3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

|

Updated on: Jun 22, 2023 | 2:40 PM

3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.

3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ(government Schools) ಮೂಲ ಸೌಕರ್ಯ ಕೊರತೆಗಳಿರುವ(Basic needs) ಬಗ್ಗೆ 2013 ರಿಂದಲೂ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ (Karnataka High Court) ಶಾಲೆಗಳಲ್ಲಿನ ಮೂಲ ಸೌಕರ್ಯ ಕೊರತೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಕಾಲಮಿತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶದ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಸರ್ಕಾರ ಇಂದು ವರದಿ ಸಲ್ಲಿಸಿದೆ. ವರದಿಯ ಜೊತೆಗೆ ಸಲ್ಲಿಸಲಾಗಿದ್ದ ಶೌಚಾಲಯಗಳ ಫೋಟೋ ಗಮನಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರವರಿದ್ದ ವಿಭಾಗೀಯ ಪೀಠ ಶಾಲೆಗಳಲ್ಲಿ ನೀರು, ಶೌಚಾಲಯಗಳ ದುಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: 1 ರಿಂದ 10 ಕ್ಲಾಸ್ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್​ ಭಾರ ತಗ್ಗಿಸುವಂತೆ ಆದೇಶ: ಬ್ಯಾಗ್ ತೂಕ ಎಷ್ಟಿರಬೇಕು? ಇಲ್ಲಿದೆ ವಿವರ

ಶೌಚಾಲಯಗಳ ಫೋಟೋ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ. ಶೌಚಾಲಯಗಳು ದುಸ್ಥಿತಿಯಲ್ಲಿವೆ, ಗಿಡಬಳ್ಳಿ ಬೆಳೆದಿವೆ. ಅಧಿಕಾರಿಗಳು ತಮ್ಮ ಮನೆ ಶೌಚಾಲಯವನ್ನೂ ಹೀಗೇ ಇಟ್ಟುಕೊಳ್ಳುತ್ತಾರಾ? ಸರ್ಕಾರ ಸಲ್ಲಿಸಿರುವ ವರದಿ ಬೇಸರದಾಯಕ, ಆಘಾತಕಾರಿಯಾಗಿದೆ. ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರಲಾಗುತ್ತಿದೆ ಎಂದು ವರದಿಯಲ್ಲಿದೆ. ಕುಡಿಯುವ ನೀರಿನ ಪೂರೈಕೆ ಮಾಡಲೂ ಸರ್ಕಾರಕ್ಕೆ ಸಾಧ್ಯವಿಲ್ಲವೇ. ಮೂಲಭೂತ ಸೌಕರ್ಯ ವಿಲ್ಲದ ಶಾಲೆಗಳಿಂದ ಉತ್ತಮ ಶಿಕ್ಷಣ ಸಾಧ್ಯವೇ? ಎಂಥ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಇಂತಹ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು? ಇದಕ್ಕೆಲ್ಲಾ ಯಾರು ಜವಾಬ್ದಾರಿ ಯಾರು ಉತ್ತರದಾಯಿ? ಅಧಿಕಾರಿಗಳ ಚಲ್ತಾ ಹೈ ಮನಸ್ಥಿತಿ ಸಹಿಸಲು ಸಾಧ್ಯವಿಲ್ಲ. ಇಂತಹ ಶಾಲೆಗೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಳಿಸುತ್ತಾರಾ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ

2013 ರಲ್ಲಿ ಈ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದಾಗಿನಿಂದಲೂ ರಿಂದ 3 ಸರ್ಕಾರ ಬದಲಾಗಿವೆ. ಆದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪವಾದರೂ ಕಾಳಜಿ, ಗಂಭೀರತೆ ಇರಬೇಕು. ಪರಿಸ್ಥಿತಿ ನೋಡಿ ನಮಗೆ ನೋವಾಗಿದೆ, ಖಿನ್ನರಾಗಿದ್ದೇವೆ. ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕವಾಗಿದೆ . ಯಾವ ಪೋಷಕರೂ ಇಂತ ಶಾಲೆಗೆ ಮಕ್ಕಳನ್ನು ಕಳಿಸಲ್ಲ . ಹೆಸರಿಗೆ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ . ಸರ್ಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಿದ್ದಂತಿದೆ ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರಿದ್ದ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಕ್ಕಳನ್ನು ಅವರ ಹಕ್ಕಿನಿಂದ ವಂಚಿತಗೊಳಿಸಲಾಗುತ್ತಿದೆ . 3 ತಿಂಗಳಲ್ಲಿ ಹೊಸದಾಗಿ ಸರ್ವೆ ನಡೆಸಿ ವರದಿ ಸಲ್ಲಿಸಬೇಕು. ಹೈಕೋರ್ಟ್ ನ ಆದೇಶದ ವಿವರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಲುಪಿಸುವಂತೆಯೂ ಹೈಕೋರ್ಟ್ ನಿರ್ದೇಶನ ನೀಡಿದೆ.

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ವಿಚಾರದ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿರುವ ಹೈಕೋರ್ಟ್ ಕಾಲಕಾಲಕ್ಕೆ ಸರ್ಕಾರದಿಂದ ವರದಿ ಕೇಳುತ್ತಿದೆ. ಶಾಲೆಗಳಿಂದ ಹೊರಗುಳಿದ ವಿದ್ಯಾರ್ಥಿಗಳ ಬಗ್ಗೆಯೂ ವರದಿ ಪಡೆಯುತ್ತಿದೆ. ಹೈಕೋರ್ಟ್ ಗೆ ಸಲಹೆ ನೀಡಲು ಅಮೈಕಸ್ ಕ್ಯೂರಿಯಾಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ರನ್ನು ನೇಮಕಗೊಳಿಸಲಾಗಿದೆ. ಕಳೆದ ತಿಂಗಳು ವರದಿ ನೀಡಿದ್ದ ಅಮೈಕಸ್ ಕ್ಯೂರಿ 2901 ಮಕ್ಕಳು ಇನ್ನೂ ಶಾಲೆಯಿಂದ ಹೊರಗುಳಿದಿದ್ದಾರೆ. 4122 ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. 464 ಶಾಲೆಗಳಲ್ಲಿ ಶೌಚಾಲಯ ಇಲ್ಲ, 87 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ ಎಂದು ವರದಿ ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆದಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ