ವಿಜಯಪುರ: ಕಾಡುವ ಬಡತನ ಓದಿನ ಮೇಲೆ ಪರಿಣಾಮ ಬೀರುತ್ತದೆ. ಒಂದಷ್ಟು ಮಂದಿ ಅರ್ಧಕ್ಕೆ ಶಿಕ್ಷಣ ಬಿಟ್ಟರೆ, ಇನ್ನೊಂದಷ್ಟು ಮಂದಿ ಶಿಕ್ಷಣ ಪಡೆಯುತ್ತಾರೆ. ಸಾಧಿಸುವ ಛಲ ಇದ್ದರೆ ಯಾವ ಸಮಸ್ಯೆ ಬೇಕಾದರೂ ಮೆಟ್ಟಿನಿಲ್ಲಬಹುದು ಎಂಬುದಕ್ಕೆ ಎಸ್ಎಸ್ಎಲ್ಸಿ(SSLC)ಯಲ್ಲಿ ಪ್ರಥಮ ಸ್ಥಾನ ಪಡೆದ ವಿಜಯಪುರದ ಅಮಿತ್ ಮಾದರ(Amith Madara) ಸಾಕ್ಷಿ. ಹೌದು, ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಜಿಲ್ಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಅರಳಿದ ಪ್ರತಿಭೆ ಅಮಿತ್ ಮಾದರ, ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಕಡು ಬಡತನದಲ್ಲೂ ಕಷ್ಟಪಟ್ಟು ಓದಿದ ವಿದ್ಯಾರ್ಥಿ ಇವರು. ತಂದೆಯನ್ನು ಕಳೆದುಕೊಂಡ ಅಮಿತ್ ತಾಯಿy ಆರೈಕೆಯಲ್ಲಿಯೇ ಬೆಳೆಯುತ್ತಿದ್ದಾರೆ. ಇವರ ತಾಯಿ ಮಹಾದೇವಿ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಸೋದರ ಮಾವನ ಸಹಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಮಿತ್ ಅವರಿಗೆ ಹಿರಿಯ ಸಹೋದರಿ, ಸಹೋದರ ಇದ್ದಾರೆ.
ಅಮಿತ್ ಜೊತೆ ಮಾತನಾಡಿದ ಶಿಕ್ಷಣ ಸಚಿವ
SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಅಮಿತ್ ಮಾದರ ಅವರೊಂದಿಗೆ ಶಿಕ್ಷಣ ಸಚಿವ ನಾಗೇಶ ಅವರು ಮಾತುಕತೆ ನಡೆಸಿದರು. ಮೊಬೈಲ್ ಕರೆ ಮಾಡಿ ಪೂರ್ಣ ಅಂಕ ಪಡೆದ ಅಮೀತ್ ಮಾದರ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವರು, ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸದ ಕುರಿತು ಮಾತುಕತೆ ನಡೆಸಿದರು. ಇದೇ ವೇಳೆ ಮುಂದಿನ ಶಿಕ್ಷಣಕ್ಕೆ ಶುಭಹಾರೈಸಿದರು.
ಇದನ್ನು ಓದಿ: ಎಸ್ಎಸ್ಎಲ್ಸಿ ಫಲಿತಾಂಶ
ಸಚಿವರು ಕರೆ ಮಾಡಿ ಮಾತನಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ವಿದ್ಯಾರ್ಥಿ ಅಮೀತ್, ನಿತ್ಯ 7 ಗಂಟೆಗಳ ಕಾಲ ಓದುತ್ತಿದ್ದೆ. ಮುಂದೆ ವೈದ್ಯನಾಗೋ ಕನಸು ಕಟ್ಟಿಕೊಂಡಿರುವುದಾಗಿ ಹೇಳಿದರು. ಇದೇ ವೇಳೆ ಮಾತನಾಡಿದ ಅಮಿತ್ ಸೋದರ ಮಾವ, ಅಮೀತ್ ವಿದ್ಯಾಭ್ಯಾಸಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಾಯ ಮಾಡಬೇಕೆಂದು ಮನವಿ ಮಾಡಿದರು.
ಅಮಿತ್ ಸಾಧನೆಗೆ ಗ್ರಾಮಸ್ಥರ ಹರ್ಷ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅರಳಿದ ಗ್ರಾಮೀಣ ವಿದ್ಯಾರ್ಥಿ ಅಮಿತ್ ಮಾದರ ಅವರ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಅಮೀತ್ ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮದ ಮುಖಂಡರು, ಯುವಕರು ಹಾಗೂ ಶಿಕ್ಷಕರು. ಹೆಜ್ಜೆ ಹಾಕಿ ಕುಣಿದರು. ಜುಮನಾಳ ಗ್ರಾಮದ ಹೊರ ವಲಯದಲ್ಲಿರೋ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಅಮೀತ್ ಅವರನ್ನು ಸನ್ಮಾನಿಸಲಾಯಿತು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 4:06 pm, Thu, 19 May 22