ದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶವನ್ನು ಇಂದು (ಜುಲೈ 30) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಿದೆ. 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವು (CBSE Class 12 Result 2021) ಬೋರ್ಡ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗಲಿದ್ದು, cbseresults.nic.in ಅಥವಾ digilocker.gov.in ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಜತೆಗೆ ಡಿಜಿಲಾಕರ್ ಆ್ಯಪ್ನಲ್ಲಿ ಕೂಡಾ ಫಲಿತಾಂಶ ನೋಡಬಹುದಾಗಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಲಗತ್ತಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ಈ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ಮಾಹಿತಿ ನೀಡಿದ್ದು, 12ನೇ ತರಗತಿ ಫಲಿತಾಂಶವನ್ನು ಅಪರಾಹ್ನ 2 ಗಂಟೆಗೆ ಪ್ರಕಟಿಸುವುದಾಗಿ ಹೇಳಿದೆ.
ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ದೃಢೀಕರಣ ಪತ್ರ, ಅಂಕಪಟ್ಟಿ, ವಲಸೆ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳು ಡಿಜಿಲಾಕರ್ನಲ್ಲಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಡಿಜಿಲಾಕರ್ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಶೈಕ್ಷಣಿಕ ವಿಭಾಗದಲ್ಲಿ (ಎಜುಕೇಶನ್ ಸೆಕ್ಷನ್) ಸಿಬಿಎಸ್ಇ ಎಂಬ ಆಯ್ಕೆ ಇರಲಿದ್ದು ಅಲ್ಲಿಂದ ಇವುಗಳನ್ನು ಪಡೆಯಬಹುದಾಗಿದೆ. ಗಮನಾರ್ಹ ಅಂಶವೆಂದರೆ ವಲಸೆ ಪ್ರಮಾಣಪತ್ರಕ್ಕೆ ವಿಶೇಷ ಕೋರಿಕೆ ಸಲ್ಲಿಸಿದಲ್ಲಿ ಮಾತ್ರ ಅದರ ಮುದ್ರಿತ ಪ್ರತಿಯನ್ನು ನೀಡಲಿದೆ. ಉಳಿದಂತೆ ತುರ್ತು ಅಗತ್ಯಕ್ಕೆ ಡಿಜಿ ಲಾಕರ್ನಿಂದಲೇ ಡೌನ್ಲೋಡ್ ಮಾಡಿಕೊಳ್ಳಬೇಕಿದೆ.
ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಈ ವರ್ಷ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಪರ್ಯಾಯ ಮೌಲ್ಯಮಾಪನ ನೀತಿಯಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತಿದ್ದು, ಇಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲು ಸಿಬಿಎಸ್ ಮಂಡಳಿ ಮುಂದಾಗಿದೆ. ಇಂದಿನ ಫಲಿತಾಂಶದ ಬಗ್ಗೆ ಯಾವುದೇ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಪಡೆಯಲು ಅವಕಾಶವನ್ನೂ ನೀಡಲಾಗಿದೆ.
CBSE Class XII Result to be announced today at 2 P.M.#ExcitementLevel?%#CBSEResults #CBSE pic.twitter.com/eWf3TUGoMH
— CBSE HQ (@cbseindia29) July 30, 2021
ಈಗಾಗಲೇ ಇದೇ ಮಾದರಿಯಲ್ಲಿ ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ದ್ವಿತೀಯ ಪಿಯುಸಿಯಲ್ಲಿ ಈ ಬಾರಿ 6,66,497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 3,35,138 ವಿದ್ಯಾರ್ಥಿಗಳು, 3,31,359 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಆಗಿದ್ದಾರೆ. 4,50,706 ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ ಹಾಗೂ 2,52,056 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ. 1,47,055 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 68,729 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
(CBSE Class 12 Result 2021 to be announced today afternoon 2 pm here is the details)