಾಕಲಾಗಿದೆ ಎಂದು ದೂರು ನೀಡಿದ್ರು, ಪೋಷಕರ ದೂರು ಸ್ವೀಕಾರ ಮಾಡಿದ್ದ ಪೊಲೀಸರು ಆರೋಪಿ ಅವಿನಾಶನನ್ನ ಬಂಧಿಸಿ ತನಿಖೆ ಶುರು ಮಾಡಿದ್ದರು. ಅಲ್ಲಿಗೆ ಮೊದಲ ಪ್ರೀತಿ ಕೈಕೊಟ್ಟು ಮತ್ತೊಬ್ಬನ ಜೊತೆಗೆ ಹೊಸ ಜೀವನ ಶುರು ಮಾಡೋ ನಿರೀಕ್ಷೆಯಲ್ಲಿದ್ದ ಕಾವ್ಯಾಳ ಬದುಕು ದಾರುಣವಾಗಿ ಅಂತ್ಯವಾಗಿತ್ತು. ಮದುವೆ ಆಗ್ತೀನಿ ಎಂದು ನಂಬಿಸಿ ಕರೆದೊಯ್ದವನೇ ಹತ್ಯೆ ಮಾಡಿಬಿಟ್ಟನಾ ಎನ್ನೋ ಅನುಮಾನ ಮೂಡುವಂತೆ ಮಾಡಿತ್ತು.

ಒಂದು ತಿಂಗಳು ನಿಗೂಢ ನಾಪತ್ತೆ! ತನಿಖೆ ಮಾಡಿದಾಗ ಬಯಲಾಗಿದ್ದು ಸಾವಿನ ಸತ್ಯ

ಕಾವ್ಯಾ-ಅವಿನಾಶ್ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದರು. ಫೇಸ್ ಬುಕ್ ಸ್ನೇಹ ಇಬ್ಬರನ್ನೂ ಒಂದು ಮಾಡಿತ್ತು. ಪರಸ್ಪರ ಇಷ್ಟಪಟ್ಟು ಜೊತೆಯಾಗುವಂತೆ ಮಾಡಿತ್ತು. ನಗರದಲ್ಲಿ ನಡೆದಿದ್ದ ಲೀವಿಂಗ್ ಟುಗೆದರ್ ಸಂಬಂಧ ಹಳ್ಳಿಗೆ ಶಿಫ್ಟ್​ ಆಗಿತ್ತು. ಈ ಜೋಡಿ ಒಂದೂವರೆ ವರ್ಷದಿಂದ ಮದುವೆಯಾಗ್ತೀವಿ ಎಂದು ಜೊತೆ ಜೊತೆಯಾಗೇ ಇದ್ದುಬಿಟ್ಟಿದ್ದರು. ಆದ್ರೆ ಒಂದುವರೆ ವರ್ಷದಿಂದ ಊರಿನಲ್ಲಿ ಓಡಾಡಿಕೊಂಡಿದ್ದ ಹುಡುಗಿ ನವೆಂಬರ್ 25ರಿಂದ ದಿಢೀರ್ ನಾಪತ್ತೆಯಾಗಿಬಿಟ್ಟಿದ್ದಳು. ಏನಾಯ್ತು ಅನ್ನೋದು ಯಾರೊಬ್ಬರಿಗೂ ಗೊತ್ತಿಲ್ಲದಿದ್ದರೂ ಏನೋ ಆಗಿದೆ ಅನ್ನೂ ಗುಸುಗುಸು ಊರ ತುಂಬ ಹಬ್ಬಿತ್ತು.

ಏನೋ ಆಗಿದೆ ಅನ್ನೋದು ಜನರ ಬಾಯಲ್ಲಿ ಓಡಾಡೋಕೆ ಶುರುವಾದಾಗ ಹೊಳೆನರಸೀಪುರ ನಗರ ಠಾಣೆಗೆ ಪಾಸರನಹಳ್ಳಿ ಬೀಟ್ ಪೊಲೀಸ್ ರಿಗೆ ಈ ಮಾಹಿತಿ ಕಿವಿಗೆ ಬಿದ್ದಿದೆ. ಕೂಡಲೆ ತಡಮಾಡದ ಪಿಎಸ್ ಐ ಅರುಣ್ ಅವಿನಾಶ್ ನನ್ನ ಠಾಣೆಗೆ ಕರೆಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿದ್ದ ಹುಡುಗಿ ಎಲ್ಲಿಗೆ ಹೋದಳು ಎಂದು ವಿಚಾರ ಮಾಡಿದ್ದಾರೆ. ಮೊದ ಮೊದಲು ಏನೂ ಬಾಯಿ ಬಿಡದ ಆಸಾಮಿ ಕಡೆಗೆ ನಡೆದ ಸತ್ಯ ಕಕ್ಕಿದ್ದಾನೆ. ಆಕೆ ತಮ್ಮ ಮನೆಯಲ್ಲಿ ಇದ್ದಳು, ನಂತರ ಮೃತಪಟ್ಟಿದ್ದು ಆಕೆಯ ಮೃತದೇಹವನ್ನ ತಮ್ಮದೇ ಕಬ್ಬಿನ ಗದ್ದೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೂತು ಹಾಕಿರೋ ಸತ್ಯ ಬಾಯ್ಬಿಟ್ಟಿದ್ದ.

ವಾಸ್ತವದಲ್ಲಿ ಆಕೆ ಸಾವು ಹೇಗಾಗಿದೆ ಅನ್ನೋದು ನಿಗೂಢವಾಗಿಯೇ ಇದ್ದರೂ… ಅಂತೂ ನಿಗೂಢವಾಗಿ ನಾಪತ್ತೆಯಾಗಿದ್ದ ಸುಂದರಿ ಇನ್ನು ಬದುಕಿಲ್ಲ ಅನ್ನೋದು ಖಾತ್ರಿಯಾಗಿತ್ತು. ಕೂಡಲೆ ತಡಮಾಡದ ಸಿಪಿಐ ಪ್ರದೀಪ್ ಮತ್ತು ತಂಡ ಕಾವ್ಯಾ ಪೋಷಕರಿಗೆ ವಿಚಾರ ತಿಳಿಸಿ ಕರೆಸಿಕೊಂಡಿದ್ದರು. ಅವರು ನೀಡಿದ ಕೊಲೆ ಕೇಸ್ ಆಧರಿಸಿ ಕೇಸ್ ದಾಖಲಿಸಿ ತಹಸಿಲ್ದಾರ್ ಮೂಲಕ ಹೂತಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಇನ್ನೂ 22ರ ವಯಸ್ಸಿನ ಸುಂದರಿ ಸಾವು ಹೇಗಾಗಿದೆ ಎನ್ನೋದರ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಅವಿನಾಶ್ ತಾನು ಕಾವ್ಯಾಳನ್ನ ಮದುವೆಯಾಗೋದಾಗಿ ಕರೆದತಂದು ಒಂದೂವರೆ ವರ್ಷ ಆಗಿತ್ತು,. ಆಕೆ ಮೊದಲೇ ಬೇರೊಬ್ಬನನ್ನ ಮದುವೆಯಾಗಿದ್ದರಿಂದ ಆಕೆಯನ್ನ ಮದುವೆಯಾಗಲು ಇಷ್ಟವಿಲ್ಲದೆ ಹಾಗೇ ಕಾಲ ತಳ್ಳುತ್ತಿದ್ದೆ. ಆದ್ರೆ ಮೊದಲ ಪ್ರೀತಿ ಕೈಕೊಟ್ಟಿದೆ, ಎರಡನೆಯವನೂ ಹೀಗೆ ಕಾಲಹರಣ ಮಾಡುತ್ತಿದ್ದಾನೆಂದು ಬೇಸರದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ವಿಚಾರ ಹೊರಗೆ ಗೊತ್ತಾದರೆ ತನಿಖೆ ಅದು ಇದು ಅಂತಾ ಸಮಸ್ಯೆ ಆಗುತ್ತೆ. ಇವಳಿಗೆ ಹಿಂದುಮುಂದು ಯಾರಿಲ್ಲ ಎಂದು ತಿಳಿದು ತಾನೇ ದಫನ್ ಮಾಡಿಬಿಟ್ಟೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಇದು ಆತ್ಮಹತ್ಯೆಯೋ ಅಥವಾ ಮದುವೆಯಾಗೋದಾಗಿ ನಂಬಿಸಿ ಕರೆತಂದು ಮೋಸ ಮಾಡಿ ಮಗಳನ್ನ ಕೊಂದು ಅವಿನಾಶ್ ನಾಟಕ ಮಾಡುತ್ತಿದ್ದಾನಾ ಅನ್ನೋದು ಪೋಷಕರ ದೂರಾಗಿದೆ. ಯಾರ ಅಭಿಪ್ರಾಯ ಏನೇ ಇದ್ದರೂ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಲಿದೆ.

ಸಾವಿನಲ್ಲಿ ಅಂತ್ಯವಾದ ಲಿವಿಂಗ್ ಟುಗೆದರ್

ಆನ್ಲೈನ್ ಟ್ರೇಡ್ ಒಂದರ ಮೇಲ್ವಿಚಾರಕನಾಗಿದ್ದ ಅವಿನಾಶ್ ಗೆ ಸುಂದರಿ ಕಾವ್ಯಾಳ ಫೇಸ್ ಬುಕ್ ಅಕೌಂಟ್ ಹೇಗೋ ಕಂಡಿದೆ. ಕೂಡಲೆ ಟಿಕ್ ಟಾಕ್ ಮೂಲಕ ಎಲ್ಲರನ್ನ ಸೆಳೆಯುತ್ತಿದ್ದ ಕಾವ್ಯಾಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ಆಕಡೆಯಿಂದ ಆಕೆಯೂ ಅಕ್ಸೆಪ್ಟ್ ಮಾಡಿದ್ದಳು. ಹಾಗೇ ಚಾಟಿಂಗ್ ಶುರುವಾಗಿ ಇಬ್ಬರೂ ಪರಿಚಯವಾಗಿದ್ದಾರೆ. ಕಡೆಗೆ ಮನೆಯವರಿಗೆ ತಾನು ಬೆಂಗಳೂರಿಗೆ ಹೋಗ್ತೀನಿ ಎಂದು ಸುಳ್ಳು ಹೇಳಿ ಹಾಸನಕ್ಕೆ ಬಂದು ಅವಿನಾಶ್ ಜೊತೆಗೆ ಲಿವಿಂಗ್ ಟುಗೆದರ್ ಎಂದು ಅವರ ಮನೆ ಸೇರಿಕೊಂಡಿದ್ದಾಳೆ.

ಮದುವೆ ಆಗ್ತಾನೆ ಅನ್ನೋ ನಿರೀಕ್ಷೆಯಲ್ಲಿ ಒಂದೂವರೆ ವರ್ಷ ಕಾದಿದ್ದಾಳೆ. ಆದ್ರೆ ಮದುವೆ ಎಂಬುದು ಈಗಲೋ ಆಗಲೋ ಆಗುತ್ತೆ ಎಂದು ಕಾಲಹರಣ ಮಾಡುತ್ತಿದ್ದ ಅವಿನಾಶ್. ಆರು ತಿಂಗಳ ಹಿಂದೆ ತಾನು ಮಾಡುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲೇ ಕುರಿ ಸಾಕಣಿಕೆ ಶುರುಮಾಡಿಕೊಂಡಿದ್ದ. ಆದ್ರೆ ಲಿವಿಂಗ್ ಟುಗೆದರ್ ಅಂತಾ ಕಾವ್ಯಾಳನ್ನ ಮಡದಿಯಂತೆ ಜೊತೆಗಿಟ್ಟುಕೊಂಡಿದ್ದ. ಅವಿನಾಶ್ ಮದುವೆಯಾಗದೆ ಕಾಲಹರಣ ಮಾಡಿದ್ದರಿಂದ ಇಬ್ಬರ ನಡುವೆ ಜಗಳ ಕೂಡ ಆಗಿದೆ. ಆದ್ರೆ ಬಳಿಕ ನವೆಂಬರ್ 25ರ ನಂತರ ಆಕೆ ನಿಗೂಢವಾಗಿ ನಾಪತ್ತೆಯಾಗಿ ಇದೀಗ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿರೊ ಪೊಲೀಸರು ಕೊಲೆ ಕೇಸ್ ಅಡಿಯಲ್ಲೇ ತನಿಖೆ ಶುರುಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಹಿಂದಿನ ಅಸಲಿ ಕಾರಣ ತಿಳಿಯಲಿದೆ.

ಸುಂದರಿಯದ್ದು ಕೊಲೆಯೋ, ಆತ್ಮಹತ್ಯೆಯೋ…

ಹಳ್ಳಿಯ ಬೀಟ್ ಪೊಲೀಸ್ ಒಬ್ಬರ ಕಿವಿಗೆ ಬಿದ್ದಿದ್ದ ಅದೊಂದೇ ಒಂದು ಸಣ್ಣ ಸುಳಿವಿನ ಬೆನ್ನು ಬಿದ್ದ ಪೊಲೀಸರು ಮುಚ್ಚೇಹೋಗಬಹುದಾಗಿದ್ದ ಒಂದು ಸಾವಿನ ಕೇಸ್ ಅನ್ನು ಬಯಲಿಗೆಳೆದಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಪದವಿ ಓದುವಾಗಲೇ ಪ್ರೀತಿ ಪ್ರೇಮ ಅಂತಾ ಓದುಬಿಟ್ಟು, ಮದುವೆಯಾಗಿ ಒಂದೇ ವರ್ಷಕ್ಕೆ ಪ್ರೀತಿಸಿದವನಿಂದ ದೂರವಾಗಿ ಬಂದಿದ್ದ ಕಾವ್ಯಾ, ಫೇಸ್ ಬುಕ್ ಮೂಲಕ ಮತ್ತೊಬ್ಬನ ಲವ್ ಬಲೆಗೆ ಬಿದ್ದಿದ್ದಳು. ಕಾವ್ಯಾ ಕಡೆಗೆ ಅದೇ ಪ್ರೇಮಿಯ ಜೊತೆಗೆ ಜೀವನ ಮುಂದುವರೆಸೋ ಕನಸಿನೊಂದಿಗೆ ಅವನ ಮನೆ ಸೇರಿದ್ದಳು.

ಒಂದೂವರೆ ವರ್ಷ ಇಡೀ ಊರಿಗೆ ಊರೇ ಈಕೆ ಅವಿನಾಶ್ ಪತ್ನಿಯಾಗೋಳು ಎಂದು ಮಾತನಾಡಿಕೊಳ್ಳೋ ಅಷ್ಟರಮಟ್ಟಿಗೆ ಆ ಮನೆಯ ಆಗು ಹೋಗಿನಲ್ಲಿ ಭಾಗಿಯಾಗಿದ್ದಳು. ಆದರೆ ನವೆಂಬರ್ 25ರಂದು ಘೋರ ದುರಂತವೊಂದು ನಡೆದು ಹೋಗಿದೆ. ಹೊಸ ಜೀವನದ ನಿರೀಕ್ಷೆಯಲ್ಲಿ ಹಳ್ಳಿ ಸೇರಿದ್ದವಳ ಬದುಕು ಅಂತ್ಯವಾಗಿದೆ. ಆದ್ರೆ ಈ ಸಾವು ಕೊಲೆಯೋ ಆತ್ಮಹತ್ಯೆಯೋ ಅನ್ನೋದು ಎಲ್ಲರನ್ನ ಕಾಡುತ್ತಿದೆ. ಕಾವ್ಯಾ ಹೆತ್ತವರು ಮಗಳನ್ನ ಹತ್ಯೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆರೋಪಿ ಅವಿನಾಶ್ ಮಾತ್ರ ಬೇರೆಯದ್ದೇ ಕತೆ ಹೇಳುತ್ತಿದ್ದಾನೆ. ಪ್ರೀತಿ ನಂಬಿ ಬಂದವಳ ಬದುಕು ಅಂತ್ಯವಾಗಿದ್ದು ಹೇಗೆ? ಹೊಸ ಜೀವನದ ಕನಸಿನಲ್ಲಿ ತೇಲುತ್ತಿದ್ದವಳಿಗೆ ಆಗಿದ್ದೇನು? ಎಲ್ಲವೂ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ

ವರದಿ: ಕೆ.ಬಿ. ಮಂಜುನಾಥ್, ಟಿವಿ 9, ಹಾಸನ