IISc: ಜಂಟಿ ಸಂಶೋಧನೆಗಾಗಿ ಐಐಎಸ್ಸಿಯೊಂದಿಗೆ ನೌಕಾಪಡೆ ಒಪ್ಪಂದ
‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಬೆಂಗಳೂರು: ಭಾರತೀಯ ನೌಕಾಪಡೆಯು (Indian Navy) ವೈಮಾನಿಕ ಕ್ಷೇತ್ರದಲ್ಲಿ ವೈವಿಧ್ಯಮಯ ಸಂಶೋಧನೆಗಾಗಿ (Aviation Research) ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (Indian Institute of Science – IISc) ಒಪ್ಪಂದ ಮಾಡಿಕೊಂಡಿದೆ. ‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ನೌಕಾಪಡೆಯ ತಂತ್ರಜ್ಞರು ಐಐಎಸ್ಸಿಯಲ್ಲಿರುವ ವಿಷಯ ತಜ್ಞರೊಂದಿಗೆ ನೇರವಾಗಿ ಚರ್ಚಿಸಲು, ಜಂಟಿಯಾಗಿ ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಒಪ್ಪಂದ ನೆರವಾಗಲಿದೆ ಎಂದು ನೌಕಾಪಡೆ ಮತ್ತು ಐಐಎಸ್ಸಿ ಹೊರಡಿಸಿರುವ ಜಂಟಿ ಹೇಳಿಕೆಯು ತಿಳಿಸಿದೆ.
ವೈಮಾನಿಕ ವಿನ್ಯಾಸ ಮತ್ತು ತಾಂತ್ರಿಕ ಶಿಕ್ಷಣ, ಪ್ರೊಪಲ್ಷನ್, ಉಕ್ಕಿನ ತಂತ್ರಜ್ಞಾನ, ಖನಿಜ ಮತ್ತು ಭೌತ ವಿಜ್ಞಾನ, ಲೋಹ ಅಥವಾ ಯಾವುದೇ ಸವೆಯುವಿಕೆಯ ಅಧ್ಯಯನ, ಸೆನ್ಸಾರ್ಗಳು ಮತ್ತು ಇನ್ಸ್ಟ್ರುಮೆಂಟೇಶನ್, ಪರಿಸರ ವಿಜ್ಞಾನ ಮತ್ತು ಎಂಜಿನಿಯರಿಂಗ್, ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್, ನ್ಯಾನೊ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಷ್ಲೇಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಐಐಎಸ್ಸಿ ಮತ್ತು ನೌಕಾಪಡೆಯು ಮುಂದಿನ ದಿನಗಳಲ್ಲಿ ಜಂಟಿಯಾಗಿ ಸಂಶೋಧನೆ ನಡೆಸಲಿವೆ.
ಐಐಎಸ್ಸಿಯ ಬೋಧಕರು ಮತ್ತು ನೌಕಾಪಡೆ ಅಧಿಕಾರಿಗಳ ನಡುವೆ ಅರ್ಥಪೂರ್ಣ, ನಿಯಮಿತ ಸಂವಾದಕ್ಕೂ ಈ ಒಪ್ಪಂದವು ಅವಕಾಶ ಕಲ್ಪಿಸಿಕೊಡಲಿದೆ. ಜ್ಞಾಪನಾ ಪತ್ರಕ್ಕೆ (Memorandum of Understanding – MoU) ಐಐಎಸ್ಸಿ ರಿಜಿಸ್ಟ್ರಾರ್ ಕ್ಯಾಪ್ಟನ್ ಶ್ರೀಧರ್ ವಾರಿಯರ್, ನೌಕಾಪಡೆಯ ಕ್ಯಾಪ್ಟನ್ ಪಿ.ವಿನಾಯಗನ್ ಅವರು ಸಹಿ ಹಾಕಿದರು. ಈ ವೇಳೆ ನೌಕಾಪಡೆಯ ಹಿರಿಯ ಅಧಿಕಾರಿಗಳಾದ ರೇರ್ ಅಡ್ಮಿರಲ್ ದೀಪಕ್ ಬನ್ಸಾಲ್, ಕಮೋಡರ್ ರಾಜಾ ವಿನೋದ್ ಉಪಸ್ಥಿತರಿದ್ದರು.
Published On - 1:57 pm, Sun, 31 July 22