ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದ 71 ವರ್ಷದ ಹಿರಿಯ ವಿದ್ಯಾರ್ಥಿ

| Updated By: ವಿವೇಕ ಬಿರಾದಾರ

Updated on: Oct 30, 2022 | 10:13 PM

71 ವರ್ಷದ ವಯಸ್ಸಿನಲ್ಲೂ ಮೂರು ವರ್ಷಗಳ ಕಾಲ ಕಾಲೇಜಿಗೆ ತೆರಳಿ ರಾಜ್ಯಕ್ಕೆ ಪಸ್ಟ್​ ರ್ಯಾಂಕ್​ ಪಡೆದಿದ್ದಾರೆ.

ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದ 71 ವರ್ಷದ ಹಿರಿಯ ವಿದ್ಯಾರ್ಥಿ
71 ವರ್ಷದ ನಾರಾಯಣ ಭಟ್
Follow us on

ವಿದ್ಯೆ ಸಂಪಾದನೆಗೆ ಯಾ ವಯಸ್ಸಾದರೇನು ಏಕಾಗ್ರತೆ ಮುಖ್ಯ, ಛಲ ಮುಖ್ಯ ಎಂದು ಸಾಭೀತು ಪಡಿಸಿದ್ದಾರೆ 71 ವರ್ಷ ವಯಸ್ಸಿನ ಹಿರಿಯರು. ವಯಸ್ಸು ದೇಹಕ್ಕೆ ಮಾತ್ರ, ಮನಸ್ಸಿಗಲ್ಲ ಎಂಬ ಮಾತನ್ನು ಸತ್ಯ ಮಾಡಿದ್ದಾರೆ. 71 ವರ್ಷದ ವಯಸ್ಸಿನಲ್ಲೂ ಮೂರು ವರ್ಷಗಳ ಕಾಲ ಕಾಲೇಜಿಗೆ ತೆರಳಿ ಪಾಠ ಕೇಳಿ ಪರೀಕ್ಷೆ ಬರೆದು, ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದು ಆಶ್ಚರ್ಯವಾದರು ಕೂಡ ಸತ್ಯ.

ಶಿರಸಿಯ ಆದರ್ಶ ನಗರದ ನಿವಾಸಿ ನಾರಾಯಣ ಭಟ್ (71) ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾ ಕೋರ್ಸ್​​ನಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದರು. ನಂತರ ಕಾರವಾರದ ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಸುಮಾರು 1993ರವರೆಗೆ ಕರ್ತವ್ಯ ನಿರ್ವಹಿಸಿ, ಬಳಿಕ ಗುಜರಾತ್​ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾದರು.

ತಮ್ಮ ನಿವೃತ್ತಿ ಜೀವನವನ್ನು ಶಿರಸಿಗೆ ಬಂದು ಕಳೆಯುತ್ತಿದ್ದಾರೆ. ಇವರ ಮಕ್ಕಳು ಕೂಡ ಇಂಜಿನಿಯರ್ಸ್​​ ಆಗಿ ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಮನೆಯಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಆಸೆ ಹುಟ್ಟಿದೆ. ಅದರಂತೆ ಮನೆಯವರ ಸಹಾಯದಿಂದ ಶಿರಸಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2019ರಲ್ಲಿ ಪ್ರವೇಶಾತಿ ಪಡೆದುಕೊಂಡಿದ್ದಾರೆ.

ಪ್ರಾರಂಭದಲ್ಲಿ ಅಕ್ಕಪಕ್ಕದವರ ಮಾತುಗಳಿಂದ ಕೊಂಚ ಇರಸು ಮುರಿಸುಗೊಂಡರೂ, ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ದಿನ ನಿತ್ಯ, ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿನ ತರಗತಿಗೆ ಹಾಜರಾಗಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಅನುಸರಿಸಿ ಕೊಂಡು ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಇವರ ಶ್ರದ್ಧೆ ಮತ್ತು ಶ್ರಮಕ್ಕೆ ಎಲ್ಲರೂ ಸಹಕರಿಸಿದ್ದಾರೆ.

ಕಾಲೇಜಿನಲ್ಲಿ ಕೊಡುವ ನಿತ್ಯದ ಹೋಮ್ ವರ್ಕ್ ತಪ್ಪದೇ ಮಾಡಿಕೊಂಡು, ಯಾವುದೇ ತಪ್ಪಿಲ್ಲದ ಹಾಗೆ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿಕೊಂಡು ಬರುವ ವಿದ್ಯಾರ್ಥಿಗಳ ಸಾಲಿನಲ್ಲಿ ಇವರು ಚುಣೊಯಲ್ಲಿದ್ದರು. ಜೊತೆಗೆ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್​​ಗೆ, ನಿತ್ಯ ತರಗತಿಗೆ ಹಾಜರಾಗಿ ಮೊದಲ ವರ್ಷದಲ್ಲಿ ಶೇ 91 ಅಂಕ ಗಳಿಸಿ ಪ್ರಥಮ ಸ್ಥಾನಗಳಿಸಿದ್ದರು. ನಂತರ ಅಂತಿಮವಾಗಿ 94.88 ಪ್ರತಿಶತ ಫಲಿತಾಂಶ ದಾಖಲಿಸಿ ಇಂದಿನ ಯುವ ವಿದ್ಯಾರ್ಥಿಗಳು ಸ್ಪೂರ್ತಿಯಾಗಿದ್ದಾರೆ.

ಇವರ ಬಗ್ಗೆ ಕಾಲೇಜಿನಲ್ಲಿ ಒಳ್ಳೆಯ ಅಭಿಪ್ರಾಯವಿದ್ದು ಇವರು ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದು ದಿನವೂ ತರಗತಿಗೆ ಗೈರಾಗದೆ, ಸಮವಸ್ತ್ರ ಇಲ್ಲದೆ ಯಾವತ್ತು ಹೋದವರೇ ಅಲ್ಲ. ವಿದ್ಯಾಭ್ಯಾಸದ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ರೀತಿಯಲ್ಲಿ ಸಾಧನೆ ಮಾಡುದ್ದಾರೆ.

ಇಳಿಯ ವಯಸ್ಸಿನಲ್ಲೂ, ಹುಮ್ಮಸ್ಸಿನಿಂದ ಯಂಗ್ ಆಗಿರುವ ಈ ವಿದ್ಯಾರ್ಥಿ ಸಿವಿಲ್ ಡಿಪ್ಲೋಮಾ ಪೂರ್ಣಗೊಳಿಸಿ ರಾಜ್ಯದಲ್ಲೇ ಫಸ್ಟ್ ರ್ಯಾಂಕ್ನಲ್ಲಿ ತೇರ್ಗಡೆಯಾಗಿ ಮಾದರಿಯಾಗಿದ್ದಾರೆ. ಇವರ ಸಾಧನೆಗೆ (ನ.2) ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ತಾಂತ್ರಿಕ ಶಿಕ್ಷಣ ಸಚಿವರು ಇವರನ್ನು ಗೌರವಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

ವರದಿ- ವಿನಾಯಕ ಟಿವಿ9 ಕಾರವಾರ