
ಕೋಲ್ಕತ್ತಾ: 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಮಗನ ಬಹುದಿನಗಳ ಕನಸನ್ನು ತಂದೆಯೊಬ್ಬರು ಭರ್ಜರಿಯಾಗಿ ನನಸು ಮಾಡಿದ್ದಾರೆ. ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯ ಗಾಲ್ಸಿ ಪ್ರದೇಶದ ಪರಜ್ ನಿವಾಸಿ ಹಾಗೂ ಉದ್ಯಮಿ ಶಂಸುದ್ದೀನ್ ಮಿದ್ಯ ಅವರು ತಮ್ಮ ಮಗ ಮೊಹಮ್ಮದ್ ತಲ್ಹಾಗೆ ಬರೋಬ್ಬರಿ 2.30 ಕೋಟಿ ರೂ. ಮೌಲ್ಯದ ‘BMW M4 ಕಾಂಪಿಟೇಶನ್’ (BMW M4 Competition) ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಉದ್ಯಮಿ ಶಂಸುದ್ದೀನ್ ಮಿದ್ಯ ಅವರ ಪುತ್ರ ಮೊಹಮ್ಮದ್ ತಲ್ಹಾ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ನಡೆದ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತಲ್ಹಾ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾನೆ. ಮಗನ ಈ ಸಾಧನೆಯನ್ನು ವಿಶೇಷವಾಗಿ ಅಭಿನಂದಿಸಲು ಬಯಸಿದ ತಂದೆ, ಆತನ ಬಹುದಿನಗಳ ಕನಸಾಗಿದ್ದ ದುಬಾರಿ ಕಾರನ್ನು ಕೊಡಿಸಲು ನಿರ್ಧರಿಸಿದರು. ಅದರಂತೆ ತಕ್ಷಣವೇ ಮುಂಬೈಗೆ ತೆರಳಿದ ಶಂಸುದ್ದೀನ್, ಸುಮಾರು 2.30 ಕೋಟಿ ರೂ. ಮೌಲ್ಯದ ಹೊಸ BMW M4 ಕಾಂಪಿಟೇಶನ್ ಕಾರನ್ನು ಖರೀದಿಸಿ ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆಯಾಗಿ ಸಿಕ್ಕಿದ್ದರೂ, ಬಾಲಕ ತಲ್ಹಾ ತನ್ನ ಓದಿನ ಮೇಲಿನ ಗಮನವನ್ನು ಕಳೆದುಕೊಂಡಿಲ್ಲ. “ನನಗೆ ಸದ್ಯಕ್ಕೆ ನನ್ನ ವಿದ್ಯಾಭ್ಯಾಸವೇ ಮೊದಲ ಆದ್ಯತೆ. ಚೆನ್ನಾಗಿ ಓದುವುದರತ್ತ ಗಮನ ಹರಿಸುತ್ತೇನೆ” ಎಂದು ತಲ್ಹಾ ಹೇಳಿದ್ದಾನೆ. ಅಪ್ರಾಪ್ತನಾಗಿರುವುದರಿಂದ ತಾನೇ ಕಾರು ಚಲಾಯಿಸದೆ, ವಾರಕ್ಕೊಮ್ಮೆ ತಂದೆ ಕಾರು ಚಲಾಯಿಸುವಾಗ ಅವರ ಪಕ್ಕದ ಸೀಟಿನಲ್ಲಿ ಕುಳಿತು ತನ್ನ ಕನಸಿನ ಕಾರಿನ ಪಯಣವನ್ನು ಆನಂದಿಸುವುದಾಗಿ ಆತ ಸಂತಸ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!
9ನೇ ತರಗತಿಯ ಪರೀಕ್ಷೆಯ ಫಲಿತಾಂಶಕ್ಕೆ 2.30 ಕೋಟಿ ರೂ. ಮೌಲ್ಯದ ಕಾರು ಉಡುಗೊರೆ ನೀಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಗನ ಆಸೆ ಈಡೇರಿಸಿದ ತಂದೆಯ ಪ್ರೀತಿಯ ಜೊತೆಗೆ, ಇಷ್ಟು ದುಬಾರಿ ಉಡುಗೊರೆ ಸಿಕ್ಕರೂ ಓದಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂಬ ತಲ್ಹಾ ಅವರ ಪ್ರಬುದ್ಧ ಮಾತುಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ