NEET UG Results 2023: ರಾಜ್ಯದ ಟಾಪರ್, ರಾಷ್ಟ್ರೀಯ ಮಟ್ಟದಲ್ಲಿ 5 ನೇ ಸ್ಥಾನ ಪಡೆದ ಬೆಂಗಳೂರಿನ ಧ್ರುವ ಅಡ್ವಾಣಿ
2023-24ರ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಬೆಂಗಳೂರಿನ ಹುಡುಗ ಧ್ರುವ ಅಡ್ವಾಣಿ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
2023-24ರ ಶೈಕ್ಷಣಿಕ ವರ್ಷದ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Results 2023) ಬೆಂಗಳೂರಿನ ಹುಡುಗ ಧ್ರುವ ಅಡ್ವಾಣಿ (Dhruv Adwani) ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಂಗಳವಾರ (ಜೂನ್ 13) ತಡರಾತ್ರಿ ಬಿಡುಗಡೆಯಾದ NEET 2023 ಫಲಿತಾಂಶದಲ್ಲಿ ಬೆಂಗಳೂರಿನ ಜಿಆರ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಧ್ರುವ್ ಅಖಿಲ ಭಾರತ ಮಟ್ಟದಲ್ಲಿ 5 ನೇ ರ‍್ಯಾಂಕ್ (ಅಂಕ 715) ಗಳಿಸಿದ್ದಾರೆ. ಅವರು 12 ನೇ ತರಗತಿ CBSE ವಿಜ್ಞಾನ ಸ್ಟ್ರೀಮ್‌ನಲ್ಲಿ 99.4% ಗಳಿಸಿದ್ದಾರೆ ಮತ್ತು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ಸೇರುವ ಗುರಿ ಹೊಂದಿದ್ದಾರೆ.
ತಮ್ಮ ಸಂತಸವನ್ನು ಹಂಚಿಕೊಂಡ ಧ್ರುವ್, “ನಾನು ಅಧ್ಯಯನದಲ್ಲಿ ಎಂದಿಗೂ ನಿಗದಿತ ವೇಳಾಪಟ್ಟಿಯನ್ನು ಅನುಸರಿಸುವುದಿಲ್ಲ. ನಾನು ನನ್ನ ಪುಸ್ತಕಗಳನ್ನು ಮುಟ್ಟದ ದಿನಗಳು ಇದ್ದವು. ಆದರೆ ನಾನು ಪರೀಕ್ಷೆಗೆ ಕೆಲವು ದಿನಗಳಿದ್ದಾಗ 4 ರಿಂದ 5 ಗಂಟೆಗಳ ಕಾಲ ಓದಿದ್ದೇನೆ” ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕರ್ನಾಟಕದ ಮತ್ತೊಬ್ಬ ಬಾಲಕ ಅಖಿಲ ಭಾರತ ಮಟ್ಟದಲ್ಲಿ ಅಗ್ರ 50 ರ‍್ಯಾಂಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೈರೇಶ್ ಎಸ್.ಎಚ್ ಒಟ್ಟು 710 ಅಂಕಗಳೊಂದಿಗೆ ಅಖಿಲ ಭಾರತ 48 ನೇ ರ‍್ಯಾಂಕ್ ಗಳಿಸಿದ್ದಾರೆ.
ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳ (PwBD) ಕೋಟಾದ ಅಡಿಯಲ್ಲಿ, ಕರ್ನಾಟಕದ ಲಾವಣ್ಯ ಅವರು ಅಖಿಲ ಭಾರತ 1,018 ರ‍್ಯಾಂಕ್ ಗಳಿಸಿದ್ದಾರೆ. ನೀಟ್‌ಗೆ ಅರ್ಜಿ ಸಲ್ಲಿಸಿದ ಕರ್ನಾಟಕದ 1,31,318 ವಿದ್ಯಾರ್ಥಿಗಳ ಪೈಕಿ 75,248 ವಿದ್ಯಾರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಂವಹನ ತಿಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕರ್ನಾಟಕದಿಂದ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚು. ಕಳೆದ ವರ್ಷ ಈ ಸಂಖ್ಯೆ 72,262 ಆಗಿತ್ತು. ಪರಿಶಿಷ್ಟ ಪಂಗಡದ ವರ್ಗದ ಅಡಿಯಲ್ಲಿ, ಪಿ ಆರ್ ಸಚಿನ್ ಮತ್ತು ಚಯಾಂಕ್ ಮೂರ್ತೇನವರ್ ಕ್ರಮವಾಗಿ 7 ಮತ್ತು 9 ನೇ ರ‍್ಯಾಂಕ್‌ಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಂಡಿದ್ದಾರೆ. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನೀಟ್ ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ: ನೀಟ್ ಯುಜಿ ಫಲಿತಾಂಶ ಪ್ರಕಟ, ಈ ವೆಬ್ಸೈಟ್ ಮೂಲಕ ರಿಸಲ್ಟ್ ಪರಿಶೀಲಿಸಬಹುದು
ಈ ವರ್ಷ 704 ಅಭ್ಯರ್ಥಿಗಳು ಕನ್ನಡದಲ್ಲಿ ಬರೆಯಲು ಹೆಸರು ನೋಂದಾಯಿಸಿದ್ದರು. 8,81,967 ಪುರುಷ ಅಭ್ಯರ್ಥಿಗಳ ಪೈಕಿ 4,90,374 ಮಂದಿ ದೇಶಾದ್ಯಂತ ಅರ್ಹತೆ ಪಡೆದಿದ್ದಾರೆ. 11,56,618 ಮಹಿಳಾ ಅಭ್ಯರ್ಥಿಗಳ ಪೈಕಿ 6,55,599 ಮಂದಿ ಅರ್ಹತೆ ಪಡೆದಿದ್ದಾರೆ. 11 ತೃತೀಯಲಿಂಗಿಗಳ ಪೈಕಿ ಮೂವರು ಅರ್ಹತೆ ಪಡೆದಿದ್ದಾರೆ. ಮೇ 7 ರಂದು ದೇಶದ 499 ನಗರಗಳ 4,097 ವಿವಿಧ ಕೇಂದ್ರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ