Karnataka 2nd PUC Result 2022: ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ; ಶಿಕ್ಷಣ ಸಚಿವ ಬಿಸಿ ನಾಗೇಶ್
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಏಪ್ರಿಲ್ 22 ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು.
ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪಿಯುಸಿ (Pre University Courses – PUC) ಪರೀಕ್ಷೆಗಳ ಫಲಿತಾಂಶವು ಜೂನ್ 3ನೇ ವಾರದಲ್ಲಿ ಪ್ರಕಟವಾಗಲಿದೆ. ಮುಂದಿನ ವಾರದಿಂದಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ಮುಗಿದಿವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಏಪ್ರಿಲ್ 22 ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು.
ರಾಜ್ಯದ 1,076 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಕಾಲ ಪ್ರಶ್ನೆಪತ್ರಿಕೆಯನ್ನು ಓದುವ ಸಮಯವನ್ನೂ ನೀಡಲಾಗಿತ್ತು. ಒಟ್ಟಾರೆ 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಮತ್ತು 3,37,319 ಬಾಲಕಿಯರು. 6,00,519 ಸಾಮಾನ್ಯ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 21,928 ಮಂದಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡಿದ್ದರು.
ಹಿಂಜಾಬ್ ವಿಚಾರವು ಪರೀಕ್ಷೆ ಸಂದರ್ಭದಲ್ಲಿ ದೊಡ್ಡ ಗೊಂದಲ ಉಂಟುಮಾಡಿತ್ತು. ಹಿಂಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿತ್ತು. ಸರ್ಕಾರದ ನಿರ್ದೇಶನ ಪ್ರತಿಭಟಿಸಿ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಂದ ಹೊರಗೆ ಬಂದಿದ್ದರು. ಆರಂಭದಲ್ಲಿ ಒಂದಿಷ್ಟು ಗೊಂದಲವಾಗಿದ್ದರೂ ನಂತರದ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಪರೀಕ್ಷೆಗಳು ನಡೆದಿದ್ದವು. ಕೊರೊನಾ ಪಿಡುಗಿನ ಕಾರಣ 2021ರಲ್ಲಿ ಪರೀಕ್ಷೆಗಳನ್ನು ನಡೆಸಲು ತೊಡಕಾಗಿತ್ತು.
✅ ದ್ವಿತೀಯ ಪಿಯು ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ.
✅ ಮುಂದಿನ ವಾರದಿಂದ ಮೌಲ್ಯಮಾಪನ ಆರಂಭವಾಗುತ್ತದೆ.
✅ ಜೂನ್ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ.#PUCKarnataka
— B.C Nagesh (@BCNagesh_bjp) May 20, 2022
ಕರ್ನಾಟಕದಲ್ಲಿ ನಿನ್ನೆಯಷ್ಟೇ (ಮೇ 19) ಎಸ್ಎಸ್ಎಲ್ಸಿ ಫಲಿತಾಂಶಗಳು ಪ್ರಕಟವಾಗಿವೆ. ವಿದ್ಯಾರ್ಥಿಗಳು ಪಿಯುಸಿಗೆ ಕಾಲೇಜು ಅರಿಸಿಕೊಳ್ಳುವ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಜಾ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Fri, 20 May 22