
ಬದಲಾವಣೆ ಜಗದ ನಿಯಮ ಇದು ಸರ್ವಕಾಲಕ್ಕೂ ಸರ್ವ ವಿಚಾರಗಳಿಗೂ ಸರಿಹೊಂದುವ ಉಕ್ತಿ. ಮುಂಚೆ ಒಂದೈದು ವರುಷಗಳ ಹಿಂದೆ ಯುವ ಪೀಳಿಗೆಯಲ್ಲಿ ಉದ್ಯೋಗದ ಕುರಿತಾಗಿ ಇದ್ದಂತಹ ಭಾವನೆ ಇದೀಗ ಬೇರೆಯದೇ ಬಣ್ಣವನ್ನು ಹೊಂದುತ್ತಲಿದೆ. ಸಾಪ್ಟ್ ವೇರ್ ಇಂಜಿನಿಯರ್, ದೊಡ್ಡ ಕಂಪನಿಯಲ್ಲಿ ಕೆಲಸ ಬೇಕೆಂಬುದು ಹಲವರ ಜೀವನ ಏಕೈಕ ಗುರಿಯೆಂಬಂತಹ ವಿಚಾರವಿತ್ತು. ಆದರೀಗ ಕೊರೊನಾ ಎಲ್ಲಾ ಆಯಾಮದಲ್ಲೂ ಎಲ್ಲರ ಜೀವನ ಶೈಲಿ, ವಿಚಾರಧಾರೆಗಳನ್ನು ಭಾಗಶಃ ಸಂಪೂರ್ಣ ಬದಲು ಮಾಡಿದೆ ಎನ್ನುವುದಕ್ಕಿಂತಲೂ, ವಾಸ್ತವತೆಯ ಕುರಿತಂತೆ ಇರುವ ನೈಜತೆಯನ್ನು ಬಹಳ ಪರಿಣಾಮಕಾರಿಯಾಗಿ ಜನರ ಮನ ಮುಟ್ಟುವಂತೆ ತೋರಿದೆ ಎನ್ನುವುದು ಹೆಚ್ಚು ಸೂಕ್ತ.
ಕೊರೊನಾದಂತಹ ಮಹಾಮಾರಿಯ ಹೊಡೆತಕ್ಕೆ ಸಿಕ್ಕಿ ನಲುಗಿದ ಕಂಪನಿಗಳು, ಆ ಕಂಪನಿಯ ನಂಬಿದ ನೌಕರರು ಕೆಲಸ ಕಳೆದುಕೊಂಡು ಜೀವನವೇ ಸ್ಥಬ್ಧ ಅಥವಾ ವ್ಯರ್ಥ ಎನ್ನುವ ಸ್ಥಿತಿಯೆಂದರೇನೋ ಅತಿಶಯೋಕ್ತಿಯಲ್ಲ ಆದರೆ ಇಲ್ಲಿ ಮತ್ತೊಂದು ರೀತಿಯ ನೂತನ ಶಕೆ ಆರಂಭವಾಗಿದೆ. ಸರ್ಕಾರಿ ಕೆಲಸಗಳ ಕಡೆ ಯುವಕರು ಹೆಚ್ಚು ಒಲವನ್ನು ತೋರುತ್ತಿರುವುದು ಸಂತಸದ ಸಂಗತಿಯೇ ಸರಿ. ಖಾಸಗಿ ಕಂಪನಿಗಳ ನೌಕರಿ ಖಾಯಂ ಅಲ್ಲ ಎನ್ನುವ ವಿಚಾರವಂತೂ ಎಲ್ಲೆಡೆ ಮನೆಮಾತಾಗಿದೆ. ಇಲ್ಲಿ ಮತ್ತೊಂದು ಖುಷಿಪಡುವ ಸಂಗತಿಯೆಂದರೆ ಕೊರೊನಾ ಸಮಯದಲ್ಲಿ ಡಿಜಿಟಲ್ ಅತ್ಯಂತ ವೇಗವನ್ನು ಪಡೆದಿದೆ. ಇದು ಎಲ್ಲಾ ರಂಗಗಳಲ್ಲಿಯೂ ಈಗ ಅತ್ಯಂತ ಸರಳವಾಗಿ ಹಾಗೂ ಎಲ್ಲೆಡೆ ಲಭ್ಯವಿರುವ ಒಂದು ಉತ್ತಮ ಸೌಲಭ್ಯ.
ಒಂದೆರಡು ವರ್ಷ ಕಷ್ಟಪಟ್ಟು ಓದಿದರೆ ಸಾಕು ಆಡಳಿತಾತ್ಮಕ ಹುದ್ದೆಗಳ ಪಡೆಯಬಹುದು ಎಂಬುದು ಈಗ ಎಲ್ಲರ ಚಿಂತನೆಯ ನುಡಿಗಳು. ಇದು ಸತ್ಯವೂ ಹೌದು. ಆದರೆ ಈ ಸ್ಪರ್ಧಾಯುಗದಲ್ಲಿ ಸ್ಪರ್ಧಾಥ್ಮಕ ಪರೀಕ್ಷೆಗಳು ಎಂಬುದು ಅಂದುಕೊಂಡಷ್ಟು ಸುಲಭವೂ ಅಲ್ಲ ಹಾಗಂತ ಕಠಿಣ ಅಥವಾ ಅಸಾಧ್ಯ ಎಂಬುದು ಅಲ್ಲ. ಬದಲಿಗೆ ಇಲ್ಲಿ ಸಮಯ ಬಹಳ ಮುಖ್ಯ. ಇರುವ ಸಮಯದ ಸದುಪಯೋಗವಾದೆಡೆ ಸರ್ಕಾರಿ ನೌಕರಿ ನಮ್ಮ ಕಿಸೆಯಲ್ಲಿಯೇ ಇರುವುದು. ಕನಸು ಕಾಣುವುದು ಮುಖ್ಯವಲ್ಲ ಅದನ್ನು ನನಸಾಗಿಸುವುದು ಬಹಳ ಮುಖ್ಯ. ಇಲ್ಲಿ ಸರ್ಕಾರಿ ನೌಕರಿ ಉತ್ತಮ, ಎರಡು ವರ್ಷದ ಪರಿಶ್ರಮ ಇದ್ದರೆ ಸಾಕು ಎಂದು ಯೋಜನೆಗಳ ಹಾಕಿಕೊಂಡಿದ್ದರೆ ಯೋಜನೆ ಯೋಜನೆಯಾಗಿಯೇ ಉಳಿವುದು. ಇಂತಹ ಮುಖ್ಯ ನಿರ್ಧಾರಗಳೂ ನಮ್ಮ ಜೀವನದ ಸಂಪೂರ್ಣ ಮಾರ್ಗವನ್ನೇ ಬದಲಾಯಿಸುವುದು. ನಾವು ಸ್ಪರ್ಧಾತ್ಮಕ ಪರೀಕ್ಷೆಗಳ ತೆಗೆದುಕೊಳ್ಳಬೇಕು ಎಂಬ ದಿನದಿಂದಲೇ, ಒಂದೇ ವಿಚಾರವಾಗಿ ಪರಿಶ್ರಮ ಹಾಕಿದರೆ ಜೀವನದ ಕೊನೆಕ್ಷಣದವರೆಗೂ ನೆಮ್ಮದಿ ಪಡೆಯಬಹುದು.
ಈ ಸ್ಪರ್ಧಾತ್ಮಕ ಪರೀಕ್ಷೆ ಎಂಬ ಚಿಂತನದ ಮಂಥನ ಮಾಡಲೂ ಇದೀಗ ಡಿಜಿಟಲ್ ಆಯುಧಗಳೂ ಬೇಕಷ್ಟಿವೆ. ಇವು ಉಚಿತವಾಗಿ ಲಭ್ಯವಾಗುವುದು. ಇದರ ಸದುಪಯೋಗ ಮಾಡಿಕೊಂಡರೆ ಅತೀ ಕಡಿಮೆ ಖರ್ಚಿನಲ್ಲಿ ನಾವು ನಮ್ಮ ಗುರಿಯ ಮೆಟ್ಟಬಹುದು. ಹಲವಾರು ಬಡವಿದ್ಯಾರ್ಥಿಗಳು ಬಹಳ ಮಹದಾಸೆ ಹೊಂದಿದ್ದರೂ ಆರ್ಥಿಕತೆಯ ಕಾರಣದಿಂದ ಸ್ಪರ್ಧಾಯುಗದಿಂದ ದೂರ ಉಳಿಯುತ್ತಿದ್ದದ್ದನ್ನು ನಾವು ಕಂಡಿದ್ದೇವೆ. ಇದೀಗ ನಾನು ನಿಮಗೆ ಆನ್ ಲೈನ್/ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಹೇಗೆ ಸ್ಪರ್ಧಾ ಪರೀಕ್ಷೆಗಳಲ್ಲಿ ವಿಜಯ ಸಾಧಿಸಬಹುದು ಎಂಬ ಅಂಶಗಳನ್ನು ಮುಂದೆ ವಿವರಿಸಲಿದ್ದೇನೆ.
1. ಯಾವುದೇ ಸರ್ಕಾರಿ/ ಆಡಳಿತಾತ್ಮಕ ಪರೀಕ್ಷೆಗಳಿಗೆ ಮೊದಲು ನಾವು ಮಾಡಬೇಕಿರುವುದು ಅದು ಯಾವ ಪರೀಕ್ಷೆ, ಪರೀಕ್ಷೆಯ ನಂತರ ಆ ಹುದ್ದೆಯಲ್ಲಿ ನನ್ನ ಕರ್ತವ್ಯವೇನು ಹಾಗೂ ಪರೀಕ್ಷಾ ವಿಧಾನ ಹಾಗೂ ಪಠ್ಯಕ್ರಮದ ಕುರಿತು ತಿಳಿದುಕೊಳ್ಳುವುದು ಮಾಹಿತಿಗಳು ನಿಮಗೆ ಸರ್ಕಾರದ ಕೆಲವು ಅಧಿಕೃತ ವೆಬ್ ಸೈಟ್ ಗಳಲ್ಲಿ ಲಭ್ಯ. ಉದಾಹರಣೆಗೆ ಗೂಗಲ್ ನಲ್ಲಿ UPSC Syllabus & pattern-2021 ಹೀಗೆ ಯಾವುದೇ ಪರೀಕ್ಷೆಯಲ್ಲಿ ಹುದ್ದೆಯ ಹೆಸರಿನೊಂದಿಗೆ , ಆ ಹುದ್ದೆಗಳಿಗೆ ಪರೀಕ್ಷೆ ನಡೆಯುವ ವರ್ಷವನ್ನು ಟೈಪ್ ಮಾಡಿ, ಹುಡಿಕಿದರೆ ನಮಗೆ ಅಧಮ್ಯ ವೆಬ್ ಪೇಜ್ ಗಳೂ, ಮಾಹಿತಿಗಳು ಲಭ್ಯವಾಗುವವು.
2. ಸದರೀ ಪರೀಕ್ಷೆಗಳ ವಿಧಾನ, ಪಠ್ಯಕ್ರಮದ ನಂತರ, ಆ ಪರೀಕ್ಷೆಗಳಿಗೆ ಯಾವ ದಿನಾಂಕದಂದೂ ಅರ್ಜಿ ಹಾಕಲು ಕರೆಯುವರು ಹಾಗೂ ಅರ್ಜಿ ಹಾಕುವ ದಿನಾಂಕ ಘೋಷಣೆಯಾದ ೧೫ ದಿನದೊಳಗೆ ಅಗತ್ಯ ದಾಖಲೆಗಳ ಸಮೇತ ಆನ್ ಲೈನ್ ನಲ್ಲಿ ಅರ್ಜಿ ಹಾಕುವುದು. ಹಾಗೂ ಸಂಭವನೀಯ ಪರೀಕ್ಷಾ ದಿನಾಂಕಗಳ ಬಗ್ಗೆ ಮಾಹಿತಿ ಪಡೆದು ಪರೀಕ್ಷಾ ತಯಾರಿ ಪ್ರಾರಂಭಿಸುವುದು.
3. ಈಗಾಗಲೇ ತಿಳಿಸಿದ ಹಾಗೆ ಪರೀಕ್ಷಾ ತಯಾರಿಗೆ ಬೇಕಾದ ಪಠ್ಯಪುಸ್ತಕ, ನೋಟ್ಸ್, ತರಗತಿಗಳು ಆನ್ ಲೈನ್ ನಲ್ಲಿ ಉಚಿತವಾಗಿ ಹಾಗೂ ನಿರ್ಧರಿತ ಮೊತ್ತಕ್ಕೂ ಲಭ್ಯವಿದೆ. ಈ ಮಾಹಿತಿಯನ್ನು ಇನ್ನೂ ಸರಳವಾಗಿ ತಿಳಿಸುವ ಸಲುವಾಗಿ ಇಲ್ಲಿ ಕೆಲವೊಂದು ಆನ್ ಲೈನ್ ತಾಣಗಳ ಕುರಿತ ಮಾಹಿತಿ ಒದಗಿಸುತ್ತಿದ್ದೇನೆ. ಇವೇ ಅಂತಿಮವಲ್ಲಾ, ಇಂತಹ ಹಲವಾರು ಆನ್ ಲೈನ್ ತಾಣಗಳು ನಿಮಗೆ ಲಭಿಸುವವು. ಇದು ನಿಮ್ಮ ಕಿರು ಚಿತ್ರಣಕ್ಕಾಗಿ ಮಾತ್ರ:
Telegram:- For KPSC: SBK Kannada, ಚಾಣಕ್ಯ ಕಣಜ, Rao’s Academy, Mahitiloka.com, Gurudev IAS & KAS Academy ಹಾಗೂ ಇನ್ನೂ ನಿಮ್ಮ ನೆಚ್ಚಿನ ಅಥವಾ ಅತೀ ಉತ್ತಮ ಫಲಿತಾಂಶಗಳ ನೀಡುತ್ತಿರುವ ಸ್ಪರ್ಧಾತ್ಮಕ ಕೇಂದ್ರಗಳ ನೋಟ್ಸ್ ಟೆಲಿಗ್ರಾಮ್ ನಲ್ಲಿ ಹುಡುಕಿದರೆ ನಿಮಗೆ ಎಲ್ಲಾ ಪರೀಕ್ಷೆಗಳ ಮಾಹಿತಿ, ಪಠ್ಯಪುಸ್ತಕದ ಕೈಬರಹದ ನೋಟ್ಸ್, ನ್ಯೂಸ್ ಪೇಪರ್, ಮ್ಯಾಗಝೀನ್ ಸದರೀ ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಯೊಂದಿಗೆ, ಮಾದರೀ ಪ್ರಶ್ನೆಪತ್ರಿಕೆಗಳೂ ಲಭ್ಯವಿದೆ.
Instagram : iasworldofficial, general studies, kpsc times, upsc-dreams ಪೇಜ್ ಗಳನ್ನು ಫಾಲೋ ಮಾಡಿದರೆ ಅಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿರಲಿದೆ.
Youtube: ವಿಜಯೀಭವ, ಅಕ್ಷರ ಅಕಾಡೆಮಿ, GK Today, unacademy, gradeup, sadhana Academy ಅಲ್ಲದೇ ಇನ್ನೂ ಹತ್ತು ಹಲವು ಚಾನೆಲ್ ಗಳು ಲಭ್ಯವಿರಲಿದೆ. ಇಲ್ಲಿ ಪ್ರತ್ಯೇಕ ವಿಷಯ (subject/topic) ಅನ್ನ ಸರ್ಚ್ ಮಾಡಿದರೆ ಹಲವು vedio ತರಗತಿಗಳು ಲಭ್ಯವಿದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ಪ್ರಕಟಗೊಂಡು ಪರೀಷ್ಕೃತ ಪಠ್ಯಕ್ರಮಗಳನ್ನು ಸಂಪೂರ್ಣ ಓದಿದರೆ, ಹೆಚ್ಚಾಗಿ ಮತ್ಯಾವುದೇ ಪುಸ್ತಕಗಳ ಅಗತ್ಯವಿರುವುದಿಲ್ಲ. ಕೆ.ಎ.ಎಸ್ ಪರೀಕ್ಷೆಗೆ 6-10 ನೇ ತರಗತಿಯ ಸಮಾಜ ವಿಜ್ಞಾನ, ವಿಜ್ಞಾನ ಪಠ್ಯಪುಸ್ತಕಗಳ ಅಧ್ಯಯನ ಅತ್ಯಂತ ಮುಖ್ಯ. ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
6-10ನೇ ತರಗತಿಯ ಪಠ್ಯಪುಸ್ತಕ: ktbs.kar.nic.in
11-12ನೇ ತರಗತಿಯ ಪಠ್ಯಪುಸ್ತಕ: pue.kar.nic.in
IAS ಪರೀಕ್ಷೆಗೆ 6-12ನೇ ತರಗತಿಯ NCERT publications ನ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪಠ್ಯಪುಸ್ತಕಗಳು ncert.nic.in website ನಲ್ಲಿ ಉಚಿತ ಡೌನ್ ಲೋಡ್ ಗೆ ಲಭ್ಯವಿದೆ.
ಇದು ಬೆರಳ ತುದಿಯಲ್ಲೇ ಜಗವ ನೋಡುವ ಮಾಹಿತಿ ಯುಗ. ಮೊದಲೇ ಹೇಳಿದಂತೆ ಬದಲಾವಣೆ ಜಗದ ನಿಯಮ, ಕಾಲ-ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು. ಅದೇ ರೀತಿ ಶೈಕ್ಷಣಿಕ ಕ್ಷೇತ್ರದಲ್ಲಿಇದೀಗ ಬಾರಿ ಬದಲಾವಣೆ ಶುರುವಾಗಿದೆ. ಪುರಾತನದಿಂದ ನಡೆದು ಬಂದು ತರಗತಿ ಶಿಕ್ಷಣ ಎನ್ನುವ ಚಿಂತನೆಯೇ ಬದಲಾಗಿದೆ. ಇಂದು ಈ ಯುಗದಲ್ಲಿ ನಾವಿದ್ದಲ್ಲಿ, ನಮಗೆ ಬೇಕಾದಾಗ, ನಮಗೆ ಇಷ್ಟವಾಗುವ ರೀತಿಯಲ್ಲಿ ಶಿಕ್ಷಣವನ್ನು ಕಲಿಯಬಹುದಾಗಿದೆ. ಇದರ ಸದ್ಬಳಕೆಯನ್ನು ನಾವು ಸಹ ಅಳವಡಿಸಿಕೊಂಡಿದ್ದಲ್ಲಿ, ಇಂತಹ ಸ್ಪರ್ಧಾ ಕ್ಷೇತ್ರದಲ್ಲಿ ನಾವು ಸ್ಪರ್ಧೆಯಲ್ಲಿರಲು ಬಹಳ ಸಹಾಯಕಾರಿಯಾಗುವುದು. ಇಲ್ಲಿ ಸಮಯಕ್ಕೆ ಪ್ರಾಮುಖ್ಯತೆ. ಕಳೆದು ಹೋದ ಸಮಯ ಮತ್ತೆಂದು ತಿರುಗಿ ಬಾರದೆಂಬುದನ್ನು ಈಗಾಗಲೇ ನಾವು ಅರಿತಿದ್ದೇವೆ. ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳು ಎಂದಲ್ಲಿ ನಮ್ಮ ವಯಸ್ಸು ಸಹ ಬಹಳ ಮುಖ್ಯ. ವಯಸ್ಸಿನ ಮಿತಿ ಕುರಿತು, ಸದರೀ ಹುದ್ದೆಗಳಲ್ಲಿ ನಾವು ಕಾಣಬಹುದಾಗಿದೆ. ಇಲ್ಲಿ Quantity of Time ಗಿತಂಲೂ ಹೆಚ್ಚಾಗಿ Quality of Time ಬಹಳ ಸಹಾಯಕಾರಿ.
ಓದುವ ಮನಸ್ಸಿನಿಂದ 30 ನಿಮಿಷ ಓದಿದರೂ, ಅದು ಪರಿಣಾಮಾತ್ಮಕವಾಗಿರುವುದು. ಇಲ್ಲಿ ಪರೀಕ್ಷೆಗಳ ಪಠ್ಯಕ್ರಮದೊಂದಿಗೆ ಓದಿದರೆ ಇನ್ನೂ ಉತ್ತಮ ಹಾಗೂ ಪ್ರಯೋಜನಕಾರಿ. ಏಕೆಂದರೆ ಓದು ಎನ್ನುವುದು ಸಾಗರದಂತೆ ಎಷ್ಟು ಓದಿದರೂ ನಿಲ್ಲದು, ಆ ತೃಪ್ತಿ ನೀಗದು. ಆದರೆ ಇಲ್ಲಿ ನಮ್ಮ ಮುಖ್ಯ ಆಶಯ ಸರ್ಕಾರಿ ನೌಕರಿಯಾದ್ದರಿಂದ, ನಾವು ಯಾವ ಹುದ್ದೆಗೆ ಹೋಗುತ್ತಿದ್ದೇವೆ, ಅದಕೆಷ್ಟು ಓದಬೇಕೆಂಬುದನ್ನು ಮೊದಲೇ ಅರಿತಿರಬೇಕು. ಇದು ಕಡಿಮೆ ಸಮಯದಲ್ಲಿ ಹೆಚ್ಚು ಓದಲು ಸಹಕಾರಿಯಾಗುವುದು. ಇಲ್ಲಿ ಅತಿ ಪ್ರಮುಖವಾಗಿ ಹಿಂದಿನ ಪ್ರಶ್ನೆಪತ್ರಿಕೆಗಳ ಬಿಡಿಸುವುದು ಉತ್ತಮ. ಧನಾತ್ಮಕ ಚಿಂತನೆ ಅತ್ಯವಶ್ಯಕ. ಪರೀಕ್ಷೆ ಮುಂದೂಡಿಕೆ, ಪ್ರಶ್ನೆಪತ್ರಿಕೆಗಳ ಸೋರಿಕೆ ಇನ್ನು ಹಲವು ವಿಚಾರಗಳು ಜರುಗಿದರೂ, ನಾವು ನಮ್ಮ ನಂಬಿಕೆಯ ಕಳೆದುಕೊಳ್ಳಬಾರದು ಹಾಗೂ ಪರೀಕ್ಷೆಯ ಕೊನೆ ದಿನದವರೆಗೆ ತಯಾರಿ ಅವಶ್ಯ. ಮತ್ತೆ ಒಂದು ಪ್ರಯತ್ನ ವಿಫಲವಾದರೆ ಅಲ್ಲಿಗೆ ನಿಲ್ಲಿಸದೆ, ಪುನಃ ಪ್ರಯತ್ನಿಸುತ್ತಿರಬೇಕು. ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಸಾಧನೆ ಸಾಧ್ಯ. ಕೆಲವನಿಸೆಕೆಗಳ ಪ್ರಕಾರ ಕೆ.ಪಿ.ಎಸ್.ಸಿ ಗೆ 8 ತಿಂಗಳು, ಯು.ಪಿ.ಎಸ್.ಸಿ ಗೆ ಒಂದೂವರೆ ವರ್ಷ ತಯಾರಿ ಇದ್ದರೆ ಪರೀಕ್ಷೆಗಳ ಗೆಲ್ಲುವುದು ಖಚಿತ ಎಂದು. ಹೌದು ನಿರಂತರ ಓದು, ಪರಿಣಾಮಾತ್ಮಕ ಓದಿನಿಂದ ಇದು ಸಾಧ್ಯ. ಆದರೆ ಮುಂದೆ ಜಗತ್ತು ಮತ್ತಷ್ಟು ಸ್ಪರ್ಧಾತ್ಮಕಯೆಡೆಗೆ ಸಾಗುವುದರಿಂದ, ತಂತ್ರಜ್ಞಾನದ ಸಹಾಯದಿಂದ ತಯಾರಿಯೂ ಪದವಿ ಪೂರ್ವ ಹಂತದಲ್ಲೇ ಶುರುವಾದರೆ. ಪದವಿ ಮುಗಿದ ಎರಡು ವರ್ಷದೊಳಗೆ ಆಡಳಿತಾತ್ಮಕ ಹುದ್ದೆಯಲ್ಲೇ ನಮ್ಮ ಹೆಸರನ್ನು ಕಾಣಬಹುದು.
ಯಾವುದೋ ಸಂಸ್ಥೆ/ತರಬೇತಿಗೆ ಹೋದರೆ ಮಾತ್ರ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯ ಎಂಬ ಮಾತು ಈಗೀಗ ಕಡಿಮೆಯಾಗುತ್ತಿದೆ. ಹೌದು ಇದು ಮಾಹಿತಿಯುಗ ಎಲ್ಲರೂ ಅರ್ಜುನರಾಗುವ ಕಾಲ ಈಗ ಇಲ್ಲ. ಈಗ ಏಕಲವ್ಯರ ಕಾಲ. ತಮ್ಮ ಸ್ವ-ಪರಿಶ್ರಮ, ಸ್ವ-ಪ್ರಯತ್ನದಿಂದ ಸಾಧನೆಯ ಶಿಖರ ಏರಬಹುದು. “ಮುಂದೆ ಗುರಿ ಹಿಂದೆ ಗುರು ಇರಬೇಕೆಂಬ” ಗಾದೆ ಇದೀಗ “ಮುಂದೆ ಗುರಿ ಹಿಂದೆ ಗೂಗಲ್ ಇರಬೇಕು” ಎಂದು ಬದಲಾಗುವ ಕಾಲಕ್ಕೆ ಮುನ್ನುಡಿ ಹಾಕಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಗಾದೆ ಬದಲಾಗುವುದು ಖಚಿತ. ಯಾವುದೇ ಕಾರ್ಯದಲ್ಲಿ ತೊಡಗಿದರೂ, ಅಥವಾ ಗುರಿಯಹೊಂದಿದರು ಅದರೆಡೆಗೆ ಸಂಪೂರ್ಣ ಪ್ರೀತಿ ಹಾಗೂ ಪರಿಶ್ರಮವ ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧನೆಗೆ shortcut ಇಲ್ಲ. ಇದೊಂದು ನಿರಂತರ ಪರಿಶ್ರಮದ ಹಾದಿ. ಮತ್ತೇ ಮಾನವನೇ ಅಭಿವೃದ್ಧಿ ಪಡಿಸುತ್ತಿರುವ. ಈ ಜಗದಲ್ಲಿ ಯಾವುದೂ ಅಸಾಧ್ಯವಲ್ಲ UPSC ಕಷ್ಟ, ಬಹಳ ಬುದ್ದಿವಂತಿಕೆ ಬೇಕು, ತಯಾರಿಗೆ ಬಹಳ ಹಣವಿರಬೇಕು ನನ್ನಿಂದ ಸಾಧ್ಯವಾ ಎಂಬ ಆಲೋಚನೆಗಳಿಂದ ಮೊದಲು ಮುಕ್ತರಾಗಿ. UPSC/KPSC ವಿದ್ಯಾರ್ಹತೆಯ ಕಾಲಂನಲ್ಲಿ ಕೊಟ್ಟಿರುವಂತೆ ಯಾವುದೇ ಪದವಿ ಪಾಸಾದ ವಿದ್ಯಾರ್ಥಿಗಳು ಅರ್ಹರು. ಅಂದಮೇಲೆ ನೀವು ಪದವೀಧರರಾದರೆ ಸಾಕು. ನಾವೀಗಾಗಲೇ ಓದಿದ ಪಠ್ಯವನ್ನು ಈ ಪರೀಕ್ಷೆಗಳಿಗೆ ಕಡಿಮೆ ಸಮಯದಲ್ಲಿ, ಉದ್ದೇಶಪೂರ್ವಕವಾಗಿ ಪುನರ್ ಮನನ ಮಾಡುವುದೇ ಇದರ ಸಾಧನೆಯ ಗುಟ್ಟು.
ಸ್ಪರ್ಧಾತ್ಮಕ ಪರೀಕ್ಷೆ ಎಂದಾಕ್ಷಣ ನಮ್ಮ ತಲೆಯಲ್ಲಿ ಬರುವುದು IAS, KAS, IPS ಮಾತ್ರ. ಆದರೆ ಇವನ್ನೊರತು ಪಡಿಸಿ ಬಹಳಷ್ಟು ಹುದ್ದೆಗಳಿವೆ. PSI, PC, IFS, IB, Banking, FDA, SDA, PDO, SDAA, Grade 02, PWD, CBI ಇಲ್ಲಿ ಕೆಲವನ್ನು ಮಾತ್ರ ತಿಳಿಸಿದ್ದೇನೆ. ಇದರ ಕುರಿತು ಪೂರ್ಣ ಮಾಹಿತಿ ನಿಮಗೆ ವೆಬ್ ಅಥವಾ ಯೂಟ್ಯೂಬ್ ನಲ್ಲಿ ಸಿಗಬಹುದು. ಇದಲ್ಲದೆ ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಪ್ರೋತ್ಸಾಹಿಸುವ ಸಲುವಾಗಿ ಅನೇಕ ವಿಶ್ವವಿದ್ಯಾಲಯಗಳು ಉಚಿತ ಸ್ಪರ್ಧಾತ್ಮಕ ತರಬೇತಿಗಳನ್ನು ನೀಡುತ್ತಿದ್ದು, ನೀವು ನಿಮ್ಮ ಸನಿಹದ ವಿವಿಯಲ್ಲಿ ವಿಚಾರಿಸಿ ಇದರ ಸದುಪಯೋಗ ಪಡೆದುಕೊಳ್ಳಿ. ನಮ್ಮ ಸರ್ಕಾರವೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಇಂತಿಷ್ಟು ಮೊತ್ತವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದೆ. ಮತ್ತೂ ಖಾಸಗಿ ಕೋಚಿಂಗ್ ಸೆಂಟರ್ ಗಳು ೩ ತಿಂಗಳ ಉಚಿತ ಸ್ಪರ್ಧಾತ್ಮಕ ತರಬೇತಿಗಳನ್ನು ನೀಡುತ್ತಿದ್ದು, ಸಾಧ್ಯವಾದರೆ ಇಂತಹ ಶಿಬಿರಗಳಿಗೆ ಹಾಜರಾಗಿ. ಅಲ್ಲಿ ನಿಮಗೆ ಸರ್ಕಾರಿ ಹುದ್ದೆಗಳ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಚಿತ್ರಣ ನೀಡುವರು.
ಉತ್ತಮ ಸಮಾಜಕ್ಕೆ, ಉತ್ತಮ ಆಡಳಿತಗಾರರ ಅಗತ್ಯತೆ ಅತ್ಯವಶ್ಯವಾಗಿದೆ. ಇದೇ ನಿಟ್ಟಿನಲ್ಲಿ ಛಲಬಿಡದೆ, ತಂತ್ರಜ್ಞಾನದ ಸಹಾಯದಿಂದ ನಿಮ್ಮ ಉತ್ತಮ ಸಮಾಜಕ್ಕೆ, ಉತ್ತಮ ಆಡಳಿತಗಾರರ ಅಗತ್ಯತೆ ಅತ್ಯವಶ್ಯವಾಗಿದೆ. ಇದೇ ನಿಟ್ಟಿನಲ್ಲಿ ಛಲಬಿಡದೆ, ತಂತ್ರಜ್ಞಾನದ ಸಹಾಯದಿಂದ ನಿಮ್ಮ ತಯಾರಿಯನ್ನು ಇಂದೇ ಆರಂಭಿಸಿ. ನೀವೂ ಆಡಳಿತಾಧಿಕಾರಿಗಳಾಗಲು ಅತ್ಯರ್ಹರು. ಮನಸ್ಸಿದ್ದರೆ ಮಾರ್ಗವುಂಟು ಇದರ ನುಡಿಯಂತೆ ಮಾರ್ಗವು ನಿಮ್ಮ ಅಂಗೈನಲ್ಲೇ ಇದೇ. ಮೊಬೈಲ್ ನಲ್ಲೇ ಎಲ್ಲಾ ಮಾರ್ಗಗಳೂ ಲಭ್ಯ. ಆಯ್ಕೆ ನಿಮ್ಮದು.
ವಿಶೇಷ ಬರಹ: ಪವಿತ್ರಾ, ಕೋಲಾರ (ಹವ್ಯಾಸಿ ಬರಹಗಾರ್ತಿ)